ಏನೋ ಮಾಡಲು ಹೋಗಿ ಏನೋ ಆಯ್ತು, ದಳಪತಿ ವಿಜಯ್ ವಿರುದ್ಧ ಮುಸ್ಲೀಮರ ದೂರು
Thalapathy Vijay: ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದು, ಪಕ್ಷದ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ವಿಜಯ್, ಮುಸ್ಲೀಂ ಸಮುದಾಯದವರಿಗಾಗಿ ಇಫ್ತಾರ್ ಕೂಟ ಆಯೋಜನೆ ಮಾಡಿದ್ದರು. ಆದರೆ ಈಗ ಕೆಲ ಮುಸ್ಲೀಮರೆ ವಿಜಯ್ ವಿರುದ್ಧ ದೂರು ನೀಡಿದ್ದು, ಗಂಭೀರ ಆರೋಪಗಳನ್ನು ವಿಜಯ್ ವಿರುದ್ಧ ಮಾಡಿದ್ದಾರೆ.

ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮದೇ ಪಕ್ಷ ಸ್ಥಾಪನೆ ಮಾಡಿರುವ ವಿಜಯ್ ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದಾರೆ. ಇತ್ತೀಚೆಗೆ ನಡೆದ ಪಕ್ಷದ ಸಭೆಯಲ್ಲಿ ಬಿಜೆಪಿ ಹಾಗೂ ಆಡಳಿತಾರೂಢ ಡಿಎಂಕೆ ಪಕ್ಷದ ವಿರುದ್ಧ ಸತತ ವಾಗ್ದಾಳಿ ಮಾಡಿರುವ ವಿಜಯ್, ತಮ್ಮ ಪಕ್ಷಕ್ಕೆ ವಿವಿಧ ಸಮುದಾಯದ ಬೆಂಬಲ ಪಡೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇತ್ತೀಚೆಗಷ್ಟೆ ಪಕ್ಷದ ವತಿಯಿಂದ ಇಫ್ತಾರ್ ಕೂಟವನ್ನು ವಿಜಯ್ ಆಯೋಜಿಸಿದ್ದರು. ಸ್ವತಃ ತಾವೂ ಸಹ ಮುಸ್ಲೀಮರು ತೊಡುವ ಟೋಪಿ ತೊಟ್ಟು ನಮಾಜು ಮಾಡಿದ್ದರು. ಆದರೆ ಮುಸ್ಲೀಮರ ಬೆಂಬಲ ಪಡೆಯಲು ಮಾಡಿದ್ದ ಈ ಪ್ರಯತ್ನ, ಇದೀಗ ವಿಜಯ್ಗೆ ಮುಳುವಾಗಿ ಪರಿಣಮಿಸಿದೆ, ವಿಜಯ್ ವಿರುದ್ಧ ಇಸ್ಲಾಂ ಧರ್ಮೀಯರಿಂದಲೇ ದೂರು ದಾಖಲಾಗಿದೆ.
ತಮಿಳುನಾಡು ಸುನ್ನತ್ ಜಮಾತ್, ಇದೀಗ ದಳಪತಿ ವಿಜಯ್ ವಿರುದ್ಧ ದೂರು ದಾಖಲು ಮಾಡಿದ್ದು, ವಿಜಯ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಇಸ್ಲಾಂ ಧರ್ಮಕ್ಕೆ ಅವಮಾನ ಆಗಿದೆ ಎಂದು ಆರೋಪಿಸಿದ್ದಾರೆ. ಚೆನ್ನೈನ ಪೊಲೀಸ್ ಆಯುಕ್ತರಿಗೆ ವಿಜಯ್ ವಿರುದ್ಧ ದೂರು ನೀಡಲಾಗಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸಿ ವಿಜಯ್ ವಿರುದ್ಧ ದೂರು ದಾಖಲು ಮಾಡುವಂತೆ ಮನವಿ ಮಾಡಲಾಗಿದೆ.
ವಿಜಯ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಇಸ್ಲಾಂ ಧರ್ಮಕ್ಕೆ ಹಾಗೂ ಮುಸಲ್ಮಾನರಿಗೆ ಅವಮಾನ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ವಿಜಯ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಕುಡುಕರು ಮತ್ತು ರೌಡಿಗಳು ಪಾಲ್ಗೊಂಡಿದ್ದರು ಎಂದು ಸಹ ಹೇಳಲಾಗಿದೆ. ‘ವಿಜಯ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಕುಟುಕರು, ರೌಡಿಗಳು ಭಾಗವಹಿಸಿದ್ದಿದ್ದು ನಮ್ಮ ಗಮನಕ್ಕೆ ಬಂದಿದೆ. ಉಪವಾಸ ಮಾಡದ, ರಂಜಾನ್ನ ಬಗ್ಗೆ ಗೌರವ ಇಲ್ಲದ ಇಂಥಹವರ ಭಾಗವಹಿಸುವಿಕೆಯಿಂದ ಮುಸ್ಲೀಂ ಸಮುದಾಯಕ್ಕೆ ಅವಮಾನ ಆಗಿದೆ. ಅಲ್ಲದೆ ಇಫ್ತಾರ್ ಕೂಟದ ಆಯೋಜನೆ ಸಹ ಅತ್ಯಂತ ಬೇಜವಾಬ್ದಾರಿಯಿಂದ ಕೂಡಿತ್ತು, ವಿಜಯ್ರ ಭದ್ರತೆಯವರು ಅಲ್ಲಿ ಸೇರಿದ್ದವರನ್ನು ಕೆಟ್ಟದಾಗಿ ನಡೆಸಿಕೊಂಡರು, ಜನರನ್ನು ಹಸುಗಳಂತೆ ಎಳೆದು ಬಿಸಾಡುತ್ತಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ವಿಜಯ್ ದೇವರಕೊಂಡ ಸಿನಿಮಾದಿಂದ ಹೊರಬಂದಿದ್ದೇಕೆ ನಟಿ ರುಕ್ಮಿಣಿ ವಸಂತ್
ವಿಜಯ್ ಅವರು ಚೆನ್ನೈನ ವೈಎಂಸಿಎ ಗ್ರೌಂಡ್ಸ್ನಲ್ಲಿ ಕೆಲ ದಿನದ ಹಿಂದೆ ಇಫ್ತಾರ್ ಕೂಟ ಆಯೋಜನೆ ಮಾಡಿದ್ದರು. ಅಂದು ವಿಜಯ್ ಸಹ ಮುಸ್ಲೀಮರೊಟ್ಟಿಗೆ ಸೇರಿ ನಮಾಜು ಮಾಡಿದ್ದರು. ವಿಜಯ್, ಇಫ್ತಾರ್ ಕೂಟ ಆಯೋಜನೆ ಮಾಡಿದ್ದಕ್ಕೆ ಟೀಕೆಗೆ ಗುರಿ ಆಗಿದ್ದರು. ಹಿಂದೂಗಳಿಗೆ ಸಂಬಂಧಿಸಿದ ಹಬ್ಬಗಳನ್ನು ಆಯೋಜನೆ ಮಾಡದ ಬಗ್ಗೆ ಹಲವರು ವಿಜಯ್ ಅನ್ನು ಟೀಕೆ ಮಾಡಿದ್ದರು. ಆದರೆ ಈಗ ಸ್ವತಃ ಮುಸ್ಲೀಮರೇ ತಮಗೆ ವಿಜಯ್ ಅವಮಾನ ಮಾಡಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ವಿಜಯ್, ತಮಿಳಗ ವೆಟ್ರಿ ಕಳಗಂ ಹೆಸರಿನ ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದು, ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್ ಬೆಂಬಲದೊಂದಿಗೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ