AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹೇಶ್ ಬಾಬು-ತ್ರಿವಿಕ್ರಮ್ ಸಿನಿಮಾದಿಂದ ಮತ್ತೊಬ್ಬ ತಂತ್ರಜ್ಞ ಹೊರಗೆ

Mahesh Babu: ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಸಿನಿಮಾದಿಂದ ಮತ್ತೊಬ್ಬ ತಂತ್ರಜ್ಞರು ಹೊರಗೆ ಬಂದಿದ್ದಾರೆ.

ಮಹೇಶ್ ಬಾಬು-ತ್ರಿವಿಕ್ರಮ್ ಸಿನಿಮಾದಿಂದ ಮತ್ತೊಬ್ಬ ತಂತ್ರಜ್ಞ ಹೊರಗೆ
ಗುಂಟೂರು ಖಾರಂ
ಮಂಜುನಾಥ ಸಿ.
|

Updated on: Jul 22, 2023 | 6:19 PM

Share

ಮಹೇಶ್ ಬಾಬು (Mahesh Babu), ರಾಜಮೌಳಿಯೊಟ್ಟಿಗೆ (SS Rajamouli) ಸಿನಿಮಾ ಮಾಡಲಿರುವುದು ಈಗಾಗಲೇ ಖಾತ್ರಿಯಾಗಿದ್ದು, ಸಿನಿಮಾಕ್ಕಾಗಿ ರಾಜಮೌಳಿ ಈಗಾಗಲೇ ತಯಾರಿ ಆರಂಭಿಸಿದ್ದಾರೆ. ರಾಜಮೌಳಿ-ಮಹೇಶ್ ಬಾಬು ಸಿನಿಮಾ ಸೆಟ್ಟೇರುವ ಮುಂಚೆ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ (Trivikram Srinivas) ಸಿನಿಮಾ ಬಿಡುಗಡೆ ಆಗಬೇಕಿದೆ. ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಒಟ್ಟಿಗೆ ಕೆಲಸ ಮಾಡುತ್ತಿರುವ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆಯಾದರೂ ಒಬ್ಬರ ಹಿಂದೆ ಒಬ್ಬರು ಈ ಸಿನಿಮಾದಿಂದ ಹೊರಕ್ಕೆ ಬರುತ್ತಿದ್ದಾರೆ.

ಮಹೇಶ್ ಬಾಬುಗಾಗಿ ತ್ರಿವಿಕ್ರಮ್ ನಿರ್ದೇಶಿಸುತ್ತಿರುವ ಸಿನಿಮಾಕ್ಕೆ ‘ಗುಂಟೂರು ಖಾರಂ’ ಎಂದು ಹೆಸರಿಡಲಾಗಿದ್ದು, ಸಿನಿಮಾಕ್ಕೆ ಪೂಜಾ ಹೆಗ್ಡೆ ಹಾಗೂ ಕನ್ನಡತಿ ಶ್ರೀಲೀಲಾ ಅವರನ್ನು ನಾಯಕಿಯರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಮೊದಲಿಗೆ ಸಿನಿಮಾದಿಂದ ಪೂಜಾ ಹೆಗ್ಡೆ ಹೊರಬಂದರು. ಮತ್ತೋರ್ವ ನಟಿ ಶ್ರೀಲೀಲಾಗೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟಿದ್ದರಿಂದ ಬೇಸರಗೊಂಡು ಪೂಜಾ ಹೆಗ್ಡೆ ಹೊರಬಂದಿದ್ದಾರೆ ಎಂಬ ಮಾತುಗಳು ಆ ಸಂದರ್ಭದಲ್ಲಿ ಕೇಳಿ ಬಂದಿದ್ದವು.

ಪೂಜಾ ಹೆಗ್ಡೆ ಹೊರಬಂದ ಕೆಲವೇ ದಿನಗಳಿಗೆ ಸಿನಿಮಾದ ಸಂಗೀತ ನಿರ್ದೇಶಕ ಎಸ್ ತಮನ್ ಸಹ ಸಿನಿಮಾದಿಂದ ಹೊರಗೆ ಬಂದಿದ್ದಾರೆ ಎನ್ನಲಾಯ್ತು. ಸಿನಿಮಾಕ್ಕೆ ತಮನ್ ನೀಡಿದ್ದ ಟ್ಯೂನ್​ಗಳು ತ್ರಿವಿಕ್ರಮ್​ಗೆ ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ ಎಸ್ ತಮನ್ ಅನ್ನು ಚಿತ್ರದಿಂದ ಹೊರಗಿಡಲಾಗಿದೆ. ಆ ಸ್ಥಾನಕ್ಕೆ ತಮಿಳಿನ ಯುವ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಅವರನ್ನು ಕರೆತರಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದವು. ಆದರೆ ತಮನ್ ಈ ಮಾತುಗಳನ್ನು ಅಲ್ಲಗಳೆದರು.

ಇದನ್ನೂ ಓದಿ:Sitara Ghattamaneni Birthday: ಸಿತಾರಾಗೆ ಬರ್ತ್​ಡೇ ಸಖತ್ ಸ್ಪೆಷಲ್; ಹೇಗಿತ್ತು ನೋಡಿ ಮಹೇಶ್ ಬಾಬು ವಿಶ್

ಆದರೆ ಈಗ ‘ಗುಂಟೂರು ಖಾರಂ’ ಸಿನಿಮಾದ ಸಿನಿಮಾಟೊಗ್ರಾಫರ್ ಪಿಎಸ್ ವಿನೋದ್ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಸ್ಕ್ರಿಪ್ಟ್​ನಲ್ಲಿ ಆದ ಬದಲಾವಣೆ, ಸೆಟ್ ಬದಲಾವಣೆ, ಡೇಟ್ಸ್ ಬದಲಾವಣೆ, ರೀ ಶೂಟ್​ಗಳು ಇದೆಲ್ಲದರಿಂದ ಬೇಸರಗೊಂಡು ಪಿಎಸ್ ವಿನೋದ್ ಸಿನಿಮಾದಿಂದ ಹೊರಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ತ್ರಿವಿಕ್ರಮ್​ರ ಈ ಹಿಂದಿನ ಎರಡು ಸಿನಿಮಾಗಳಿಗೆ ಪಿಎಸ್ ವಿನೋದ್ ಅವರೇ ಕ್ಯಾಮೆರಾ ಹಿಡಿದಿದ್ದರು. ಕಳೆದ ಐದು ವರ್ಷಗಳಿಂದಲೂ ಇಬ್ಬರು ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಆದರೆ ‘ಗುಂಟೂರು ಖಾರಂ’ ಸಿನಿಮಾದ ಮರು ಚಿತ್ರೀಕರಣ, ಸ್ಕ್ರಿಪ್ಟ್ ಬದಲಾವಣೆಗಳಿಂದ ಬೇಸತ್ತು ವಿನೋದ್ ಈಗ ಸಿನಿಮಾದಿಂದ ಹೊರ ನಡೆದಿದ್ದಾರೆ.

ಪೂಜಾ ಹೆಗ್ಡೆ ಸಹ ಇದೇ ಕಾರಣದಿಂದ ‘ಗುಂಟೂರು ಖಾರಂ’ ಸಿನಿಮಾದಿಂದ ಹೊರಗೆ ಬಂದಿದ್ದರು. ಪೂಜಾ ಹೆಗ್ಡೆ ಸಹ ಈಗಾಗಲೇ ಸಿನಿಮಾಕ್ಕಾಗಿ ಕೆಲವು ದಿನಗಳ ಚಿತ್ರೀಕರಣ ಮಾಡಿದ್ದರು. ಆದರೆ ಸಿನಿಮಾದ ಚಿತ್ರಕತೆ ಬದಲಿಸಿ, ಈಗಾಗಲೇ ನಟಿಸಿದ್ದ ದೃಶ್ಯಗಳನ್ನು ಸಹ ಮರುಚಿತ್ರೀಕರಣ ಮಾಡಬೇಕೆಂದು ನಿರ್ದೇಶಕ ತ್ರಿವಿಕ್ರಮ್ ಒತ್ತಾಯಿಸಿದ್ದರಿಂದ, ಒಂದೊಮ್ಮೆ ತ್ರಿವಿಕ್ರಮ್ ಮಾತಿಗೆ ಒಪ್ಪಿದರೆ ಡೇಟ್ಸ್ ಸಮಸ್ಯೆ ಎದುರಾಗುತ್ತದೆ ಎಂಬ ಕಾರಣ ನೀಡಿ ಪೂಜಾ ಹೆಗ್ಡೆ ಸಿನಿಮಾದಿಂದ ಹೊರಗೆ ಬಂದಿದ್ದಾರೆ ಎನ್ನಲಾಯ್ತು.

‘ಗುಂಟೂರು ಖಾರಂ’ ಸಿನಿಮಾ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಅವರ ಮೂರನೇ ಸಿನಿಮಾ. ಈ ಹಿಂದೆ ಈ ಇಬ್ಬರು ‘ಅತಡು’ ಹಾಗೂ ‘ಖಲೇಜ’ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಸಿನಿಮಾದ ಬಳಿಕ ಮಹೇಶ್ ಬಾಬು, ರಾಜಮೌಳಿ ಸಿನಿಮಾದಲ್ಲಿ ನಟಿಸಲಿದ್ದಾರೆ, ತ್ರಿವಿಕ್ರಮ್, ಅಲ್ಲು ಅರ್ಜುನ್ ಜೊತೆ ಕೆಲಸ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ