Fact Check: ಪ್ರಿಯಾಂಕಾ ಚೋಪ್ರಾ ಮಹಾಕುಂಭಕ್ಕೆ ಬಂದು ಪವಿತ್ರ ಸ್ನಾನ ಮಾಡಿದ್ದು ನಿಜವೇ?, ಇಲ್ಲಿದೆ ಸತ್ಯಾಂಶ

| Updated By: Vinay Bhat

Updated on: Jan 23, 2025 | 5:08 PM

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಇದನ್ನು ಹಂಚಿಕೊಳ್ಳಲಾಗುತ್ತಿದೆ ಎಂಬುದು ಕಂಡುಬಂದಿದೆ. ಪ್ರಿಯಾಂಕಾ ಅವರ ವೈರಲ್ ಚಿತ್ರವು ಮಹಾಕುಂಭದಿಂದಲ್ಲ, ಇದು ಸುಮಾರು ಒಂದು ವರ್ಷ ಹಳೆಯದು. ಅವರು ಕುಟುಂಬ ಸಮೇತ ಅಯೋಧ್ಯೆಗೆ ಬಂದು ರಾಮಮಂದಿರಕ್ಕೆ ಭೇಟಿ ನೀಡಿದಾಗ ತೆಗೆದ ಫೋಟೋ ಇದಾಗಿದೆ.

Fact Check: ಪ್ರಿಯಾಂಕಾ ಚೋಪ್ರಾ ಮಹಾಕುಂಭಕ್ಕೆ ಬಂದು ಪವಿತ್ರ ಸ್ನಾನ ಮಾಡಿದ್ದು ನಿಜವೇ?, ಇಲ್ಲಿದೆ ಸತ್ಯಾಂಶ
Priyanka Chopra Mahakumbh
Follow us on

ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪ್ರಾಜೆಕ್ಟ್ ಒಂದಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಬಂದಿದ್ದಾರೆ. ಈ ವೇಳೆ ಅವರು ಹೈದರಾಬಾದ್‌ನ ಚಿಲ್ಕೂರು ಶ್ರೀ ಬಾಲಾಜಿ ದೇವಸ್ಥಾನಕ್ಕೂ ಭೇಟಿ ನೀಡಿದರು. ಏತನ್ಮಧ್ಯೆ, ಪ್ರಿಯಾಂಕಾ ಚೋಪ್ರಾ ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ, ಅವರು ಪತಿ ನಿಕ್ ಜೋನಾಸ್ ಮತ್ತು ಮಗಳು ಮಾಲ್ತಿ ಅವರೊಂದಿಗೆ ನಿಂತಿರುವುದನ್ನು ಕಾಣಬಹುದು. ಫೋಟೋವನ್ನು ಹಂಚಿಕೊಳ್ಳುವ ಮೂಲಕ ಪ್ರಿಯಾಂಕಾ ಚೋಪ್ರಾ ಪ್ರಯಾಗರಾಜ್ ತಲುಪಿ ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ವೈರಲ್ ಆಗುತ್ತಿರುವುದು ಏನು?:

ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೈರಲ್ ಫೋಟೋವನ್ನು ಹಂಚಿಕೊಂಡು, ‘‘ಪ್ರಿಯಾಂಕಾ ಚೋಪ್ರಾ ಭಾರತೀಯ ಸಂಪ್ರದಾಯಗಳಲ್ಲಿ ವಿಶೇಷ ನಂಬಿಕೆಯನ್ನು ಹೊಂದಿದ್ದಾರೆ. ಜಾಗತಿಕ ಐಕಾನ್‌ಗಳು ಆಗಾಗ್ಗೆ ಇದರ ಗ್ಲಿಂಪ್‌ಗಳನ್ನು ಸಹ ತೋರಿಸುತ್ತವೆ. ಪ್ರಸ್ತುತ, ಪ್ರಿಯಾಂಕಾ ಚೋಪ್ರಾ 2025 ರ ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಈ ವರ್ಷದ ಅತಿದೊಡ್ಡ ಧಾರ್ಮಿಕ ಜಾತ್ರೆಯು ಜನವರಿ 13 ರಂದು ಪ್ರಾರಂಭವಾಯಿತು ಮತ್ತು ಫೆಬ್ರವರಿ 25 ರಂದು ಕೊನೆಗೊಳ್ಳುತ್ತದೆ. ಪ್ರಪಂಚದಾದ್ಯಂತದ ಭಕ್ತರು ಈ ದೈವಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಯಾಗರಾಜ್‌ಗೆ ತಲುಪುತ್ತಿದ್ದಾರೆ. ನಂಬಿಕೆಯ ಸಂಗಮವಾದ ಮಹಾಕುಂಭದಲ್ಲಿ ಭಾಗವಹಿಸಲು ಪ್ರಿಯಾಂಕಾ ಕೂಡ ಪ್ರಯಾಗ್ರಾಜ್ ತಲುಪಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ. (ಪೋಸ್ಟ್ ವೀಕ್ಷಸಲು ಇಲ್ಲಿ ಕ್ಲಿಕ್ ಮಾಡಿ)

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಇದನ್ನು ಹಂಚಿಕೊಳ್ಳಲಾಗುತ್ತಿದೆ ಎಂಬುದು ಕಂಡುಬಂದಿದೆ. ಪ್ರಿಯಾಂಕಾ ಅವರ ವೈರಲ್ ಚಿತ್ರವು ಮಹಾಕುಂಭದಿಂದಲ್ಲ, ಇದು ಸುಮಾರು ಒಂದು ವರ್ಷ ಹಳೆಯದು. ಅವರು ಕುಟುಂಬ ಸಮೇತ ಅಯೋಧ್ಯೆಗೆ ಬಂದು ರಾಮಮಂದಿರಕ್ಕೆ ಭೇಟಿ ನೀಡಿದಾಗ ತೆಗೆದ ಫೋಟೋ ಇದಾಗಿದೆ. ಈವರೆಗೆ ಅವರು ಮಹಾಕುಂಭಕ್ಕೆ ಹೋಗಿರುವ ಯಾವುದೇ ಸುದ್ದಿ ಬೆಳಕಿಗೆ ಬಂದಿಲ್ಲ.

ವೈರಲ್ ಕ್ಲೈಮ್‌ನ ಸತ್ಯವನ್ನು ತಿಳಿಯಲು, ನಾವು ಸಂಬಂಧಿತ ಕೀವರ್ಡ್‌ಗಳ ಸಹಾಯದಿಂದ ಗೂಗಲ್​ನಲ್ಲಿ ಹುಡುಕಿದ್ದೇವೆ. ಆದರೆ, ಎಲ್ಲೂ ಅವರು ಮಹಾಕುಂಭಕ್ಕೆ ಭೇಟಿ ನೀಡಿದ ಬಗ್ಗೆ ವರದಿ ಕಂಡುಬಂದಿಲ್ಲ. ನಾವು ಪ್ರಿಯಾಂಕಾ ಚೋಪ್ರಾ ಅವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಕುರಿತು ಹುಡುಕಿದ್ದೇವೆ, ಆದರೆ ಮಹಾಕುಂಭದ ಆಗಮನಕ್ಕೆ ಸಂಬಂಧಿಸಿದ ಯಾವುದೇ ಪೋಸ್ಟ್ ನಮಗೆ ಕಂಡುಬಂದಿಲ್ಲ. ಆದಾಗ್ಯೂ, ಅವರು ಹೈದರಾಬಾದ್‌ನ ಚಿಲ್ಕೂರ್ ಶ್ರೀ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ.

ವೈರಲ್ ಫೋಟೋದ ನಿಜಾಂಶವನ್ನು ತಿಳಿಯಲು, ನಾವು ಗೂಗಲ್ ರಿವರ್ಸ್ ಇಮೇಜ್ ಸಹಾಯದಿಂದ ಫೋಟೋವನ್ನು ಹುಡುಕಿದೆವು. ಆಗ ಇದು ರಾಮಮಂದಿರಕ್ಕೆ ಸಂಬಂಧ ಪಟ್ಟಿರುವುದು ಎಂದು ಕಂಡುಬಂತು. ‘ಪ್ರಿಯಾಂಕಾ ಚೋಪ್ರಾ ಅವರು ರಾಮಲಲ್ಲಾ ಅವರನ್ನು ನೋಡಲು ಕುಟುಂಬದೊಂದಿಗೆ ಆಗಮಿಸಿದರು’ ಎಂದು ಟಿವಿ9 ಗುಜರಾತಿ ಮಾರ್ಚ್ 20, 2024 ರಂದು ಇದೇ ವೈರಲ್ ಫೋಟೋದೊಂದಿಗೆ ಸುದ್ದಿ ಪ್ರಕಟಿಸಿದೆ.

ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ಕೆಲವು ದಿನಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಹಾಗೂ ಅವರ ಪತಿ ನಿಕ್ ಜೋನಾಸ್ ಮುಂಬೈ ತಲುಪಿದ್ದರು, ಇದೀಗ ಜಾಗತಿಕ ತಾರೆ ತಮ್ಮ ಕುಟುಂಬದೊಂದಿಗೆ ರಾಮಲಲ್ಲಾಗೆ ಭೇಟಿ ನೀಡಿದ್ದಾರೆ. ಚಿತ್ರದಲ್ಲಿ, ಪ್ರಿಯಾಂಕಾ ಚೋಪ್ರಾ ಹಳದಿ ಸೂಟ್‌ನಲ್ಲಿ ನಿಂತು ತನ್ನ ಮಗಳು ಮಾಲ್ತಿಯನ್ನು ಎತ್ತಿಕೊಂಡಿದ್ದಾರೆ. ಮಗಳು ಮಾಲ್ತಿ ಮೇರಿ ಕೂಡ ಕಿತ್ತಳೆ ಬಣ್ಣದ ಉಡುಪಿನಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ಅಲ್ಲದೆ, ಪತಿ ನಿಕ್ ಜೋನಾಸ್ ಕೂಡ ಬಿಳಿ ಕುರ್ತಾ-ಪೈಜಾಮದಲ್ಲಿ ಪ್ರಿಯಾಂಕಾ ಜೊತೆ ನಿಂತಿದ್ದಾರೆ’’ ಎಂದು ವರದಿಯಲ್ಲಿದೆ.

ಹಾಗೆಯೆ ಟಿವಿ9 ಭಾರತ್ ವರ್ಷ್ ಕೂಡ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಿಯಾಂಕಾ ತನ್ನ ಕುಟುಂಬದೊಂದಿಗೆ ರಾಮಮಂದಿರಕ್ಕೆ ಭೇಟಿ ನೀಡಿದ ವಿಡಿಯೋವನ್ನು ಹಂಚಿಕೊಮಡಿದೆ. ವೀಡಿಯೊವನ್ನು 21 ಮಾರ್ಚ್ 2024 ರಂದು ಅಪ್‌ಲೋಡ್ ಮಾಡಲಾಗಿದೆ.

ಹೀಗಾಗಿ ಪ್ರಿಯಾಂಕಾ ಚೋಪ್ರಾ ಮಹಾಕುಂಭಕ್ಕೆ ಹೋಗುತ್ತಿರುವ ವೈರಲ್ ಫೋಟೋದ ಬಗ್ಗೆ ಮಾಡಲಾಗುತ್ತಿರುವ ಹೇಳಿಕೆ ಸುಳ್ಳು ಎಂದು ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ಕಂಡುಕೊಂಡಿದೆ. ಪ್ರಿಯಾಂಕಾ ಅವರ ವೈರಲ್ ಚಿತ್ರವು ಮಹಾಕುಂಭದಿಂದಲ್ಲ, ಇದು ಸುಮಾರು ಒಂದು ವರ್ಷ ಹಳೆಯದು. ಕುಟುಂಬ ಸಮೇತ ಅಯೋಧ್ಯೆ ತಲುಪಿ ರಾಮಮಂದಿರಕ್ಕೆ ಭೇಟಿ ನೀಡಿದಾಗ ತೆಗೆದ ಫೋಟೋ ಇದಾಗಿದೆ.