
ಅಕ್ರಮವಾಗಿ ಆನೆದಂತ ಹಾಗೂ ದಂತದಿಂದ ಮಾಡಿದ ವಸ್ತುಗಳನ್ನು ಸಂಗ್ರಹಿಸಿದ್ದ ಪ್ರಕರಣದಲ್ಲಿ ಮೋಹನ್ಲಾಲ್ಗೆ (Mohan Lal) ತಾತ್ಕಾಲಿಕ ನಿರಾಳತೆ ದೊರೆತಿದೆ. ದಂತ ಸಂಗ್ರಹ ಪ್ರಕರಣದ ಕುರಿತು ಮೋಹನ್ಲಾಲ್ ವಿರುದ್ಧ ಮುಂದಿನ ಆರು ತಿಂಗಳ ಕಾಲ ಯಾವುದೇ ಕ್ರಮ ಜರುಗಿಸದಂತೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ. ಮಾತ್ರವಲ್ಲದೆ ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇನ್ನಿಬ್ಬರು, ತಮ್ಮನ್ನು ಆರೋಪ ಮುಕ್ತರನ್ನಾಗಿ ಮಾಡುವಂತೆ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಮಾನ್ಯ ಮಾಡಿದೆ.
2011ರಲ್ಲಿ ಮೋಹನ್ಲಾಲ್ ವಿರುದ್ಧ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ ಸಂದರ್ಭದಲ್ಲಿ ಮೋಹನ್ ಲಾಲ್ ನಿವಾಸದಲ್ಲಿ ನಾಲ್ಕು ಆನೆದಂತ ಹಾಗೂ ಆನೆದಂತದಿಂದ ಮಾಡಲಾಗಿದ್ದ 13 ವಿವಿಧ ಕರಕುಶಲ ವಸ್ತುಗಳು ಬರಾಮತ್ತಾಗಿದ್ದವು. ಕೇರಳ ಅರಣ್ಯ ಹಾಗೂ ವನ್ಯಜೀವಿ ಇಲಾಖೆಯು ಮೋಹನ್ಲಾಲ್ ವಿರುದ್ಧ ಅರಣ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ಇತ್ತೀಚೆಗೆ 2019ರಲ್ಲಿ ಎರ್ನಾಕುಲಂನ ಮೆಕ್ಕಪ್ಪಾಲ ಅರಣ್ಯ ಠಾಣೆಯು ಮೋಹನ್ಲಾಲ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಆ ಕುರಿತು ಪೆರಂಬೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಆದರೆ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಮೋಹನ್ಲಾಲ್ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ಮೋಹನ್ಲಾಲ್ ವಿರುದ್ಧ ಮುಂದಿನ ಆರು ತಿಂಗಳ ವರೆಗೆ ಯಾವುದೇ ಕ್ರಮ ಜರುಗಿಸದಂತೆ ನಿರ್ದೇಶನ ನೀಡಿದೆ.
ಇದನ್ನೂ ಓದಿ:ಮೈಸೂರಿನಲ್ಲಿ ಮೋಹನ್ಲಾಲ್ ಸಾಹಸ: ನಂದ ಕಿಶೋರ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ
ತಿರುವನಂತಪುರಂನ ವನ್ಯಜೀವಿ ಇಲಾಖೆ ಮುಖ್ಯಸ್ಥರು ಆನೆದಂತಗಳನ್ನು ಇರಿಸಿಕೊಳ್ಳಲು ಮೋಹನ್ಲಾಲ್ಗೆ ಪರವಾನಗಿ ನೀಡಿದ್ದರಿಂದಲೇ ಮೋಹನ್ಲಾಲ್ ದಂತಗಳನ್ನು ಇರಿಸಿಕೊಂಡಿದ್ದರು. ಮೋಹನ್ಲಾಲ್ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘನೆ ಮಾಡಿಲ್ಲ ಎಂದು ಮೋಹನ್ಲಾಲ್ ಪರ ವಕೀಲರು ವಾದಿಸಿದ್ದರು. 2011 ರಲ್ಲಿಯೇ ದಂತ ಹಾಗೂ ದಂತದಿಂದ ಮಾಡಿದ ವಸ್ತಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಕೆಲವು ತಿಂಗಳ ಹಿಂದಷ್ಟೆ ಮೋಹನ್ಲಾಲ್ಗೆ ಇಡಿ ನೊಟೀಸ್ ನೀಡಿತ್ತು. ಕೇರಳ ಮೂಲದ ಮಹಾನ್ ವಂಚಕ ಮಾನ್ಸನ್ ಮಾವುಂಕಲ್ ಜೊತೆ ನಂಟು ಹೊಂದಿದ್ದ ಕಾರಣ, ಮೋಹನ್ಲಾಲ್ಗೆ ನೊಟೀಸ್ ನೀಡಿ ವಿಚಾರಣೆ ಕರೆಯಲಾಗಿತ್ತು. ಮಾನ್ಸನ್ ಮಾವುಂಕಲ್, ತನ್ನ ಬಳಿ ಪುರಾತನ ವಸ್ತುಗಳ (ಆಂಟಿಕ್) ಸಂಗ್ರಹ ಇದೆಯೆಂದು ನಂಬಿಸಿ ಹಲವರಿಂದ ಲಕ್ಷಾಂತರ ಹಣ ವಸೂಲಿ ಮಾಡಿದ್ದ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಮಾನ್ಸನ್ ಮಾವುಂಕಲ್ ಅನ್ನು ಬಂಧಿಸಿತ್ತು. ಆತನ ಕುರಿತು ತನಿಖೆ ನಡೆಸುವ ಸಂದರ್ಭದಲ್ಲಿ ಆತನಿಗೂ ಮೋಹನ್ಲಾಲ್ಗೂ ನಂಟು ಇರುವುದು ತಿಳಿದು ಬಂದಿತ್ತು. ಹಾಗಾಗಿ ಮೋಹನ್ಲಾಲ್ಗೆ ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿತ್ತು.
ಮೋಹನ್ಲಾಲ್ ಮಲಯಾಳಂನ ಸೂಪರ್ ಸ್ಟಾರ್ ನಟರಾಗಿರುವ ಜೊತೆಗೆ ಕೇರಳದ ಪ್ರಮುಖ ಉದ್ಯಮಿಯೂ ಹೌದು. ಮೀನುಗಾರಿಕೆ, ಬೋಟ್ ಮಾಲೀಕತ್ವ, ರಿಯಲ್ ಎಸ್ಟೇಟ್, ಚಿನ್ನದ ವ್ಯಾಪಾರ, ಸಾರಿಗೆ, ವಿದೇಶದಲ್ಲಿ ಹೂಡಿಕೆ, ದುಬೈನಲ್ಲಿ ರಿಯಲ್ ಎಸ್ಟೇಟ್, ಸಿನಿಮಾ ನಿರ್ಮಾಣ, ವಿತರಣೆ ಇನ್ನೂ ಹಲವಾರು ಉದ್ಯಮಗಳಲ್ಲಿ ಮೋಹನ್ಲಾಲ್ ಹೂಡಿಕೆ ಮಾಡಿದ್ದಾರೆ. ಅವರ ಮೇಲೆ ಈ ಹಿಂದೆ ಕೆಲವು ಬಾರಿ ಆದಾಯ ತೆರಿಗೆ ದಾಳಿಗಳು ಆಗಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Thu, 21 September 23