‘ಪೆರಿಯಾರ್ ನಾಸ್ತಿಕತೆಯನ್ನು ಒಪ್ಪುವುದಿಲ್ಲ, ನಮಗೆ ದೇವರಲ್ಲಿ ನಂಬಿಕೆ ಇದೆ’; ಸಿಎಂ ವಿಜಯ್

ತಮಿಳುನಾಡು ಸಿಎಂ ವಿಜಯ್, ಪೆರಿಯಾರ್ ಅವರ ಸಾಮಾಜಿಕ ತತ್ವಗಳನ್ನು ಸ್ವೀಕರಿಸುವುದಾಗಿ ಹೇಳಿದ್ದಾರೆ. ಆದರೆ ಅವರ ನಾಸ್ತಿಕತೆಯನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 'ನಮಗೆ ದೇವರಲ್ಲಿ ನಂಬಿಕೆ ಇದೆ' ಎಂದು ವಿಜಯ್ ತಿಳಿಸಿದ್ದಾರೆ. ಅವರ ಪಕ್ಷವು ಪೆರಿಯಾರ್, ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ, ಮತ್ತು ಕಾಮರಾಜ್ ಅವರ ಪ್ರಾಮಾಣಿಕ ಆಡಳಿತದಿಂದ ಪ್ರೇರಿತವಾಗಿದೆ.

‘ಪೆರಿಯಾರ್ ನಾಸ್ತಿಕತೆಯನ್ನು ಒಪ್ಪುವುದಿಲ್ಲ, ನಮಗೆ ದೇವರಲ್ಲಿ ನಂಬಿಕೆ ಇದೆ’; ಸಿಎಂ ವಿಜಯ್
ವಿಜಯ್

Updated on: Jun 25, 2026 | 10:54 AM

ಮುಖ್ಯಾಂಶಗಳು

  • ಪೆರಿಯಾರ್ ಅವರ ಸಾಮಾಜಿಕ ತತ್ವಗಳನ್ನು ಸ್ವೀಕರಿಸಿದ್ದೇವೆ ಎಂದ ವಿಜಯ್
  • ದೇವರಿಲ್ಲ ಎಂಬ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದ ಸಿಎಂ
  • ವಿಜಯ್ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ ಚರ್ಚೆ

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರು (Vijay) ಇತ್ತೀಚೆಗೆ ವಿಧಾನಸಭೆಯಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ತಮ್ಮ ತಮಿಳಗ ವೆಟ್ರಿ ಕಳಗಂ ಪಕ್ಷವು ದ್ರಾವಿಡ ರಾಜಕಾರಣದ ಪಿತಾಮಹ ಪೆರಿಯಾರ್ ಇ.ವಿ. ರಾಮಸ್ವಾಮಿ ಅವರ ಸಾಮಾಜಿಕ ತತ್ವಗಳನ್ನು ಸ್ವೀಕರಿಸಿದೆ ಎಂದು ಅವರು ಹೇಳಿದ್ದಾರೆ. ಆದರೆ ಪೆರಿಯಾರ್ ಅವರ ನಾಸ್ತಿಕತೆ ಮತ್ತು ಧರ್ಮ ನಿರಾಕರಣೆಯ ವಿಚಾರಗಳನ್ನು ತಮ್ಮ ಪಕ್ಷ ಒಪ್ಪುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅವರ ಹೇಳಿಕೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಸಿಎಂ ವಿಜಯ್ ಮಾತನಾಡಿದ್ದಾರೆ. ‘ಪೆರಿಯಾರ್ ಅವರ ಧರ್ಮ ನಿರಾಕರಣೆಯ ನಿಲುವನ್ನು ನಾವು ಒಪ್ಪಿಲ್ಲ. ಆದರೆ ಅವರ ವಿಶಾಲವಾದ ಸಾಮಾಜಿಕ ತತ್ವಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿದ್ದೇವೆ. ನಾವು ಪೆರಿಯಾರ್ ಅವರ ಬೋಧನೆಗಳನ್ನು ಸ್ವೀಕರಿಸಿದ್ದೇವೆ. ಹಾಗೆಯೇ ನಾವು ದೇವರನ್ನು ನಂಬುವವರು ಎಂಬುದನ್ನು ಸ್ಪಷ್ಟಪಡಿಸಿದ್ದೇವೆ. ನಾವು ಯಾರ ಸಿದ್ಧಾಂತಕ್ಕೂ ವಿರುದ್ಧವಾಗಿಲ್ಲ’ ಎಂದು ವಿಜಯ್ ತಿಳಿಸಿದ್ದಾರೆ.

ಮೂವರು ನಾಯಕರೇ ಪ್ರೇರಣೆ

ತಮ್ಮ ಸರ್ಕಾರವು ಪೆರಿಯಾರ್, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಾಜಿ ಸಿಎಂ ಕೆ. ಕಾಮರಾಜ್ ಅವರ ಸಿದ್ಧಾಂತಗಳ ಸಮ್ಮಿಶ್ರಣದಿಂದ ಪ್ರೇರಣೆ ಪಡೆದಿದೆ ಎಂದು ವಿಜಯ್ ಹೇಳಿದ್ದಾರೆ. ‘ನಾವು ಡಾ. ಅಂಬೇಡ್ಕರ್ ಅವರ ಸಮಾನ ಅವಕಾಶ ಮತ್ತು ಸಾಮಾಜಿಕ ನ್ಯಾಯದ ಆದರ್ಶಗಳನ್ನು ಒಪ್ಪಿಕೊಂಡಿದ್ದೇವೆ. ಕಾಮರಾಜ್ ಅವರ ಪ್ರಾಮಾಣಿಕ ಆಡಳಿತದ ಮಾದರಿಯನ್ನು ನಮ್ಮ ಮಾರ್ಗದರ್ಶಿ ಸೂತ್ರವಾಗಿ ಅಳವಡಿಸಿಕೊಂಡಿದ್ದೇವೆ’ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ವಿಜಯ್ ಜನ್ಮದಿನಕ್ಕೆ ತ್ರಿಶಾ ತರಿಸಿದ್ದು ವಿಶೇಷ ಕೇಕ್; ‘00.00’ ಅರ್ಥ ಹುಡುಕಿದ ನೆಟ್ಟಿಗರು

ಸಾಮಾನ್ಯ ಜನರ ಸರ್ಕಾರ

ತಮ್ಮ ಪಕ್ಷವನ್ನು ಕೇವಲ ಒಬ್ಬ ನಟನ ನೇತೃತ್ವದ ಸಂಘಟನೆ ಎಂದು ಕರೆಯುವವರ ವಿರುದ್ಧ ವಿಜಯ್ ವಾಗ್ದಾಳಿ ನಡೆಸಿದ್ದಾರೆ. ‘ಹೆಚ್ಚಿನ ಜನರು ಮೊದಲು ರಾಜಕೀಯ ಪಕ್ಷವನ್ನು ಪ್ರಾರಂಭಿಸಿ ನಂತರ ಜನರ ಬಳಿಗೆ ಹೋಗುತ್ತಾರೆ. ಆದರೆ ನಾವು ಮೊದಲು ಜನರ ಬಳಿಗೆ ಹೋಗಿ ಆ ನಂತರ ನಮ್ಮ ಪಕ್ಷವನ್ನು ಪ್ರಾರಂಭಿಸಿದ್ದೇವೆ. ಅಣ್ಣಾದೊರೈ ಹಾಗೂ ಎಂ.ಜಿ. ರಾಮಚಂದ್ರನ್ ಅವರ ಅವಧಿಯಲ್ಲಿ ಸಾಮಾನ್ಯ ಜನರ ಸರ್ಕಾರವಿತ್ತು. ಅದೇ ರೀತಿ ವಿಜಯ್ ನೇತೃತ್ವದ ಈ ಸರ್ಕಾರವು ಅತ್ಯಂತ ಸಾಮಾನ್ಯ ಜನರ ಸರ್ಕಾರವಾಗಿದೆ’ ಎಂದು ಭರವಸೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us