ರಾಮ್ ಪೋತಿನೇನಿ ಹುಟ್ಟುಹಬ್ಬಕ್ಕೆ ಬಂತು ‘ಡಬಲ್​ ಇಸ್ಮಾರ್ಟ್​’ ಟೀಸರ್​

ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ನಟ ರಾಮ್ ಪೋತಿನೇನಿ ಕಾಂಬಿನೇಷನ್ ಮೇಲೆ ಸಿನಿಪ್ರಿಯರಿಗೆ ಭಾರಿ ನಿರೀಕ್ಷೆ ಇದೆ. ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆಯೇ ‘ಡಬಲ್ ಇಸ್ಮಾರ್ಟ್’ ಚಿತ್ರದ ಟೀಸರ್​ ಮೂಡಿಬಂದಿದೆ. ರಾಮ್ ಪೋತಿನೇನಿ ಹುಟ್ಟುಹಬ್ಬದ ಪ್ರಯುಕ್ತ ಟೀಸರ್​ ರಿಲೀಸ್​ ಮಾಡಲಾಗಿದೆ. ಈ ಸಿನಿಮಾದಲ್ಲಿ ಸಂಜಯ್​ ದತ್​ ವಿಲನ್​ ಆಗಿದ್ದಾರೆ.

ರಾಮ್ ಪೋತಿನೇನಿ ಹುಟ್ಟುಹಬ್ಬಕ್ಕೆ ಬಂತು ‘ಡಬಲ್​ ಇಸ್ಮಾರ್ಟ್​’ ಟೀಸರ್​
ರಾಮ್​ ಪೋತಿನೇನಿ
Follow us
ಮದನ್​ ಕುಮಾರ್​
|

Updated on: May 15, 2024 | 6:04 PM

2019ರಲ್ಲಿ ತೆರೆಕಂಡಿದ್ದ ‘ಇಸ್ಮಾರ್ಟ್​ ಶಂಕರ್​’ ಸಿನಿಮಾ ಭರ್ಜರಿ ಹಿಟ್​ ಆಗಿತ್ತು. ಆ ಸಿನಿಮಾಗೆ ಪುರಿ ಜಗನ್ನಾಥ್​ (Puri Jagannadh) ಅವರು ನಿರ್ದೇಶನ ಮಾಡಿದ್ದರು. ರಾಮ್​ ಪೋತಿನೇನಿ ಅವರು ಮುಖ್ಯ ಪಾತ್ರ ಮಾಡಿ ದೊಡ್ಡ ಗೆಲುವು ಕಂಡಿದ್ದರು. ಈಗ ಆ ಸಿನಿಮಾದ ಸೀಕ್ವೆಲ್​ ಸಿದ್ಧವಾಗುತ್ತಿದೆ. ‘ಡಬಲ್​ ಇಸ್ಮಾರ್ಟ್​’ (Double Ismart) ಶೀರ್ಷಿಕೆಯ ಈ ಚಿತ್ರದಲ್ಲಿ ಮನರಂಜನೆ ಕೂಡ ಡಬಲ್​ ಆಗಿರಲಿದೆ ಎಂಬುದನ್ನು ತಿಳಿಸಲು ಇಂದು (ಮೇ 15) ಟೀಸರ್​ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರಾಮ್​ ಪೋತಿನೇನಿ (Ram Pothineni) ಸಿಕ್ಕಾಪಟ್ಟೆ ಮಾಸ್​ ಅವತಾರ ತಾಳಿದ್ದಾರೆ.

ಮಾಸ್​ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ನಟ ರಾಮ್ ಪೋತಿನೇನಿ ಅವರ ಕಾಂಬಿನೇಷನ್ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಮನೆ ಮಾಡಿದೆ. ಆ ನಿರೀಕ್ಷೆಗೆ ತಕ್ಕಂತೆಯೇ ‘ಡಬಲ್ ಇಸ್ಮಾರ್ಟ್’ ಸಿನಿಮಾ ಮೂಡಿಬರುತ್ತಿದೆ ಎಂಬುದಕ್ಕೆ ಈಗ ಬಿಡುಗಡೆ ಆಗಿರುವ ಟೀಸರ್​ನಲ್ಲಿ ಸುಳಿವು ಸಿಕ್ಕಿದೆ. ಇಂದು (ಮೇ 15) ಡೈನಾಮಿಕ್ ಸ್ಟಾರ್ ರಾಮ್ ಪೋತಿನೇನಿ ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಟೀಸರ್​ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ‘ಪುಷ್ಪ 2’ ಸಿನಿಮಾದಲ್ಲಿ ಸಂಜಯ್​ ದತ್​? ನೆನಪಾಗುತ್ತಿದೆ ‘ಕೆಜಿಎಫ್​ 2’ ಸೂತ್ರ

ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ದೃಶ್ಯಗಳು ಇರಲಿವೆ. ಆ ಮೂಲಕ ರಾಮ್ ಪೋತಿನೇನಿ ಅವರು ಮಾಸ್​ ಮನರಂಜನೆ ನೀಡಲಿದ್ದಾರೆ. ಅವರಿಗೆ ನಾಯಕಿಯಾಗಿ ಕಾವ್ಯಾ ಥಾಪರ್ ನಟಿಸಿದ್ದಾರೆ. ಸದ್ಯ, ಸೌತ್​ ಸಿನಿಮಾಗಳಲ್ಲಿ ಖಳನಾಗಿ ಅಬ್ಬರಿಸುತ್ತಿರುವ ಸಂಜಯ್ ದತ್ ಅವರು ‘ಡಬಲ್​ ಇಸ್ಮಾರ್ಟ್​’ ಚಿತ್ರದಲ್ಲೂ ವಿಲನ್​ ಆಗಿ ಅಭಿನಯಿಸಿದ್ದಾರೆ. ರಾಮ್​ ಪೋತಿನೇನಿ ವಿರುದ್ಧ ಅವರು ಆರ್ಭಟಿಸಿದ್ದಾರೆ. ಚಿತ್ರದ ಟೀಸರ್​ನಲ್ಲಿ ರಾಮ್ ಪೋತಿನೇನಿ ಮತ್ತು ಸಂಜಯ್​ ದತ್​ ಅವರು ಮುಖಾಮುಖಿ ಆಗಿದ್ದಾರೆ.

‘ಡಬಲ್​ ಇಸ್ಮಾರ್ಟ್​’ ಸಿನಿಮಾದಲ್ಲಿ ಡಬಲ್ ಆ್ಯಕ್ಷನ್, ಡಬಲ್ ಫನ್‌, ಡಬಲ್ ಎನರ್ಜಿ ಇರಲಿದೆ ಎಂದು ಚಿತ್ರತಂಡ ಭರವಸೆ ನೀಡಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ಬಗ್ಗೆ ದೊಡ್ಡ ನಿರೀಕ್ಷೆ ಸೃಷ್ಟಿ ಆಗಿದೆ. ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ಡಬಲ್​ ಇಸ್ಮಾರ್ಟ್​’ ಸಿನಿಮಾ ಬಿಡುಗಡೆ ಆಗಲಿದೆ. ಮಣಿ ಶರ್ಮಾ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಪುರಿ ಕನೆಕ್ಟ್ಸ್​’ ಬ್ಯಾನರ್ ಮೂಲಕ ಪುರಿ ಜಗನ್ನಾಥ್, ಚಾರ್ಮಿ ಕೌರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.