Oppenheimer movie Review: ‘ಆಪನ್​ಹೈಮರ್’, ವಿಜ್ಞಾನಿಯೋ? ವಿಧ್ವಂಸಕನೋ, ದೇಶದ್ರೋಹಿಯೊ, ರಾಜಕಾರಣಿಯೋ?

Oppenheimer movie: ಸಿನಿಮಾ ಪ್ರೇಮಿಗಳು ಭಾರಿ ಕುತೂಹಲದಿಂದ ಕಾಯುತ್ತಿದ್ದ ಕ್ರಿಸ್ಟೊಫರ್ ನೋಲನ್​ನ 'ಆಪನ್​ಹೈಮರ್' ಸಿನಿಮಾ ಹೇಗಿದೆ? ಇಲ್ಲಿದೆ ವಿಮರ್ಶೆ.

Oppenheimer movie Review: 'ಆಪನ್​ಹೈಮರ್', ವಿಜ್ಞಾನಿಯೋ? ವಿಧ್ವಂಸಕನೋ, ದೇಶದ್ರೋಹಿಯೊ, ರಾಜಕಾರಣಿಯೋ?
ಆಪನ್​ಹೈಮರ್ ಸಿನಿಮಾ ವಿಮರ್ಶೆ
Follow us
ಮಂಜುನಾಥ ಸಿ.
|

Updated on:Jul 22, 2023 | 4:47 PM

ಪ್ರಖರ ಬುದ್ಧಿವಂತ ತಂತ್ರಜ್ಞ, ವಿಶ್ವಶ್ರೇಷ್ಠ ಎನಿಸಿಕೊಂಡಿರುವ ಕ್ರಿಸ್ಟೊಫರ್ ನೋಲನ್ (Christopher Nolan) ನಿರ್ದೇಶನದ ‘ಆಪನ್​ಹೈಮರ್‘ (Oppenheimer) ಸಿನಿಮಾ ನಿನ್ನೆ (ಜುಲೈ 21) ತೆರೆಗೆ ಬಂದಿದೆ. ಪರಮಾಣು ಬಾಂಬ್​ನ ಜನಕ, ವಿಜ್ಞಾನಿ ಜೆ ರಾಬರ್ಟ್ ಆಪನ್​ಹೈಮರ್ ಜೀವನವನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಸಿನಿಮಾದಲ್ಲಿ ಕಿಲಿಯನ್ ಮರ್ಫಿ, ಮ್ಯಾಟ್ ಡೇಮನ್, ರಾಬರ್ಟ್ ಡೌನಿ ಜೂನಿಯರ್ ಇನ್ನೂ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನೋಲನ್ ಸಿನಿಮಾಗಳನ್ನು ‘ಇದು ಹೀಗೆ, ಇದು ಇಷ್ಟೆ’ ಎಂದು ಹೇಳಿ ಮುಗಿಸಿಬಿಡಲಾಗುದು. ನೋಲನ್ ಸಿನಿಮಾಗಳನ್ನು ವಿವಿಧ ಕೋನಗಳಲ್ಲಿ ನೋಡಬಹುದಾಗಿರುತ್ತದೆ ಮತ್ತು ಸಿನಿಮಾ ಕಟ್ಟುವಿಕೆ ಹಲವು ಪದರಗಳನ್ನು, ಸಬ್​ಟೆಸ್ಕ್ಟ್​ಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಅವರ ಸಿನಿಮಾಗಳನ್ನು ಅತ್ಯುತ್ತಮ, ಸಾಧಾರಣ, ಕಳಪೆ ಎಂದು ವರ್ಗೀಕರಿಸಿ ಒಂದು ಶಬ್ದದಲ್ಲಿ ಹೇಳುವುದು ಸೂಕ್ತ ಅಲ್ಲವೇ ಅಲ್ಲ.

ನೋಲನ್ ಸಿನಿಮಾಗಳು ಒಬ್ಬೊಬ್ಬರಿಗೆ ಒಂದೊಂದು ರೀತಿ, ನೋಡಿದ ಪ್ರತಿ ಬಾರಿ ಬೇರೆ ರೀತಿ ಅರ್ಥವಾಗುವ ಸಾಧ್ಯತೆ ಹೆಚ್ಚು. ಇದೇ ಮಾದರಿಯಲ್ಲಿ ನೋಲನ್​ನ ಹೊಸ ಸಿನಿಮಾ ‘ಆಪನ್​ಹೈಮರ್’ ನೋಡಿದಾಗ ಅನ್ನಿಸಿದ್ದಿಷ್ಟು, ಆರಂಭದಲ್ಲಿಯೇ ನೋಲನ್ ಎರಡು ಕೋನಗಳಲ್ಲಿ ಕತೆಯನ್ನು ಪ್ರಾರಂಭಿಸಿದ್ದಾರೆ. ಕಪ್ಪು-ಬಿಳುಪು ದೃಶ್ಯಗಳಲ್ಲಿ ಒಂದು, ಕಲರ್ ದೃಶ್ಯಗಳಲ್ಲಿ ಒಂದು. ಕಲರ್ ದೃಶ್ಯದಲ್ಲಿ ಸಮಿತಿಯೊಂದರ ಮುಂದೆ ಸಣ್ಣ ಕೋಣೆಯಲ್ಲಿ ಕುಳಿತ ವಿಜ್ಞಾನಿ ಆಪನ್​ಹೈಮರ್ ತನ್ನದೇ ಕತೆಯನ್ನು ಸಮಿತಿ ಮುಂದೆ ಬಿಚ್ಚಿಡುತ್ತಿದ್ದಾನೆ. ಅಲ್ಲಿಂದ ಮತ್ತೊಂದು ಫ್ಲ್ಯಾಶ್​ಬ್ಯಾಕ್ ತೆರೆದುಕೊಳ್ಳುತ್ತದೆ. ಕಪ್ಪು-ಬಿಳುಪು ದೃಶ್ಯದಲ್ಲಿ ಒಂದು ವಿಚಾರಣೆ ನಡೆಯುತ್ತಿದೆ ಅಲ್ಲಿ ಲಿವಿಸ್ ಸ್ಟ್ರಾಸ್ (ರಾಬರ್ಟ್ ಡೌನಿ ಜ್ಯೂನಿಯರ್) ರಾಬರ್ಟ್ ಆಪನ್​ಹೈಮರ್ ಕುರಿತು ವಾದ ಮಂಡಿಸುತ್ತಿದ್ದಾನೆ. ಎರಡೂ ವಿಚಾರಣೆಯಲ್ಲಿಯೂ ಆರೋಪಿ ವಿಜ್ಞಾನಿ ರಾಬರ್ಟ್ ಆಪನ್​ಹೈಮರ್!

ಸಿನಿಮಾದ ಆರಂಭದಲ್ಲಿಯೇ ವಿಜ್ಞಾನಿ ಆಪನ್​ಹೈಮರ್ ದೇಶದ್ರೋಹದಂಥಹಾ ಆರೋಪಕ್ಕೆ ಸಿಲುಕಿರುವುದನ್ನು ತೋರಿಸಿ ಕುತೂಹಲ ಮೂಡಿಸುವ ನೋಲನ್ ಅದರ ನಂತರದ ದೃಶ್ಯಗಳಲ್ಲಿ ಆಪನ್​ಹೈಮರ್​ನ ವಿಜ್ಞಾನ ಪ್ರೇಮ, ಕಮ್ಯೂನಿಸ್ಟರೊಡನೆ ನಂಟು, ಆತನ ಇಬ್ಭಗೆ ವ್ಯಕ್ತಿತ್ವ (ತಾನು ಮೆಚ್ಚುವ ಶಿಕ್ಷಕನನ್ನೇ ಕೊಲ್ಲಲು ಯತ್ನಿಸುವ ದೃಶ್ಯ) ಹೀಗೆ ಆಪನ್​ಹೈಮರ್​ನ ವ್ಯಕ್ತಿತ್ವ ಹಾಗೂ ವಿಜ್ಞಾನದೊಟ್ಟಿಗಿನ ನಂಟು, ಪ್ರತಿಭೆಗಳನ್ನು ಅನಾವರಣ ಮಾಡುತ್ತಾರೆ.

ಫಸ್ಟ್ ಆಕ್ಟ್ ಅಥವಾ ಸೆಟಪ್​ಗೆ ತುಸು ಹೆಚ್ಚೇ ಸಮಯವನ್ನು ನೋಲನ್ ಈ ಸಿನಿಮಾದಲ್ಲಿ ತೆಗೆದುಕೊಂಡಿದ್ದಾರೆ. ಕತೆಯ ಕೇಂದ್ರವಾಗಿರುವ ಮ್ಯಾನ್​ಹಾಟನ್ ಪ್ರಾಜೆಕ್ಟ್​ನ ಮಾತು ಸಿನಿಮಾದಲ್ಲಿ ಬರುವುದು ತುಸು ತಡವಾಗಿಯೇ. ಹಾಗೆಂದು ಮ್ಯಾನ್​ಹಾಟನ್ ಪ್ರಾಜೆಕ್ಟ್​ನ ಮುಂಚಿನ ದೃಶ್ಯಗಳೆಲ್ಲ ಪೇಲವ ಎಂದಲ್ಲ. ಆರಂಭದ ಹಂತದಲ್ಲಿ ನೋಲನ್​ನ ವ್ಯಕ್ತಿತ್ವ, ಶಿಕ್ಷಣ, ಆಸಕ್ತಿಗಳ ಜೊತೆಗೆ ವಿಶ್ವಯುದ್ಧ, ಅಮೆರಿಕ-ಸೋವಿಯತ್ ರಷ್ಯಾ ಸಂಬಂಧ, ಕಮ್ಯುನಿಸ್ಟ್ ಪಾರ್ಟಿ ಮೇಲಿನ ಅನುಮಾನಗಳು, ಎರಡನೇ ವಿಶ್ವಯುದ್ಧದ ಸ್ಥಿತಿ, ಜರ್ಮನಿಯ ವಿಜ್ಞಾನ ಅನ್ವೇಷಣೆಗಳು, ಅದು ಅಮೆರಿಕಕ್ಕೆ ತರುತ್ತಿರುವ ಆತಂಕ, ಪ್ರತಿಕ್ರಿಯಿಸುವ ಒತ್ತಡ ಇನ್ನಿತರೆ ವಿಷಯಗಳ ಪರಿಚಯಗಳ ಜೊತೆಗೆ, ಆಲ್ಬರ್ಟ್ ಐನ್​ಸ್ಟೈನ್, ಹೈನ್ಸ್​ಬರ್ಗ್ ಇನ್ನೂ ಕೆಲವು ಹೆಸರಾಂತ ವಿಜ್ಞಾನಿಗಳು ಅವರ ಕ್ಷೇತ್ರಗಳ ಪರಿಚಯವನ್ನೂ ನೋಲನ್ ಮಾಡಿಸುತ್ತಾರೆ.

ಮ್ಯಾನ್ ಹಾಟನ್ ಪ್ರಾಜೆಕ್ಟ್​ ಕಡೆಗೆ ಕತೆ ವಾಲಿದ ಬಳಿಕವೂ, ಪರಮಾಣು ವಿಜ್ಞಾನದ ಸೂಕ್ಷ್ಮ ವಿಷಯಗಳನ್ನು ಹೆಚ್ಚು ಮುಟ್ಟದೆ, ಮ್ಯಾನ್ ಹಟನ್ ಪ್ರಾಜೆಕ್ಟ್ ಸುತ್ತಲಿನ ರಾಜಕೀಯ, ಬಾಂಬ್​ ನಿರ್ಮಾಣದ ಅವಶ್ಯಕತೆ, ಲಾಸ್ ಅಲ್ಮೋಸ್​ನಲ್ಲಿ ಗುಪ್ತ ಪ್ರಯೋಗಾಲಯ ನಿರ್ಮಾಣ, ಗುಪ್ತ ಪ್ರಯೋಗಕ್ಕೆ ವಿಜ್ಞಾನಿಗಳ ಆಯ್ಕೆ, ವಿಜ್ಞಾನಿಗಳ ನಡುವಿನ ಅಭಿಪ್ರಾಯ ಭೇದ, ಆಪನ್​ಹೈಮರ್​ನ ರಾಜಕೀಯ ನಿಲವು, ಪತ್ನಿಯೊಂದಿಗಿನ ಸಂಕೀರ್ಣ ಸಂಬಂಧ, ಇತ್ಯಾದಿಗಳ ಬಗ್ಗೆಯೇ ನೋಲನ್ ಹೆಚ್ಚು ಗಮನ ಹರಿಸಿದ್ದಾರೆ. ವಿಜ್ಞಾನ, ಸಮಯ-ಅಂತರಿಕ್ಷ, ಅಣು-ಪರಮಾಣುಗಳ ಬಗ್ಗೆ ಅತೀವ ಆಸಕ್ತಿಯುಳ್ಳ ನೋಲನ್ ಈ ಸಿನಿಮಾದಲ್ಲಿ ಹೆಚ್ಚು ಆಳಕ್ಕೇನು ಇಳಿದಿಲ್ಲ ಎಂದೇ ಹೇಳಬಹುದು. ಸಿನಿಮಾದಲ್ಲಿ ವಿಜ್ಞಾನಿ ಆಪನ್​ಹೈಮರ್ ಒಂದು ದೊಡ್ಡ ಗಾಜಿನ ಬೌಲ್​ನಲ್ಲಿ ಗೋಳಿಗಳನ್ನು ತುಂಬುತ್ತಾರೆ ಅದರ ಪಕ್ಕ ಒಂದು ಗಾಜಿನ ಗ್ಲಾಸಿನಲ್ಲಿಯೂ ಗೋಳಿಗಳನ್ನು ತುಂಬುತ್ತಾರೆ ಆದರೆ ಅದೇಕೆ, ಅದರ ಮಹತ್ವವೇನು ಎಂಬುದನ್ನು ವಿವರಿಸುವುದಿಲ್ಲ.

ಪರಮಾಣು ಪರೀಕ್ಷೆಯ ದೃಶ್ಯವನ್ನು ನೋಲನ್ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಪರಮಾಣು ಬಾಂಬ್ ಪರೀಕ್ಷೆಯ ದೃಶ್ಯ, ಸೀಟಿನ ತುದಿಗೆ ಕೂತು ನೋಡುವಂತೆ ಮಾಡುತ್ತದೆ. ಬಾಂಬ್ ಸಿಡಿದು ಬೆಂಕಿಯ ಗೋಲಗಳು ಪರದೆಯ ತುಂಬಾ ಆವರಿಸಿದಾಗ ಸೃಷ್ಟಿಯಾಗುವ ಮೌನ, ಆ ಬಾಂಬ್​ನಿಂದ ಮುಂದೆ ಆಗುವ (ಸಿನಿಮಾದಲ್ಲಿ) (ನಿಜ ಜೀವನದಲ್ಲಿ ಆಗಿಹೋಗಿದೆ) ಭೀಕರತೆಯನ್ನು ನೆನೆಪಿಗೆ ತಂದು ಸಣ್ಣಗೆ ಕಂಪಿಸುವಂತೆ ಮಾಡುತ್ತದೆ.

ಪರಮಾಣು ಬಾಂಬ್ ಪ್ರಯೋಗದ ನಂತರ ಸಿನಿಮಾ ಬಹುತೇಕ ಆಪನ್​ಹೈಮರ್​ನ ದ್ವಂದ್ವ ಮನಸ್ಥಿತಿ, ರಾಜಕೀಯದ ಕಡೆಗೆ ಹೊರಳುತ್ತದೆ. ಹಿಟ್ಲರ್ ಸತ್ತು, ಜರ್ಮನಿ ವಿಶ್ವಯುದ್ಧದಿಂದ ಹಿಂದೆ ಸರಿದಿದ್ದರೂ ಬಾಂಬ್ ತಯಾರಿಸಲೇಬೇಕು ಎಂದು ಒತ್ತಾಯಿಸುವ, ಹಿರೋಷಿಮಾ ಮೇಲೆ ಬಾಂಬ್ ಬಿದ್ದಾಗ ವಿಜಯೋತ್ಸವ ಆಚರಿಸುವ, ‘ನಾನೇ ಕಾಲ, ನಾನೇ ವಿಶ್ವ ವಿಧ್ವಂಸಕ’ ಎಂದು ಭಗವದ್ಗೀತೆ ಶ್ಲೋಕ ಹೇಳುವ ಆಪನ್​ಹೈಮರ್, ಆ ನಂತರ ಬಾಂಬ್ ದಾಳಿಯಿಂದ ಆದ ಸಾವು ನೋವಿನ ಬಗ್ಗೆ ಪಶ್ಚಾತಾಪ ಪಟ್ಟನೆಂಬಂತೆ ಸಿನಿಮಾದಲ್ಲಿ ತೋರಿಸಲಾಗಿದೆ. ಅದಾದ ಬಳಿಕ ಮತ್ತೆ, ಅಣು ಬಾಂಬ್ ದಾಳಿಯಿಂದಾಗಿ ತನಗೆ ಸಿಕ್ಕ ಜನಪ್ರಿಯತೆಯನ್ನು ಎಂಜಾಯ್ ಮಾಡುತ್ತಿರುವಂತೆಯೂ, ಸಹವರ್ತಿ ವಿಜ್ಞಾನಿಗಳ ಬಗ್ಗೆ ಬಹಿರಂಗವಾಗಿ ಜೋಕ್ ಮಾಡುತ್ತಿರುವ ದೃಶ್ಯಗಳನ್ನೂ ನೋಲನ್ ತೋರಿಸುತ್ತಾರೆ. ಆ ಮೂಲಕ ಆಪನ್​ಹೈಮರ್​ಗೆ, 2.20 ಲಕ್ಷ ಜನರ ಜೀವ ತೆಗೆದ ತನ್ನ ಅನ್ವೇಷಣೆ ಬಗ್ಗೆ ಗಾಢ ಪಶ್ಚಾತ್ತಾಪ ಇರಲಿಲ್ಲವೆಂಬುದನ್ನು ಪ್ರೇಕ್ಷಕರಿಗೆ ಅರ್ಥ ಮಾಡಿಸುತ್ತಾರೆ ಅಥವ ತಾನಾಗಿಯೇ ಅರ್ಥವಾಗುತ್ತದೆ. ಆಪನ್​ಹೈಮರ್ ದ್ವಂದ್ವ ವ್ಯಕ್ತಿದವ, ಸ್ತ್ರೀಲೋಲ, ಅವಶ್ಯಕತೆ ಬಿದ್ದಾಗ ಸುಳ್ಳು ಹೇಳುವವ, ತನ್ನ ದೇಶದ ವೈರಿಗಳಾಗಿದ್ದ ಕಮ್ಯೂನಿಸ್ಟರ ಬಗ್ಗೆ ಸಿಂಪತಿ ಹೊಂದಿದ್ದವ, ಫ್ರೆಂಚ್ ಕ್ರಾಂತಿಕಾರಿಗಳಿಗೆ ಸಹಾಯ ಮಾಡಿದವ ಎಂಬುದನ್ನೆಲ್ಲ ವಾಚ್ಯವಾಗಿ ಹೇಳುವ ನೋಲನ್ ಇದೆಲ್ಲದರ ನಡುವೆಯೂ ಆಪನ್​ಹೈಮರ್ ಅನ್ನು ‘ಹೀರೋ’ ಆಗಿಯೇ ಪ್ರೆಸೆಂಟ್ ಮಾಡುವ ಪ್ರಯತ್ನಗಳನ್ನು ಮಾಡಿರುವುದು ಸುಸ್ಪಷ್ಟ.

ಆಪನ್​ಹೈಮರ್ ಪಾತ್ರದಲ್ಲಿ ನಟಿಸಿರುವ ಕಿಲಿಯನ್ ಮರ್ಫಿ ತಮ್ಮನ್ನು ಪಾತ್ರಕ್ಕೆ ಅರ್ಪಿಸಿಕೊಂಡು ಬಿಟ್ಟಿದ್ದಾರೆ. ಅವರಷ್ಟೆ ಸಿನಿಮಾದಲ್ಲಿ ಗಮನ ಸೆಳೆಯುವುದು ರಾಬರ್ಟ್ ಡೌನಿ ಜೂನಿಯರ್ ನಟನೆ. ‘ಐರನ್​ಮ್ಯಾನ್’ ಸಿನಿಮಾದ ಪ್ಲೇಬಾಯ್ ಸೂಪರ್ ಹೀರೋ ಇವರೇನಾ ಎಂಬ ಅನುಮಾನ ಮೂಡುವಷ್ಟು ಅದ್ಭುತವಾಗಿ ರಾಬರ್ಟ್ ಡೌನಿ ಜೂನಿಯರ್ ನಟಿಸಿದ್ದಾರೆ. ಇಬ್ಬರಲ್ಲಿ ಒಬ್ಬರಿಗೆ ಆಸ್ಕರ್ ನಿಶ್ಚಿತ. ವಿಶೇಷ ತಂತ್ರಜ್ಞಾನ ಬಳಸಿ ಚಿತ್ರೀಕರಿಸಿರುವ ನೋಲನ್ ಹಾಗೂ ಅವರ ತಂಡದ ಶ್ರಮ ತೆರೆಯ ಮೇಲೆ ಪ್ರತಿಬಿಂಬಿತವಾಗಿವೆ. ದೃಶ್ಯಗಳು ಶಾರ್ಪ್ ಆಗಿಯೂ ಫ್ರೆಶ್ ಆಗಿಯೂ ಕಾಣುತ್ತವೆ. ಸಿನಿಮಾದ ಹಿನ್ನೆಲೆ ಸಂಗೀತ ಅಲ್ಲಲ್ಲಿ ತಣ್ಣಗೆ ಹರಿದರೆ ಅವಶ್ಯಕತೆ ಇದ್ದ ಕಡೆ ಪ್ರೇಕ್ಷಕರ ಕುತೂಹಲದ ಬಿಂದು ಏರುವಂತೆ ಮಾಡುತ್ತದೆ.

ಸಿನಿಮಾದಲ್ಲಿ ಕೆಲವು ದೃಶ್ಯಗಳು ಕನ್​ವಿನ್ಸಿಂಗ್ ಗುಣವನ್ನು ಪೂರ್ಣವಾಗಿ ಹೊಂದಿಲ್ಲ. ಸಿನಿಮಾದ ಅಂತ್ಯದಲ್ಲಿ ಹಲವು ವಿಜ್ಞಾನಿಗಳು, ಆಪ್ತರು ಆಪನ್​ಹೈಮರ್ ವಿರುದ್ಧ ಹೇಳಿಕೆ ನೀಡಿರುತ್ತಾರೆ, ಪರವಾಗಿ ಹೇಳಿಕೆ ನೀಡುವ ವಿಜ್ಞಾನಿ ಡೇವಿಡ್ ಹಿಲ್ (ರಾಮಿ)ಗೆ ಹಾಗೆ ಮಾಡಲು ಇದ್ದ ಕಾರಣವೇನು? ಎಂಬುದು ಸ್ಪಷ್ಟವಾಗುವುದಿಲ್ಲ. ‘ಆಪನ್​ಹೈಮರ್, ಎಲ್ಲ ವಿಜ್ಞಾನಿಗಳನ್ನು ನನ್ನ ವಿರುದ್ಧ ತಿರುಗಿಸಿದ್ದಾನೆ’ ಎಂದು ಲಿವಿಸ್ ಸ್ಟ್ರಾಸ್ (ರಾಬರ್ಟ್ ಡೌನಿ ಜ್ಯೂನಿಯರ್) ಹೇಳುವುದು ಬಿಟ್ಟರೆ ಇನ್ಯಾವ ಕಾರಣವೂ ಸಿಗುವುದಿಲ್ಲ. ಅಲ್ಲದೆ ಕತೆಯಲ್ಲಿ ಆಪನ್​ಹೈಮರ್, ವಿಜ್ಞಾನಿ ಡೇವಿಡ್ ಹಿಲ್ ಜೊತೆಗೆ ತುಸು ಒರಟಾಗಿಯೇ ವರ್ತಿಸಿರುತ್ತಾನೆ. ಒಟ್ಟಾರೆ ನೋಲನ್​ರ ‘ಆಪನ್​ಹೈಮರ್’ ಒಂದು ಗಮನಾರ್ಹ ಸಿನಿಮಾ ಎಂಬುದಂತೂ ಖಚಿತ. ಮಾತ್ರವಲ್ಲದೆ ಬಯೋಗ್ರಫಿ ಮಾದರಿಯಲ್ಲಿ ಅತ್ಯುತ್ತಮ ಎನಿಸಿಕೊಳ್ಳಬಹುದಾದ ಸಿನಿಮಾ ಸಹ. ಆದರೆ ನೋಲನ್​ರ ಈ ಹಿಂದಿನ ಸಿನಿಮಾಗಳಾದ ‘ಇಂಟರ್ಸ್ಟೆಲ್ಲರ್’, ‘ಇನ್​ಸೆಪ್ಷನ್’, ‘ಡಾರ್ಕ್ ನೈಟ್ ರೈಸಸ್’, ‘ಡಂಕಿರ್ಕ್​’ಗಳಿಗೆ ಹೋಲಿಸಿ ನೋಡಿದಾಗ ಅವುಗಳಷ್ಟು ಉಚ್ಚ ದರ್ಜೆಯದ್ದಲ್ಲ ಎನಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Sat, 22 July 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ