ಧನುಶ್ ಬಳಿಕ ಮತ್ತೊಬ್ಬರಿಂದ ‘ನಯನತಾರಾ‘ಗೆ ನೊಟೀಸ್: 5 ಕೋಟಿ ಪರಿಹಾರಕ್ಕೆ ಬೇಡಿಕೆ
Nayanthara Documentary: ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದ್ದ ನಯನತಾರಾ ಡಾಕ್ಯುಮೆಂಟರಿ ವಿರುದ್ಧ ಈಗಾಗಲೇ ನಟ ಧನುಶ್ ಅವರ ನಿರ್ಮಾಣ ಸಂಸ್ಥೆ ಪ್ರಕರಣ ದಾಖಲಿಸಿದ್ದು, ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿದೆ. ಇದೀಗ ಮತ್ತೊಂದು ನಿರ್ಮಾಣ ಸಂಸ್ಥೆ ಇದೇ ಡಾಕ್ಯುಮೆಂಟರಿ ವಿರುದ್ಧ ನೊಟೀಸ್ ಕಳಿಸಿದ್ದು, ಐದು ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದೆ.

ನಟಿ ನಯನತಾರಾ (Nayanthara), ದಕ್ಷಿಣ ಭಾರತದ ಸ್ಟಾರ್ ನಟಿ. ಆದರೆ ನಯನತಾರಾ ಅವರ ಅತಿಯಾದ ಶಿಸ್ತು, ನಿಷ್ಠುರ ನುಡಿ-ನಡೆಗಳಿಂದಾಗಿ ಅವರನ್ನು ವಿರೋಧಿಸುವವರ ಸಂಖ್ಯೆಯೂ ಚಿತ್ರರಂಗದಲ್ಲಿ ಸಾಕಷ್ಟಿದೆ. ನಯನತಾರಾ, ನಿರ್ದೇಶಕ ವಿಘ್ನೇಷ್ ಅನ್ನು ವಿವಾಹವಾಗಿ ಇದೀಗ ಬಾಡಿಗೆ ತಾಯಿಯ ಮೂಲಕ ಇಬ್ಬರು ಮಕ್ಕಳನ್ನು ಸಹ ಪಡೆದಿದ್ದಾರೆ. ಕೆಲ ತಿಂಗಳ ಹಿಂದಷ್ಟೆ ನಯನತಾರಾ ಅವರ ಜೀವನದ ಬಗ್ಗೆ ಡಾಕ್ಯುಮೆಂಟರಿಯೊಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿತ್ತು. ಅದರ ಹಿಂದೆಯೇ ಸಾಕಷ್ಟು ವಿವಾದವನ್ನು ಸಹ ಇದು ಆಕರ್ಷಿಸಿತ್ತು.
ನಯನತಾರಾ ಅವರು, ಧನುಶ್ ನಿರ್ಮಾಣ ಮಾಡಿದ್ದ ‘ನಾನುಂ ರೌಡಿ ದಾ’ ಸಿನಿಮಾದ ಕೆಲ ದೃಶ್ಯಗಳನ್ನು ಡಾಕ್ಯುಮೆಂಟರಿಯಲ್ಲಿ ಬಳಸಿಕೊಳ್ಳಲಾಗಿತ್ತು. ‘ನಾನುಂ ರೌಡಿ ದಾ’ ಸಿನಿಮಾದಲ್ಲಿ ನಯನತಾರಾ ನಟಿಸಿದ್ದರು, ಸಿನಿಮಾವನ್ನು ವಿಘ್ನೇಷ್ ಶಿವನ್ ನಿರ್ದೇಶನ ಮಾಡಿದ್ದರು. ಇದೇ ಸಿನಿಮಾದ ಶೂಟಿಂಗ್ ಸಮಯದಲ್ಲಿ ನಯನತಾರಾ ಹಾಗೂ ವಿಘ್ನೇಷ್ ಶಿವನ್ ನಡುವೆ ಪ್ರೀತಿ ಮೂಡಿತ್ತು. ಹಾಗಾಗಿ ಸಿನಿಮಾದ ಶೂಟಿಂಗ್ ವೇಳೆಯ ಕೆಲ ದೃಶ್ಯಗಳನ್ನು ನಯನತಾರಾ ಡಾಕ್ಯುಮೆಂಟರಿಯಲ್ಲಿ ಬಳಸಿಕೊಳ್ಳಲಾಗಿತ್ತು.
ಇದಕ್ಕೆ ಆಕ್ಷೇಪಿಸಿ ನಟ ಧನುಶ್ ಅವರ ನಿರ್ಮಾಣ ಸಂಸ್ಥೆಯಿಂದ ನಯನತಾರಾ ಡಾಕ್ಯುಮೆಂಟರಿ ನಿರ್ಮಾಣ ಹಾಗೂ ನಿರ್ದೇಶನ ಮಾಡಿದವರ ವಿರುದ್ಧ ದೂರು ದಾಖಲಾಗಿದ್ದಲ್ಲದೆ ಭಾರಿ ಮೊತ್ತದ ಪರಿಹಾರಕ್ಕೆ ಬೇಡಿಕೆ ಇಡಲಾಗಿತ್ತು. ಅದೇ ಡಾಕ್ಯುಮೆಂಟರಿಯಲ್ಲಿ ನಯನತಾರಾ ನಟಿಸಿರುವ ಇನ್ನೂ ಕೆಲವಾರು ಸಿನಿಮಾಗಳ ದೃಶ್ಯಗಳನ್ನು ಸಹ ಬಳಸಿಕೊಳ್ಳಲಾಗಿತ್ತು. ಇದೀಗ ಮತ್ತೊಂದು ಸಿನಿಮಾ ನಿರ್ಮಾಣ ಸಂಸ್ಥೆಯ ಕಡೆಯಿಂದ ಡಾಕ್ಯುಮೆಂಟರಿ ಮೇಕರ್ಸ್ಗೆ ನೊಟೀಸ್ ಹೋಗಿದ್ದು, ಐದು ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಡಲಾಗಿದೆ.
ಇದನ್ನೂ ಓದಿ:ಆ ಸ್ಟಾರ್ ನಟನ ಸಿನಿಮಾನಲ್ಲಿ ನಟಿಸಿ ತಪ್ಪು ಮಾಡಿದೆ: ನಯನತಾರಾ ಬೇಸರಕ್ಕೆ ಕಾರಣವೇನು?
‘ನಯನತಾರಾ’ ಡಾಕ್ಯುಮೆಂಟರಿಯಲ್ಲಿ ರಜನೀಕಾಂತ್ ನಟಿಸಿದ್ದ, ಕನ್ನಡದ ‘ಆಪ್ತಮಿತ್ರ’ ಸಿನಿಮಾದ ರೀಮೇಕ್ ‘ಚಂದ್ರಮುಖಿ’ ಸಿನಿಮಾದ ಕೆಲವು ದೃಶ್ಯಗಳನ್ನು ಸಹ ಬಳಸಿಕೊಳ್ಳಲಾಗಿತ್ತು. ಆ ಸಿನಿಮಾದ ಹಕ್ಕುಗಳನ್ನು ಹೊಂದಿರುವ ಎಪಿ ಇಂಟರ್ನ್ಯಾಷನಲ್ಸ್ ಸಂಸ್ಥೆಯು ಇದೀಗ ನೊಟೀಸ್ ಕಳಿಸಿದೆ. ತಮ್ಮ ಅನುಮತಿ ಇಲ್ಲದೆ ಸಿನಿಮಾದ ದೃಶ್ಯಗಳನ್ನು ಬಳಸಿಕೊಳ್ಳುವ ಮೂಕಲ ಕಾಪಿರೈಟ್ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಧನುಶ್ ನಿರ್ಮಾಣ ಸಂಸ್ಥೆಯು ನಯನತಾರಾ ವಿರುದ್ಧ ದೂರು ದಾಖಲಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ಆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಟಿ ನಯನತಾರಾ, ಧನುಶ್ ವಿರುದ್ಧ ನಾನಾ ಆರೋಪಗಳನ್ನು ಮಾಡಿದ್ದರು. ಧನುಶ್ ಅವರನ್ನು ಘೋಮುಖ ವ್ಯಾಘ್ರನಿಗೆ ಹೋಲಿಸಿದ್ದರು ಆದರೆ ಧನುಶ್ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:14 pm, Tue, 8 July 25




