
ನಟ ಮಹೇಶ್ ಬಾಬು (Mahesh Babu) ವಿವಾದಗಳಿಂದ ದೂರವೇ ಇರುವ ನಟ. ಅವರು ಮಾತ್ರವಲ್ಲ, ಅವರ ಅಭಿಮಾನಿಗಳು ಸಹ ಯಾರೊಂದಿಗೂ ಜಗಳಕ್ಕೆ ನಿಲ್ಲುವುದಿಲ್ಲ. ತಾವಾಯ್ತು, ತಮ್ಮ ಸಿನಿಮಾ ಆಯ್ತು, ತಮ್ಮ ಕುಟುಂಬವಾಯ್ತು ಎಂದು ಆರಾಮವಾಗಿದ್ದಾರೆ. ಆದರೆ ಕೆಲವೊಮ್ಮೆ ವಿವಾದಗಳೇ ಮಹೇಶ್ ಬಾಬು ಅವರನ್ನು ಹುಡುಕಿಕೊಂಡು ಬರುವುದು ಉಂಟು. ಈಗ ಹಾಗೆಯೇ ಆಗಿದೆ. ಮಹೇಶ್ ಬಾಬು ಅವರ ವಿರುದ್ಧ ವಂಚನೆ ಆರೋಪ ಬಂದಿದ್ದು, ನೊಟೀಸ್ ಸಹ ನೀಡಲಾಗಿದೆ.
ಮಹೇಶ್ ಬಾಬು ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದಾರೆ, ನಟಿಸುತ್ತಲೇ ಇರುತ್ತಾರೆ. ಅವರೇ ಒಮ್ಮೆ ಹೇಳಿಕೊಂಡಿದ್ದಂತೆ ಕೋವಿಡ್ ಸಮಯದಲ್ಲಿ ಕೇವಲ ಜಾಹೀರಾತುಗಳಲ್ಲಿ ನಟಿಸಿ ಒಂದು ದೊಡ್ಡ ಪ್ರಾಪರ್ಟಿ ಖರೀದಿಸಿ ಒಂದು ಮನೆಯನ್ನೂ ಕಟ್ಟಿಸಿದ್ದರಂತೆ. ಆದರೆ ಈಗ ಜಾಹೀರಾತೊಂದರಿಂದಲೇ ಮಹೇಶ್ ಬಾಬು ಮೇಲೆ ವಂಚನೆ ಆರೋಪ ಬಂದಿದೆ.
ಸಾಯಿ ಸೂರ್ಯ ಡೆವೆಲಪರ್ಸ್ ಹೆಸರಿನ ರಿಯಲ್ ಎಸ್ಟೇಟ್ ಸಂಸ್ಥೆಗೆ ಮಹೇಶ್ ಬಾಬು ರಾಯಭಾರಿ ಆಗಿದ್ದರು. ಸಾಯಿ ಸೂರ್ಯ ಡೆವೆಲಪರ್ಸ್ ನವರು ಮಹೇಶ್ ಬಾಬು ಅವರ ಚಿತ್ರ ಬಳಸಿ ಕೆಲವು ಅನಧಿಕೃತ ಸ್ಥಳಗಳನ್ನು ಗ್ರಾಹಕರಿಗೆ ಮಾರಾಟ ಮಾಡಿದೆಯಂತೆ. ಸೂಕ್ತ ದಾಖಲೆ ಇಲ್ಲದ, ನಿಬಂಧನೆಗಳಿಗೆ ಒಳಪಟ್ಟ ಸ್ಥಳಗಳನ್ನು ಗ್ರಾಹಕರಿಗೆ ಸಾಯಿ ಸೂರ್ಯ ಡೆವೆಲಪರ್ಸ್ ಮಾರಾಟ ಮಾಡಿದ್ದು, ಆ ಲೇಔಟ್ನ ಜಾಹೀರಾತಿಗೆ ಮಹೇಶ್ ಬಾಬು ಚಿತ್ರವನ್ನು ಸಂಸ್ಥೆ ಬಳಸಿತ್ತಂತೆ.
ಇದನ್ನೂ ಓದಿ:ಶೋಭಿತಾ ಹಾಗೂ ನಾಗ ಚೈತನ್ಯರನ್ನು ನಿರ್ಲಕ್ಷಿಸಿದ್ರಾ ಮಹೇಶ್ ಬಾಬು?
ಹೈದರಾಬಾದ್ ಬಳಿಯ ಬಾಲಾಪುರ ಹಳ್ಳಿ ವ್ಯಾಪ್ತಿಯಲ್ಲಿ ಲೇಔಟ್ ಮಾಡಿದ್ದ ಸಾಯಿ ಸೂರ್ಯ ಡೆವೆಲಪರ್ಸ್ ಹಲವಾರು ಮಂದಿ ಗ್ರಾಹಕರಿಗೆ ಪ್ರತಿ ಸೈಟಿಗೆ ಸುಮಾರು 35 ಲಕ್ಷದಂತೆ ಹಲವಾರು ಸೈಟುಗಳನ್ನು ಮಾರಾಟ ಮಾಡಿತ್ತು. ಆದರೆ ತಡವಾಗಿ ಗೊತ್ತಾಗಿದ್ದೆಂದರೆ ಸಾಯಿ ಸೂರ್ಯ ಡೆವೆಲಪರ್ಸ್ ಮಾರಾಟ ಮಾಡಿದ್ದ ಲೇಔಟ್ ಅಸ್ಥಿತ್ವದಲ್ಲೇ ಇರಲಿಲ್ಲವಂತೆ. ಗ್ರಾಹಕರು ಹೇಳಿರುವಂತೆ, ಸಾಯಿ ಸೂರ್ಯ ಡೆವೆಲಪರ್ಸ್ ನವರು ಲೇಔಟ್ಗೆ ಸಂಬಂಧಿಸಿದ ಬ್ರೋಚರ್ಗಳನ್ನು ತಯಾರು ಮಾಡಿ ಗ್ರಾಹಕರಿಗೆ ನೀಡಿತ್ತಂತೆ. ಬ್ರೋಚರ್ಗಳಲ್ಲಿ ಮಹೇಶ್ ಬಾಬು ಅವರ ಚಿತ್ರಗಳು ಸಹ ಇದ್ದವಂತೆ.
ಗ್ರಾಹಕರ ವೇದಿಕೆ, ಇಡಿ ಸೇರಿದಂತೆ ಇನ್ನೂ ಕೆಲವು ಕಡೆಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಇಡಿ ತನಿಖೆಯಿಂದ ಗೊತ್ತಾಗಿರುವಂತೆ ಸಾಯಿ ಸೂರ್ಯ ಡೆವೆಲಪರ್ಸ್ನವರು ಮಹೇಶ್ ಬಾಬುಗೆ 5.90 ಕೋಟಿ ರೂಪಾಯಿ ಸಂಭಾವನೆಯನ್ನು ನೀಡಲಾಗಿದೆಯಂತೆ. ಇದೀಗ ಇಡಿ ಮಹೇಶ್ ಬಾಬುಗೆ ನೊಟೀಸ್ ಜಾರಿ ಮಾಡಿದ್ದು, ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಮಹೇಶ್ ಬಾಬು ಮುಂದಿನ ದಿನಗಳಲ್ಲಿ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ