ಲತಾ ಮಂಗೇಶ್ಕರ್​ ಅವರ ಚಿನ್ನದಂಥಾ ಧ್ವನಿ ಸದಾ ಅಮರ; ಶ್ರದ್ಧಾಂಜಲಿ ಸಲ್ಲಿಸಿದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ

| Updated By: Lakshmi Hegde

Updated on: Feb 06, 2022 | 11:49 AM

ಅಖಿಲೇಶ್​ ಯಾದವ್​ ಅವರು ಲತಾ ಮಂಗೇಶ್ಕರ್​ರ ಬ್ಲ್ಯಾಕ್​ ಆ್ಯಂಡ್ ಫೋಟೋ ಶೇರ್​ ಮಾಡಿಕೊಂಡು, ಓ ನನ್ನ ದೇಶ ವಾಸಿಗಳೇ, ಆ ಧ್ವನಿಯನ್ನು ಮರೆಯಬೇಡಿ..ಎಂದು ಹೇಳಿದ್ದಾರೆ.

ಲತಾ ಮಂಗೇಶ್ಕರ್​ ಅವರ ಚಿನ್ನದಂಥಾ ಧ್ವನಿ ಸದಾ ಅಮರ; ಶ್ರದ್ಧಾಂಜಲಿ ಸಲ್ಲಿಸಿದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ
ಇಂದಿರಾಗಾಂಧಿಯವರೊಂದಿಗೆ ಲತಾ ಮಂಗೇಶ್ಕರ್​
Follow us on

ಬಾಲಿವುಡ್ ನೈಟಿಂಗೇಲ್​ ಲತಾ ಮಂಗೇಶ್ಕರ್​ ಇಂದು ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ. ಇವರ ನಿಧನಕ್ಕೆ ರಾಜಕೀಯ ಕ್ಷೇತ್ರದ ಗಣ್ಯರು ಕಂಬನಿ ಮಿಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೂರು ಸರಣಿ ಟ್ವೀಟ್ ಮಾಡಿ, ಲತಾ ಮಂಗೇಶ್ಕರ್​ ಮರಣದ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ. ಹಾಗೇ, ಕಾಂಗ್ರೆಸ್ ಸಂಸದ ರಾಹುಲ್ (Rahul Gandhi) ಗಾಂಧಿ, ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ(Priyanka Gandhi Vadra), ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್ ಸೇರಿ ಹಲವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಹಾಗೇ, ಲತಾ ಮಂಗೇಶ್ಕರ್​ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ಇರುವ ಅಪರೂಪದ ಫೋಟೋವನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಶೇರ್​ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ: ಲತಾ ಜಿ ನಿಧನರಾದರು ಎಂಬ ನೋವಿನ ಸುದ್ದಿ ಕೇಳಿದೆ. ಹಲವು ದಶಕಗಳಿಂದಲೂ ಭಾರತದ ಅತ್ಯಂತ ಪ್ರೀತಿಯ ಧ್ವನಿಯಾಗಿ ಇದ್ದರು. ಲತಾ ಜೀ ಅವರ ಬಂಗಾರದಂಥ ಧ್ವನಿ ಸದಾ ಅಮರ. ಅವರ ಪ್ರತಿಯೊಬ್ಬ ಅಭಿಮಾನಿಯ ಹೃದಯಲ್ಲೂ ಅದು ಪ್ರತಿಧ್ವನಿಸುತ್ತಿರುತ್ತದೆ. ಲತಾ ಮಂಗೇಶ್ಕರ್​ ಅವರ ಕುಟುಂಬಕ್ಕೆ, ಸ್ನೇಹಿತರಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ.

ಪ್ರಿಯಾಂಕಾ ಗಾಂಧಿ ವಾದ್ರಾ: ಭಾರತೀಯ ಸಂಗೀತವೆಂಬ ಉದ್ಯಾನವನ್ನು ಅಲಂಕರಿಸಿದ್ದ ಲತಾ ಮಂಗೇಶ್ಕರ್​ ಜೀ ಇನ್ನಿಲ್ಲವೆಂಬ ಸುದ್ದಿ ಕೇಳಲ್ಪಟ್ಟೆ. ದೇಶದ ಕಲಾ ಪ್ರಪಂಚಕ್ಕೆ ಇದೊಂದು ಬಹುದೊಡ್ಡ, ತುಂಬಲಾರದ ನಷ್ಟ.  ಅವರ ಆತ್ಮ ದೇವರಲ್ಲಿ ಲೀನವಾಗಲಿ. ಹಾಗೇ, ಲತಾ ಜೀ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಭಗವಂತ ನೀಡಲಿ.

ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್​: ಸಂಗೀತ ಕ್ಷೇತ್ರದ ದಂತಕತೆ ಲತಾ ಮಂಗೇಶ್ಕರ್​ ಅವರ ನಿಧನದ ಸುದ್ದಿ ಕೇಳಿ, ನಾನು ಹಾಗೂ ನನ್ನ ಪತ್ನಿ ತುಂಬ ದುಃಖಿತರಾಗಿದ್ದೇವೆ. ಲತಾ ಜಿ ತಮ್ಮ ಇಂಪಾದ ಧ್ವನಿ, ಗಾಯನದಿಂದ ಇಡೀ ಸಂಗೀತ ಜಗತ್ತನ್ನು ಶ್ರೀಮಂತಗೊಳಿಸಿದರು. ಇಡೀ ವಿಶ್ವದ ಸಂಗೀತ ಪ್ರೇಮಿಗಳ ಹೃದಯದಲ್ಲಿ ಲತಾ ಜೀ ಸದಾ ಶಾಶ್ವತ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ.

ಟಿಎಂಸಿ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ: ಅಗಲಿದ ಲತಾ ಮಂಗೇಶ್ಕರ್ ಅವರಿಗೆ ನನ್ನ ಶ್ರದ್ಧಾಂಜಲಿಗಳು. ಭಾರತ ರತ್ನ ಪುರಸ್ಕೃತ ಲತಾ ಜಿ ಭಾರತದ ಐಕಾನ್​ ಆಗಿದ್ದರು. ನಿಜಕ್ಕೂ ಭಾರತದ ಕೋಗಿಲೆಯೇ ಆಗಿದ್ದ ಅವರ ಪ್ರತಿಭೆಗೆ ಗೌರವ ಪೂರ್ವಕ ನಮನಗಳು.  ವಿಶ್ವಾದ್ಯಂತ ಇರುವ ಅವರ ಅಭಿಮಾನಿಗಳು, ಅನುಯಾಯಿಗಳಂತೆ ನಾನೂ ಕೂಡ ಅವರ ಇಂಪಾದ ಧ್ವನಿಗೆ ಮಾರುಹೋಗಿದ್ದೆ.

ಇನ್ನು ಅಖಿಲೇಶ್​ ಯಾದವ್​ ಅವರು ಲತಾ ಮಂಗೇಶ್ಕರ್​ರ ಬ್ಲ್ಯಾಕ್​ ಆ್ಯಂಡ್ ಫೋಟೋ ಶೇರ್​ ಮಾಡಿಕೊಂಡು, ಓ ನನ್ನ ದೇಶ ವಾಸಿಗಳೇ, ಆ ಧ್ವನಿಯನ್ನು ಮರೆಯಬೇಡಿ..ಎಂದು ಹೇಳಿದ್ದಾರೆ. ए मेरे वतन के लोगों ದೇಶ ಭಕ್ತಿ ಗೀತೆಯನ್ನು ಲತಾ ಮಂಗೇಶ್ಕರ್​ ಅವರೇ ಹಾಡಿದ್ದರು. ಈ ಮೂಲಕ ಅಖಿಲೇಶ್​ ಯಾದವ್​ ಲತಾ ಜೀಯವರಿಗೆ ಗೌರವ ಸಲ್ಲಿಸಿದ್ದಾರೆ.

ಇದನ್ನೂ ಓದಿ: Lata Mangeshkar: ಲತಾ ಮಂಗೇಶ್ಕರ್ ಅವರ ಇಡೀ ಕುಟುಂಬವೇ ಸಂಗೀತಕ್ಕೆ ಮುಡಿಪಾಗಿತ್ತು

Published On - 11:48 am, Sun, 6 February 22