ನಟ ದಿಲೀಪ್ ಕುಮಾರ್ ಬಗ್ಗೆ ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿದೆ ಕೆಟ್ಟ ಸುದ್ದಿ; ಪತ್ನಿ ನೀಡಿದ ಸ್ಪಷ್ಟನೆ ಏನು?
Dilip Kumar Death Hoax: ದಿಲೀಪ್ ಕುಮಾರ್ ನಿಧನರಾದರು ಎಂಬ ಗಾಳಿ ಸುದ್ದಿ ವಾಟ್ಸ್ಆ್ಯಪ್ನಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ರವಾನೆ ಆಗುತ್ತಿದೆ. ಈ ಬಗ್ಗೆ ದಿಲೀಪ್ ಪತ್ನಿ ಸಾಯಿರಾ ಬಾನು ಸ್ಪಷ್ಟನೆ ನೀಡಿದ್ದಾರೆ.
ಬಾಲಿವುಡ್ನ ಹಿರಿಯ ನಟ ದಿಲೀಪ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಭಾನುವಾರ (ಜೂ.6) ಬೆಳಗ್ಗೆ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅತ್ತ ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಅನೇಕರ ವಾಟ್ಸ್ಆ್ಯಪ್ನಲ್ಲಿ ಕೆಟ್ಟ ಸುದ್ದಿ ಹರಿದಾಡುಲು ಆರಂಭಿಸಿತು. ದಿಲೀಪ್ ಕುಮಾರ್ ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಯಾರೋ ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ. ಈ ಬಗ್ಗೆ ದಿಲೀಪ್ ಕುಮಾರ್ ಪತ್ನಿ ಸಾಯಿರಾ ಬಾನು ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಂತೂ ಖ್ಯಾತ ಸೆಲೆಬ್ರಿಟಿಗಳ ಸಾವಿನ ಬಗ್ಗೆ ವದಂತಿ ಹಬ್ಬಿಸಲಾಗುತ್ತಿದೆ. ಕೊವಿಡ್ ಸಂದರ್ಭವಾದ್ದರಿಂದ ಜನರು ಇಂಥ ಸುದ್ದಿಗಳಿಗೆ ಬಹುಬೇಗ ಕಿವಿಗೊಡುತ್ತಾರೆ. ಇದನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಕೆಲವರು ಇಲ್ಲಸಲ್ಲದ ವದಂತಿ ಸೃಷ್ಟಿಸುತ್ತಿದ್ದಾರೆ. ದಿಲೀಪ್ ಕುಮಾರ್ ವಿಚಾರದಲ್ಲಿಯೂ ಹೀಗೆ ಆಗಿದೆ. ದಿಲೀಪ್ ನಿಧನರಾದರು ಎಂಬ ಗಾಳಿ ಸುದ್ದಿ ವಾಟ್ಸ್ಆ್ಯಪ್ನಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ರವಾನೆ ಆಗುತ್ತಿದೆ. ಈ ಬಗ್ಗೆ ದಿಲೀಪ್ ಕುಮಾರ್ ಪತ್ನಿ ಸಾಯಿರಾ ಬಾನು ಸ್ಪಷ್ಟನೆ ನೀಡಿದ್ದಾರೆ.
ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಿಲೀಪ್ ಆರೋಗ್ಯದ ಬಗ್ಗೆ ಸಾಯಿರಾ ಬಾನು ಸೋಶಿಯಲ್ ಮೀಡಿಯಾ ಮೂಲಕ ಅಪ್ಡೇಟ್ ನೀಡಿದ್ದಾರೆ. ‘ವಾಟ್ಸ್ಆ್ಯಪ್ನಲ್ಲಿ ಬರುವ ಫಾರ್ವರ್ಡ್ ಮೆಸೇಜ್ಗಳನ್ನು ನಂಬಬೇಡಿ. ದಿಲೀಪ್ ಕುಮಾರ್ ಆರೋಗ್ಯ ಸ್ಥಿರವಾಗಿದೆ. ನಿಮ್ಮೆಲ್ಲರ ಹಾರೈಕೆ ಮತ್ತು ಪ್ರಾರ್ಥನೆಗಳಿಗೆ ಧನ್ಯವಾಗಳು. ವೈದ್ಯರು ಹೇಳುವ ಪ್ರಕಾರ ಇನ್ನು 2 ಅಥವಾ 3 ದಿನಗಳಲ್ಲಿ ಅವರನ್ನು ಮನೆಗೆ ಕರೆದುಕೊಂಡು ಹೋಗುತ್ತೇವೆ’ ಎಂದು ಸಾಯಿರಾ ಬಾನು ಟ್ವೀಟ್ ಮಾಡಿದ್ದಾರೆ.
Don’t believe in WhatsApp forwards. Saab is stable. Thank you for your heart-felt duas and prayers. As per doctors, he should be home in 2-3 days. Insh’Allah.
— Dilip Kumar (@TheDilipKumar) June 6, 2021
ದಿಲೀಪ್ ಕುಮಾರ್ ಅವರಿಗೆ ಈಗ 98 ವರ್ಷ ವಯಸ್ಸು. ಹಾಗಾಗಿ ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಸದ್ಯ ನುರಿತ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಸದ್ಯ ಅವರು ಆಕ್ಸಿಜನ್ ಸಪೋರ್ಟ್ನಲ್ಲಿ ಇದ್ದಾರೆ. ಕಳೆದ ತಿಂಗಳು ಕೂಡ ಇದೇ ಆಸ್ಪತ್ರೆಗೆ ದಿಲೀಪ್ ಕುಮಾರ್ ದಾಖಲಾಗಿದ್ದರು. ಸಹಜ ಆರೋಗ್ಯ ತಪಾಸಣೆಗಾಗಿ ಅವರು ತೆರಳಿದ್ದರು ಎನ್ನಲಾಗಿತ್ತು. ಎರಡು ದಿನಗಳ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಕಳೆದ ವರ್ಷ ಕೊರೊನಾ ವೈರಸ್ನಿಂದಾಗಿ ಲಾಕ್ಡೌನ್ ಆರಂಭ ಆಗುತ್ತಿದ್ದಂತೆಯೇ ದಿಲೀಪ್ ಕುಮಾರ್ ಆರೋಗ್ಯದ ಬಗ್ಗೆ ಕುಟುಂಬದವರು ಹೆಚ್ಚಿನ ಕಾಳಜಿ ವಹಿಸಲು ಆರಂಭಿದ್ದರು.
1944ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ದಿಲೀಪ್ ಕುಮಾರ್ ಅವರು 5 ದಶಕಗಳ ಕಾಲ ಸಕ್ರಿಯರಾಗಿದ್ದರು. ಕೊಹಿನೂರ್, ಮುಘಲ್-ಏ-ಆಜಮ್, ಶಕ್ತಿ, ನಯಾ ದೌರ್, ರಾಮ್ ಔರ್ ಶ್ಯಾಮ್ ಮುಂತಾದ ಕ್ಲಾಸಿಕ್ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ.
ಇದನ್ನೂ ಓದಿ:
Kirron Kher: ಅನುಪಮ್ ಖೇರ್ ಪತ್ನಿ, ಖ್ಯಾತ ನಟಿ ಕಿರಣ್ ಖೇರ್ ನಿಧನದ ವದಂತಿಗೆ ಬ್ರೇಕ್