
ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚುತ್ತಿದೆ. ಇದರ ಜೊತೆಗೆ ಸಿನಿಮಾದ ಪಾತ್ರವರ್ಗ ಕೂಡ ಹಿರಿದಾಗುತ್ತಿದೆ. ಈ ಚಿತ್ರದಲ್ಲಿ ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ ಕೂಡ ನಟಿಸುತ್ತಿದ್ದಾರೆ. ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮೊದಲಾದ ಸ್ಟಾರ್ ಹೀರೋಗಳು ಈ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರದ ಮೊದಲ ಗ್ಲಿಂಪ್ಸ್ನಲ್ಲಿ ಪ್ರಭಾಸ್, ದೀಪಿಕಾ ಹಾಗೂ ಅಮಿತಾಭ್ ಲುಕ್ ರಿವೀಲ್ ಆಗಿದೆ. ಕಮಲ್ ಹಾಸನ್ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ಹೀಗಿರುವಾಗಲೇ ಈ ಚಿತ್ರಕ್ಕೆ ಹೊಸ ಸ್ಟಾರ್ ಹೀರೋನ ಎಂಟ್ರಿ ಆಗಿರೋ ಸೂಚನೆ ಸಿಕ್ಕಿದೆ. ಅವರು ಬೇರಾರೂ ಅಲ್ಲ ನಟ ದುಲ್ಕರ್ ಸಲ್ಮಾನ್.
ದುಲ್ಕರ್ ಸಲ್ಮಾನ್ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಇದೆ. ಮಲಯಾಳಂ ಹೀರೋ ಆದರೂ, ತಮಿಳು, ತೆಲುಗು, ಹಿಂದಿ ಚಿತ್ರಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಈಗ ಅವರು ಮಲಯಾಳಂ ಸಿನಿಮಾ ‘ಕಿಂಗ್ ಆಫ್ ಕೋತ್ತಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಪ್ರಮೋಷನ್ ವೇಳೆ ಅವರೊಂದು ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ‘ಕಲ್ಕಿ 2098 ಎಡಿ’ ಚಿತ್ರದಲ್ಲಿ ಅವರು ನಟಿಸುವ ಸೂಚನೆ ಸಿಕ್ಕಿದೆ.
ದುಲ್ಕರ್ ಸಲ್ಮಾನ್ ಅವರು ‘ಕಲ್ಕಿ 2898 ಎಡಿ’ ಚಿತ್ರದ ಸೆಟ್ಗೆ ಭೇಟಿ ನೀಡಿದ್ದರು. ಈ ಅನುಭವವನ್ನು ಅವರು ಹೇಳಿಕೊಂಡಿದ್ದಾರೆ. ‘ಪ್ರಾಜೆಕ್ಟ್ ಕೆ (ಈ ಮೊದಲು ಚಿತ್ರಕ್ಕೆ ಇಟ್ಟಿದ್ದ ತಾತ್ಕಾಲಿಕ ಶೀರ್ಷಿಕೆ) ಚಿತ್ರದ ಬಗ್ಗೆ ಏನನ್ನೂ ಹೇಳಲೂ ಸಾಧ್ಯವಿಲ್ಲ. ಆದರೆ, ಆ ಸೆಟ್ಗಳು ಅದ್ಭುತವಾಗಿದ್ದವು ಎಂದಷ್ಟೇ ನಾನು ಹೇಳಬಲ್ಲೆ. ನಾಗ್ ಅಶ್ವಿನ್ ಮಾತ್ರ ಈ ರೀತಿ ಆಲೋಚಿಸಲು ಸಾಧ್ಯ. ಪ್ರೇಕ್ಷಕರಿಗೆ ಅವರು ಸರ್ಪ್ರೈಸ್ ನೀಡಲು ಎಂದಿಗೂ ವಿಫಲವಾಗುವುದಿಲ್ಲ. ಈ ಚಿತ್ರದ ಸೆಟ್ಗಳು ಅವರ ಈ ಮೊದಲ ಸಿನಿಮಾಗಿಂತಲೂ ಅದ್ಭುತವಾಗಿವೆ. ನಾನು ಈ ಚಿತ್ರದಲ್ಲಿ ನಟಿಸುತ್ತಿದ್ದೀನೋ ಅಥವಾ ಇಲ್ಲವೋ ಎಂಬುದು ಗೊತ್ತಿಲ್ಲ’ ಎಂದು ನಕ್ಕಿದ್ದಾರೆ. ಇದು ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ.
ಇದನ್ನೂ ಓದಿ: ಥಿಯೇಟರ್ನಲ್ಲಿ ಪ್ರಭಾಸ್ ಅಭಿಮಾನಿಗಳ ಪುಂಡಾಟ; ಕೋಪಗೊಂಡ ಫ್ಯಾನ್ಸ್ ಮಾಡಿದ ದಾಂಧಲೆ ನೋಡಿ
ನಾಗ್ ಅಶ್ವಿನ್ ಹಾಗೂ ದುಲ್ಕರ್ ಸಲ್ಮಾನ್ ಗೆಳೆತನ ತುಂಬಾನೇ ಹಳೆಯದು. ‘ಯವಡೆ ಸುಬ್ರಹ್ಮಣ್ಯಮ್’ ಹಾಗೂ ‘ಮಹಾನಟಿ’ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ಪ್ರಮುಖ ಪಾತ್ರ ಮಾಡಿದ್ದರು. ಈ ಎರಡೂ ಚಿತ್ರಗಳನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದರು.
‘ಕಲ್ಕಿ 2898 ಎಡಿ’ ಸಿನಿಮಾ ಬಗ್ಗೆ ದೊಡ್ಡ ಭರವಸೆ ಮೂಡಿದೆ. ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಮತ್ತೆ ಆರಂಭ ಆಗಿದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ರೂಪಿಸಲಾಗಿದೆ. 2024ರ ವೇಳೆಗೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ