ಚಿತ್ರರಂಗಕ್ಕೆ ಬರುವ ಸಾಕಷ್ಟು ಜನರು ನಾನಾ ಕನಸುಗಳನ್ನು ಕಂಡಿರುತ್ತಾರೆ. ನಟನೆ ಜತೆಗೆ ಇಲ್ಲಿ ಅದೃಷ್ಟವೂ ಮುಖ್ಯ. ಕೆಲವರು ದೊಡ್ಡ ಸ್ಟಾರ್ಗಳಾಗಿ ಬೆಳೆದರೆ, ಇನ್ನೂ ಕೆಲವರು ಹೇಳ ಹೆಸರಿಲ್ಲದೆ ಹೋಗಿದ್ದಾರೆ. ಅವಕಾಶ ಸಿಗದೆ, ನಟಿಸಿದ ಸಿನಿಮಾ ರಿಲೀಸ್ ಆಗದೆ ತೊಂದರೆಗೆ ಸಿಲುಕಿದ ಸಾಕಷ್ಟು ಕಲಾವಿದರಿದ್ದಾರೆ. ತೆಲುಗಿನ ಖ್ಯಾತ ಹಾಸ್ಯ ನಟ ರಘು ಕರುಮಂಚಿಗೂ ಈಗ ಇದೇ ಪರಿಸ್ಥಿತಿ ಎದುರಾಗಿದೆ. ಕೊವಿಡ್ನಿಂದ ಕಳೆದ ಎರಡು ವರ್ಷಗಳಲ್ಲಿ ಸರಿಯಾದ ಬೆಳೆ ತೆಗೆಯೋಕೆ ಆಗುತ್ತಿಲ್ಲ. ಸಿನಿಮಾ ಕೆಲಸಗಳು ಅರ್ಧಕ್ಕೆ ನಿಂತಿವೆ. ಈ ಕಾರಣಕ್ಕೆ ಮದ್ಯ ಮಾರಾಟಕ್ಕೆ ಇಳಿದಿದ್ದಾರೆ.
‘ಪವರ್’ ಸೇರಿ ಕೆಲ ತೆಲುಗು ಸಿನಿಮಾಗಳಲ್ಲಿ ರಘು ನಟಿಸಿದ್ದರು. ಆದರೆ, ಚಿತ್ರರಂಗ ಅವರ ಕೈ ಹಿಡಿಯಲೇ ಇಲ್ಲ. ಎರಡು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಇದ್ದ ಹೊರತಾಗಿಯೂ ಅವರಿಗೆ ಬೇರೂರೋಕೆ ಸಾಧ್ಯವಾಗಿಲ್ಲ. ಹೇಳಿಕೊಳ್ಳುವಂತಹ ಪಾತ್ರಗಳೂ ಸಿಕ್ಕಿಲ್ಲ. ಕೊವಿಡ್ ಸಂದರ್ಭದಲ್ಲಿ ಸಂಪೂರ್ಣವಾಗಿ ನಿರುದ್ಯೋಗಿ ಆದರು. ಹೀಗಾಗಿ, ಜೀವನಕ್ಕೆ ಬೇರೆ ದಾರಿ ನೋಡಿಕೊಳ್ಳುವುದು ಅವರಿಗೆ ಅನಿವಾರ್ಯ ಆಯಿತು. ಹೀಗಾಗಿ, ಆರ್ಗ್ಯಾನಿಕ್ ಕೃಷಿ ಆರಂಭಿಸಿದರು. ನಂತರ ಜಮೀನನ್ನು ಲೀಸ್ಗೆ ತೆಗೆದುಕೊಂಡು ಕೃಷಿ ಮಾಡಿದರು. ಇದು ಅವರ ಕೈ ಹಿಡಿದಿದೆ.
ಈಗ ಅವರ ಗೆಳೆಯರ ಜತೆ ಸೇರಿ ರಘು ಲಿಕ್ಕರ್ ಶಾಪ್ ಆರಂಭಿಸಿದ್ದಾರೆ. ನಲ್ಗೊಂದಾ ಜಿಲ್ಲೆಯಲ್ಲಿ ಅವರು ಈ ಶಾಪ್ ನಡೆಸುತ್ತಿದ್ದಾರೆ. ಡಿಸೆಂಬರ್ 1ರಂದು ಈ ಅಂಗಡಿ ಉದ್ಘಾಟನೆ ಆಗಿದೆ. ಶಾಪ್ನಲ್ಲಿ ಅವರು ಮದ್ಯ ನೀಡುತ್ತಿರುವ ಫೋಟೋ ವೈರಲ್ ಆಗಿದೆ. ಇದಾದ ನಂತರವಾದರೂ ಅವರಿಗೆ ಸಿನಿಮಾದಲ್ಲಿ ಆಫರ್ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಕಳೆದ ಎರಡು ವರ್ಷಗಳಲ್ಲಿ ಚಿತ್ರರಂಗದ ಸಾಕಷ್ಟು ಜನರ ಬದುಕು ದುಸ್ಥಿತಿ ತಲುಪಿದೆ. ಸಹಾಯ ಮಾಡುವಂತೆ ಸಾಕಷ್ಟು ಕಲಾವಿದರು ಈ ಮೊದಲು ಕೋರಿದ್ದಿದೆ. ಈ ವೇಳೆ ದೊಡ್ಡ ಸೆಲೆಬ್ರಿಟಿಗಳು ಸಹಾಯ ಮಾಡಿದ್ದರು. ಈಗ ರಘು ಕೂಡ ಚಿತ್ರರಂಗದಲ್ಲಿ ಯಶಸ್ಸು ಕಾಣದೆ ಬೇರೆ ದಾರಿ ಹಿಡಿದಿದ್ದಾರೆ. ಅವರಿಗೆ ಯಶಸ್ಸು ಸಿಗಲಿ ಎಂದು ಅನೇಕರು ಕೋರುತ್ತಿದ್ದಾರೆ.
ಇದನ್ನೂ ಓದಿ: ಆಹಾರಕ್ಕಿಂತಲೂ ನನಗೆ ಸೆಕ್ಸ್ ಮುಖ್ಯ ಎಂದು ಹೇಳಿದ್ದ ಸಮಂತಾ; ವಿಡಿಯೋ ವೈರಲ್
Published On - 6:21 pm, Thu, 2 December 21