ವಿಕ್ರಂ (Chiyaan Vikram) ನಟನೆಯ ಪೊನ್ನಿಯಿನ್ ಸೆಲ್ವನ್ 2 (Ponniyin Selvan 2) ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೆ ತಮ್ಮ ಮುಂದಿನ ಸಿನಿಮಾದತ್ತ ವಿಕ್ರಂ ಗಮನ ವಹಿಸಿದ್ದಾರೆ. ಪಾತ್ರಕ್ಕಾಗಿ ಏನು ಬೇಕಾದರೂ ಮಾಡುವ, ಪಾತ್ರಕ್ಕಾಗಿ ಸಂಪೂರ್ಣವಾಗಿ ತೊಡಗಿಕೊಳ್ಳುವ ವಿಕ್ರಂ ಇದೇ ಕಾರಣಕ್ಕೆ ಹಲವು ಬಾರಿ ತಮ್ಮ ದೇಹವನ್ನು ಘಾಸಿಕೊಳಿಸಿಕೊಂಡಿದ್ದಾರೆ. ಇದೀಗ ತಂಗಲಾನ್ (Thangalaan) ಸಿನಿಮಾದ ಚಿತ್ರೀಕರಣದಲ್ಲಿ ವಿಕ್ರಂ ತೊಡಗಿಕೊಂಡಿದ್ದು ಸಿನಿಮಾದ ದೃಶ್ಯವೊಂದರ ಚಿತ್ರೀಕರಣದ ಸಮಯದಲ್ಲಿ ನಡೆದ ಅವಘಡದಲ್ಲಿ ವಿಕ್ರಂಗೆ ತೀವ್ರ ಪೆಟ್ಟಾಗಿದೆ.
ತಂಗಲಾನ್ ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದ್ದು ಕೆಲವು ಇಂಟೆನ್ಸ್ ಆಕ್ಷನ್ ದೃಶ್ಯಗಳ ಚಿತ್ರೀಕರಣ ಬಾಕಿ ಇದೆ. ಪೊನ್ನಿಯಿನ್ ಸೆಲ್ವನ್ 2 ಸಿನಿಮಾದ ಪ್ರಮೋಷನ್ಗಾಗಿ ತಂಗಲಾನ್ ಸಿನಿಮಾದ ಚಿತ್ರೀಕರಣಕ್ಕೆ ಬ್ರೇಕ್ ನೀಡಿದ್ದ ವಿಕ್ರಂ, ಪೊನ್ನಿಯಿನ್ ಸೆಲ್ವನ್ 2 ಬಿಡುಗಡೆ ಆದ ಬೆನ್ನಲ್ಲೆ ತಂಗಲಾನ್ ಸಿನಿಮಾ ಸೆಟ್ ಸೇರಿಕೊಂಡಿದ್ದರು. ಸಿನಿಮಾದ ಆಕ್ಷನ್ ದೃಶ್ಯವೊಂದರ ಚಿತ್ರೀಕರಣ ಮಾಡುವಾಗ ಆಯತಪ್ಪಿ ಬಿದ್ದು ವಿಕ್ರಂರ ಪಕ್ಕೆಲುಬಿಗೆ ಗಂಭೀರ ಪೆಟ್ಟು ಬಿದ್ದಿದೆ. ಕೂಡಲೇ ವಿಕ್ರಂರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ವಿಕ್ರಂರ ಪಕ್ಕೆಲುಬು ಮುರಿದಿದ್ದು ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಮತ್ತೆ ತಂಗಲಾನ್ ಸಿನಿಮಾ ಚಿತ್ರೀಕರಣಕ್ಕೆ ವಿರಾಮ ನೀಡಲಾಗಿದೆ.
ವಿಕ್ರಂಗೆ ಹೀಗೆ ಸಿನಿಮಾ ಸೆಟ್ನಲ್ಲಿ ಗಾಯಗಳಾಗುತ್ತಿರುವುದು ಇದು ಮೊದಲಲ್ಲ. ಈ ಹಿಂದೆಯೂ ಕೆಲವು ಬಾರಿ ಆಕ್ಷನ್ ದೃಶ್ಯಗಳ ಚಿತ್ರೀಕರಣದ ಸಮಯದಲ್ಲಿ ವಿಕ್ರಂಗೆ ಗಾಯಗಳಾಗಿದ್ದವು. ಕಾಸಿ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಕುರುಡನ ಪಾತ್ರ ಮಾಡುವಾಗ ಕಣ್ಣಿಗೆ ತೀವ್ರ ಹಾನಿಯನ್ನು ವಿಕ್ರಂ ಮಾಡಿಕೊಂಡಿದ್ದರು. ಚಿತ್ರರಂಗಕ್ಕೆ ಬಂದಾಗಲು ಬೈಕ್ ಅಪಘಾದಲ್ಲಿ ಒಮ್ಮೆ ಗಂಭೀರವಾಗಿ ಗಾಯಗೊಂಡಿದ್ದ ವಿಕ್ರಂ ಸುಮಾರು ಮೂರು ವರ್ಷಗಳ ಕಾಲ ವೀಲ್ಚೇರ್ ಮೇಲೆ ಸಮಯ ಕಳೆದಿದ್ದರು. ವಿಕ್ರಂಗೆ ಗಾಯಗಳು ಹೊಸದಲ್ಲ, ವಿಶ್ರಾಂತಿ ಹೊಸದಷ್ಟೆ.
ಇದನ್ನೂ ಓದಿ:Chiyaan Vikram: ಹೇಗಿದ್ದ ವಿಕ್ರಮ್ ಹೇಗಾದ್ರು ನೋಡಿ; ಬೆರಗು ಮೂಡಿಸಿದ ‘ತಂಗಲಾನ್’ ಮೇಕಿಂಗ್ ವಿಡಿಯೋ
ವಿಕ್ರಂ ನಟಿಸುತ್ತಿರುವ ತಂಗಲಾನ್ ಸಿನಿಮಾವನ್ನು ಪಾ ರಂಜಿತ್ ನಿರ್ದೇಶನ ಮಾಡುತ್ತಿದ್ದಾರೆ. ದಲಿತ ಸಮುದಾಯಗಳ ಬಗೆಗಿನ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು ಇದೊಂದು ಪೀರಿಯಡ್ ಡ್ರಾಮಾ ಆಗಿದೆ. ಸಿನಿಮಾದಲ್ಲಿ ಐಶ್ವರ್ಯಾ ಮೋಹನ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ಟೀಸರ್, ಮೇಕಿಂಗ್ ವಿಡಿಯೋಗಳು ಈಗಾಗಲೇ ಬಿಡುಗಡೆ ಆಗಿದ್ದು ಬಹುವಾಗಿ ಗಮನ ಸೆಳೆದಿವೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಇನ್ನಷ್ಟೆ ಘೋಷಿಸಬೇಕಿದೆ. ಪಾ ರಂಜಿತ್ ಈ ಹಿಂದೆ ಕಬಾಲಿ, ಕಾಲ, ಸರ್ಪಟ್ಟ ಪರಂಬರೈ, ನಚ್ಚತ್ತಿರಮ್ ನಗರಗಿರದು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ