
ಡಿಸೆಂಬರ್ 5ರಂದು ಒಂದಷ್ಟು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ರಣವೀರ್ ಸಿಂಗ್ ನಟನೆಯ ‘ಧುರಂಧರ್’ (Dhurandhar), ನಂದಮೂರಿ ಬಾಲಕೃಷ್ಣ ನಟನೆಯ ‘ಅಖಂಡ 2’ (Akhanda 2) ಸಿನಿಮಾಗಳು ಪ್ರಮುಖವಾಗಿವೆ. ಇವುಗಳ ಜೊತೆ ಬೇರೆ ಬೇರೆ ಭಾಷೆಯ ಒಂದಷ್ಟು ಸಿನಿಮಾಗಳು ತೆರೆಗೆ ಬರುತ್ತಿವೆ. ಪ್ರತಿ ಶುಕ್ರವಾರದಂತೆ ಈ ಶುಕ್ರವಾರ ಕೂಡ ಬಾಕ್ಸ್ ಆಫೀಸ್ನಲ್ಲಿ ಪೈಪೋಟಿ ಜೋರಾಗುತ್ತಿದೆ. ‘ಧುರಂಧರ್’ ಮೂಲಕ ರಣವೀರ್ ಸಿಂಗ್ ಅವರು ಗೆಲ್ಲುವ ಭರವಸೆ ಹೊಂದಿದ್ದಾರೆ. ಕನ್ನಡದ ‘ಧರ್ಮಂ’ ಸಿನಿಮಾ ಕೂಡ ಡಿಸೆಂಬರ್ 5ರಂದು ಬಿಡುಗಡೆ ಆಗುತ್ತಿದೆ.
ಟ್ರೇಲರ್ ಮೂಲಕ ನಿರೀಕ್ಷೆ ಮೂಡಿಸಿರುವ ‘ಧುರಂಧರ್’ ಸಿನಿಮಾದಲ್ಲಿ ನೈಜ ಘಟನೆ ಆಧಾರಿತ ಕಥೆ ಇದೆ. ಬಿಡುಗಡೆಗೂ ಮೊದಲೇ ಈ ಸಿನಿಮಾ ಕೆಲವು ವಿವಾದಗಳನ್ನು ಮಾಡಿಕೊಂಡಿದೆ. ಹುತಾತ್ಮ ಮೇಜರ್ ಮೋಹಿತ್ ಶರ್ಮಾ ಅವರ ಜೀವನವನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಹಾಗಾಗಿ ಅವರ ಕುಟುಂಬದವರು ತಕರಾರು ತೆಗೆದಿದ್ದಾರೆ. ವಿವಾದ ಆದ ಬಳಿಕ ‘ಈ ಸಿನಿಮಾಗೂ ಮೋಹಿತ್ ಶರ್ಮಾ ಅವರ ಜೀವನಕ್ಕೂ ಸಂಬಂಧ ಇಲ್ಲ’ ಎಂದು ಚಿತ್ರತಂಡ ಹೇಳಿದೆ. ಹಾಗಾಗಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.
‘ಅಖಂಡ 2’ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ಅವರು ಸಿಕ್ಕಾಪಟ್ಟೆ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಬಾಲಯ್ಯ ಅವರ ಸಿನಿಮಾಗಳ ಶೈಲಿಯೇ ಬೇರೆ. ಅವರ ಸಿನಿಮಾಗಳಲ್ಲಿ ಲಾಜಿಕ್ ಅಂದರೆ ಏನು ಅಂತ ಹುಡುಕಲು ಸಾಧ್ಯವೇ ಇಲ್ಲ. ಹಾಗಿದ್ದರೂ ಕೂಡ ಅಭಿಮಾನಿಗಳು ಅವರ ಸಿನಿಮಾವನ್ನು ಇಷ್ಟಪಡುತ್ತಾರೆ. ‘ಅಖಂಡ 2’ ಸಿನಿಮಾ ನೋಡಲು ಬಾಲಯ್ಯ ಅಭಿಮಾನಿಗಳು ಕಾತರರಾಗಿದ್ದಾರೆ.
ಕನ್ನಡದ ‘ಧರ್ಮಂ’ ಸಿನಿಮಾಗೆ ನಾಗಮುಖ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಕಥಾಹಂದರ ಏನು ಎಂಬುದನ್ನು ಟ್ರೇಲರ್ನಲ್ಲಿ ತಿಳಿಸಲಾಗಿದೆ. ಜಾತಿ ವ್ಯವಸ್ಥೆಯ ಬಗ್ಗೆ ನಿರ್ದೇಶಕ ನಾಗಮುಖ ಅವರು ಈ ಸಿನಿಮಾ ಮಾಡಿದ್ದಾರೆ. ಸಾಯಿ ಶಶಿಕುಮಾರ್, ವಿರಾನಿಕಾ ಶೆಟ್ಟಿ, ಅಶೋಕ್ ಹೆಗ್ಡೆ, ಭೀಷ್ಮ ರಾಮಯ್ಯ, ಎಸ್.ಕೆ. ರಾಮಕೃಷ್ಣ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ‘ಅಖಂಡ 2’ಗೆ ಸಿಕ್ಕಿತು ತೆಲಂಗಾಣ ಸರ್ಕಾರದ ಅನುಮತಿ ಆದರೆ…
ಮಮ್ಮೂಟ್ಟಿ ಅಭಿನಯದ ‘ಕಲಂ ಕಾವಲ್’ ಸಿನಿಮಾ ಸಹ ಡಿಸೆಂಬರ್ 5ರಂದು ರಿಲೀಸ್ ಆಗುತ್ತಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಹಾನಿ ಈ ಸಿನಿಮಾದಲ್ಲಿ ಇದೆ. ಜಿತಿನ್ ಕೆ. ಜೋಸ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಮಮ್ಮೂಟ್ಟಿ ಕಂಪನಿ’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ಸಖತ್ ನಿರೀಕ್ಷೆ ಇದೆ. ಈ ಎಲ್ಲ ಸಿನಿಮಾಗಳ ಜೊತೆ ಕನ್ನಡದಲ್ಲಿ ‘ಚಿತ್ರಲಹರಿ’, ‘ಕೆಂಪು ಹಳದಿ ಹಸಿರು’ ಸಿನಿಮಾಗಳು ಕೂಡ ತೆರೆಕಾಣುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.