ಅಂದು ಶಿವಣ್ಣ, ಇಂದು ಧನುಷ್; ‘ಓಂ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಘೋಷಣೆ
‘ಓಂ’ ಸಿನಿಮಾದ ಹೆಸರು ಕೇಳಿದರೆ ಸಿನಿಪ್ರಿಯರಿಗೆ ಥ್ರಿಲ್ ಆಗುತ್ತದೆ. ಆ ಚಿತ್ರದ ಶೀರ್ಷಿಕೆಗೆ ಇರುವ ಪವರ್ ಅಂಥದ್ದು. ನಿರ್ದೇಶಕ ಉಪೇಂದ್ರ ಮತ್ತು ನಟ ಶಿವರಾಜ್ಕುಮಾರ್ ಅವರ ಕಾಂಬಿನೇಷನ್ನಲ್ಲಿ ಬಂದ ಆ ಸಿನಿಮಾದ ಕ್ರೇಜ್ ಸಾಮಾನ್ಯದ್ದಲ್ಲ. ‘ಓಂ’ ಶೀರ್ಷಿಕೆ ಈಗ ಕಾಲಿವುಡ್ನಲ್ಲಿ ಕೂಡ ಸದ್ದು ಮಾಡುತ್ತಿದೆ.

ಶಿವರಾಜ್ಕುಮಾರ್ ಅವರ ವೃತ್ತಿಜೀವನದಲ್ಲಿ ‘ಓಂ’ ಸಿನಿಮಾಗೆ ವಿಶೇಷ ಸ್ಥಾನ ಇದೆ. ಉಪೇಂದ್ರ ನಿರ್ದೇಶನ ಮಾಡಿದ್ದ ಆ ಸಿನಿಮಾದ ಶೀರ್ಷಿಕೆ ಕೇಳಿದರೆ ಅಭಿಮಾನಿಗಳು ಈಗಲೂ ಥ್ರಿಲ್ ಆಗುತ್ತಾರೆ. ‘ಓಂ’ ಸಿನಿಮಾ (Om Movie) 1995ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಅಷ್ಟಕ್ಕೂ ಈಗ ಮತ್ತೆ ಆ ಸಿನಿಮಾ ಬಗ್ಗೆ ಮಾತನಾಡಲು ಕಾರಣ ಇದೆ. ತಮಿಳಿನಲ್ಲಿ ಧನುಷ್ (Dhanush) ನಟನೆಯ ಹೊಸ ಸಿನಿಮಾಗೆ ‘ಓಂ’ ಎಂದು ಶೀರ್ಷಿಕೆ ಇಡಲಾಗಿದೆ. ಇಂಥ ಪವರ್ಫುಲ್ ಟೈಟಲ್ ಇಟ್ಟಿದ್ದಕ್ಕೆ ಸಿನಿಮಾ ಮೇಲಿನ ನಿರೀಕ್ಷೆ ಜಾಸ್ತಿ ಆಗಿದೆ.
ಇದು ಧನುಷ್ ನಟಿಸಲಿರುವ 55ನೇ ಸಿನಿಮಾ. ಈ ಚಿತ್ರವನ್ನು ಇಷ್ಟು ದಿನಗಳ ಕಾಲ ತಾತ್ಕಾಲಿಕವಾಗಿ ‘D55’ ಎಂದು ಕರೆಯಲಾಗುತ್ತಿತ್ತು. ಶೀರ್ಷಿಕೆ ಏನು ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾದಿದ್ದರು. ಇದೀಗ ಈ ಬಹುನಿರೀಕ್ಷಿತ ಚಿತ್ರಕ್ಕೆ ಅಧಿಕೃತವಾಗಿ ಶೀರ್ಷಿಕೆ ಅನೌನ್ಸ್ ಆಗಿದೆ. ಭರ್ಜರಿ ಟೀಸರ್ ಮೂಲಕ ‘ಓಂ’ ಶೀರ್ಷಿಕೆಯನ್ನು ಅನಾವರಣ ಮಾಡಲಾಗಿದೆ.
‘ಅಮರನ್’ ಖ್ಯಾತಿಯ ರಾಜ್‌ಕುಮಾರ್ ಪೆರಿಯಸಾಮಿ ಅವರ ನಿರ್ದೇಶನದ ಈ ಚಿತ್ರವು ಇದೇ ವರ್ಷ ಅಕ್ಟೋಬರ್ 16ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಧನುಷ್ ಜೊತೆಗೆ ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ, ನಟಿ ಸಾಯಿ ಪಲ್ಲವಿ ಮತ್ತು ಶ್ರೀಲೀಲಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವುದರಿಂದ ಈ ಚಿತ್ರದ ಹೈಪ್ ಹೆಚ್ಚಾಗಿದೆ.
‘ಓಂ’ ಸಿನಿಮಾದ ಟೀಸರ್:
ಚಿತ್ರದ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿರುವ ಸಣ್ಣ ಟೀಸರ್ ಸಖತ್ ಸದ್ದು ಮಾಡುತ್ತಿದೆ. ಕತ್ತಲ ಲೋಕದ ದೃಶ್ಯಗಳು, ಹಿನ್ನೆಲೆ ಸಂಗೀತ ಮತ್ತು ರಗಡ್ ಮೇಕಿಂಗ್ ಶೈಲಿ ನೋಡಿದರೆ ಇದೊಂದು ಪಕ್ಕಾ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಎಂಬುದು ಗೊತ್ತಾಗುತ್ತಿದೆ. ಟೀಸರ್‌ನಲ್ಲಿ ಹೆಚ್ಚೇನೂ ಕಥೆ ಬಿಟ್ಟುಕೊಟ್ಟಿಲ್ಲ. ಆದರೆ ಅಸಮಾನತೆ ಮತ್ತು ಹೋರಾಟದ ಕಥೆ ಈ ಸಿನಿಮಾದಲ್ಲಿ ಇರಬಹುದು ಎಂಬ ಅನುಮಾನ ಮೂಡಿದೆ.
ಇದನ್ನೂ ಓದಿ: ಧನುಷ್ ಜತೆ ಡೇಟಿಂಗ್ ಗಾಸಿಪ್: ಪ್ರೀತಿ ಬಗ್ಗೆ ಮನಸಾರೆ ಮಾತನಾಡಿದ ಮೃಣಾಲ್ ಠಾಕೂರ್
‘ಓಂ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಧನುಷ್ ರಗಡ್ ಅವತಾರ ತಾಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಧನುಷ್ ಲುಕ್ ವೈರಲ್ ಆಗಿದೆ. ಪೋಸ್ಟರ್‌ನಲ್ಲಿ ಬಳಸಿರುವ ಡಾರ್ಕ್ ಕಲರ್ ಗ್ರೇಡಿಂಗ್ ಮತ್ತು ವಿನ್ಯಾಸವು ಗಮನ ಸೆಳೆದಿದೆ. ಧನುಷ್ ಮತ್ತು ಮಮ್ಮುಟ್ಟಿ ಅವರ ನಡುವಿನ ಕಾಂಬಿನೇಷನ್ ಸೀನ್‌ಗಳನ್ನು ನೋಡಲು ಸಿನಿಪ್ರಿಯರು ಕಾಯುತ್ತಿದ್ದಾರೆ. ಸಾಯಿ ಅಭ್ಯಂಕರ್ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಧನುಷ್ ಅವರ ಸ್ವಂತ ಬ್ಯಾನರ್ ‘ವಂಡರ್‌ಬಾರ್ ಫಿಲ್ಮ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




