ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarjaa) ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಅದು ಅಂತಿಂಥ ಸುದ್ದಿಯಲ್ಲ, ಬದಲಾಗಿ ಮನೆಗೆ ಹೊಸ ಅತಿಥಿ ಆಗಮಿಸಲಿರುವ ಶುಭ ಸುದ್ದಿ. ಹೌದು, ತಾನು ತಂದೆಯಾಗುತ್ತಿರುವ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಧ್ರುವ ಸರ್ಜಾ ಬಹಿರಂಗಪಡಿಸಿದ್ದಾರೆ. ಪತ್ನಿಗೆ ಪ್ರೇರಣಾಗೆ 9 ತಿಂಗಳಾಗಿದ್ದು, ಸೆಪ್ಟೆಂಬರ್ನಲ್ಲಿ ಸರ್ಜಾ ಕುಟುಂಬಕ್ಕೆ ಪುಟ್ಟ ಪುಟಾಣಿಯ ಆಗಮನದ ನಿರೀಕ್ಷೆಯಲ್ಲಿದೆ ಧ್ರುವ-ಪ್ರೇರಣಾ ದಂಪತಿ. ಈ ಶುಭ ಸುದ್ದಿಯನ್ನು ವಿಡಿಯೋ ಹಂಚಿಕೊಳ್ಳುವ ಮೂಲಕ ಧ್ರುವ ಸರ್ಜಾ ಬಹಿರಂಗಪಡಿಸಿದ್ದಾರೆ.
ಪ್ರೇರಣಾ ಅವರ ಬೇಬಿ ಬಂಪ್ ವಿಡಿಯೋ ಶೇರ್ ಮಾಡಿರುವ ಧ್ರುವ ಸರ್ಜಾ, ನಾವು ಜೀವನದ ಹೊಸ ಹಂತವನ್ನು ಪ್ರವೇಶಿಸುತ್ತಿದ್ದೇವೆ, ದೈವಿಕ ಪುಣಾಣಿ ಬೇಗ ಬರಲಿ ಎಂದು ಬರೆದುಕೊಂಡಿದ್ದಾರೆ. ವಿಶೇಷ ಎಂದರೆ ಚಿರು ಸರ್ಜಾ ಅವರ ಅಗಲಿಕೆಯ ಬಳಿಕ ಧ್ರುರ್ವ ಸರ್ಜಾ ಅವರ ಮನೆಯಲ್ಲಿ ಅಂತಹ ಯಾವುದೇ ಶುಭಘಳಿಗೆ ನಡೆದಿರಲಿಲ್ಲ. ಈ ಹಿಂದೆ ಚಿರು ಪುತ್ರ ರಾಯನ್ ಸರ್ಜಾ ಜನಿಸಿದರೂ, ಅದು ಮೇಘನಾ ಸರ್ಜಾ ಕುಟುಂಬದಲ್ಲಾಗಿತ್ತು. ಅಷ್ಟೇ ಅಲ್ಲದೆ ಇತ್ತೀಚೆಗೆ ಧ್ರುವ ಸರ್ಜಾ ಅವರ ಅಜ್ಜಿ ಲಕ್ಷ್ಮೀದೇವಮ್ಮ ಕೂಡ ತೀರಿಕೊಂಡಿದ್ದರು.
ಚಿರು ಅಗಲಿಕೆಯ 2 ವರ್ಷಗಳ ಬಳಿಕ ಸರ್ಜಾ ಕುಟುಂಬಕ್ಕೆ ವಿಶೇಷ ಅತಿಥಿಯ ಆಗಮನವಾಗುತ್ತಿದೆ. ಇದೇ ಖುಷಿಯಲ್ಲಿ ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿಗಳಿದ್ದು, ಇದೇ ತಿಂಗಳು ಪುಟಾಣಿಯನ್ನು ಬರ ಮಾಡಿಕೊಳ್ಳುವ ಖುಷಿಯಲ್ಲಿದ್ದಾರೆ. ಹೀಗಾಗಿಯೇ ಧ್ರುವ ಸರ್ಜಾ ಚಿತ್ರೀಕರಣದಿಂದ ಕೂಡ ಬಿಡುವು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
2019 ರಲ್ಲಿ ಧ್ರುವ ಸರ್ಜಾ ಬಾಲ್ಯದ ಗೆಳೆತಿ ಪ್ರೇರಣಾರನ್ನು ವಿವಾಹವಾಗಿದ್ದರು. ಈ ಶುಭ ಸಮಾರಂಭದ ಬೆನ್ನಲ್ಲೇ, ಅಂದರೆ 2020 ರಲ್ಲಿ ಸರ್ಜಾ ಕುಟುಂಬದಿಂದ ಚಿರಂಜೀವಿ ಸರ್ಜಾ ಅಗಲಿದ್ದರು. ಇದಾದ ಬಳಿಕ ಸರ್ಜಾ ಕುಟುಂಬದಲ್ಲಿ ಯಾವುದೇ ಶುಭ ಸಮಾರಂಭ ನಡೆದಿರಲಿಲ್ಲ. ಇದೀಗ ಧ್ರುವ ಸರ್ಜಾ ದಂಪತಿಗಳ ಮೂಲಕ ಮತ್ತೊಮ್ಮೆ ಕುಟುಂಬದಲ್ಲಿ ಸಂತಸ ಮನೆ ಮಾಡಿರುವುದು ವಿಶೇಷ.
ಸದ್ಯ ಮಾರ್ಟಿನ್ ಚಿತ್ರದಲ್ಲಿ ತೊಡಗಿಸಿಕೊಂಡಿರುವ ಆ್ಯಕ್ಷನ್ ಪ್ರಿನ್ಸ್, ಶೀಘ್ರದಲ್ಲೇ ಜೋಗಿ ಪ್ರೇಮ್ ಅವರ ಮುಂದಿನ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.
Published On - 1:10 pm, Sat, 3 September 22