
ಫಹಾದ್ ಫಾಸಿಲ್ (Fahad Faasil), ಭಾರತೀಯ ಚಿತ್ರರಂಗದ ಬಲು ಬೇಡಿಕೆಯ ಮತ್ತು ಪ್ರತಿಭಾನ್ವಿತ ನಟ. ಫಹಾದ್ ಫಾಸಿಲ್ ಅವರಿಗಾಗಿ ನಿರ್ಮಾಪಕರು, ನಿರ್ದೇಶಕರು ಸಾಲುಗಟ್ಟಿ ನಿಂತಿದ್ದಾರೆ. ಮಲಯಾಳಂ ಚಿತ್ರರಂಗದ ಫಹಾದ್ ಫಾಸಿಲ್ ಹಲಾವರು ಭಾಷೆಗಳಲ್ಲಿ ನಾಯಕನಾಗಿ, ವಿಲನ್ ಆಗಿ ನಟಿಸುತ್ತಿದ್ದಾರೆ. ಅವರ ಸಂಭಾವನೆಯೂ ಸಹ ಭಾರಿ ದೊಡ್ಡದಾಗಿಯೇ ಇದೆ. ಸಿನಿಮಾಗಳಲ್ಲಿ ಯಾವ ಪಾತ್ರವಾದರೂ ಅಬ್ಬರಿಸುವ ಫಹಾದ್ ಫಾಸಿಲ್, ನಿಜ ಜೀವನದಲ್ಲಿ ತುಸು ಮೌನಿ ಆದರೆ ಅವರಿಗೆ ಕಾರು ಕ್ರೇಜ್ ಬಹಳ ಇದೆ. ಮಲಯಾಳಂನ ಹಲವು ನಾಯಕರುಗಳಿಗೆ ಈ ಕಾರು ಕ್ರೇಜ್ ಇದೆ. ಫಹಾದ್ ಫಾಸಿಲ್ ಸಹ ಇದಕ್ಕೆ ಹೊರತಲ್ಲ.
ಫಹಾದ್ ಫಾಸಿಲ್ ಇತ್ತೀಚೆಗಷ್ಟೆ ಅಪರೂಪದ ಕಾರೊಂದನ್ನು ಖರೀದಿ ಮಾಡಿದ್ದಾರೆ. ವೋಲ್ಕ್ಸ್ ವ್ಯಾಗನ್ ಗಾಲ್ಫ್ ಜಿಟಿಐ ಕಾರನ್ನು ಫಹಾದ್ ಫಾಸಿಲ್ ಖರೀದಿ ಮಾಡಿದ್ದಾರೆ. ಈ ಕಾರು ನೋಡಲು ವೋಲ್ಕ್ಸ್ ವ್ಯಾಗನ್ನ ಪೋಲೊ ರೀತಿಯೇ ಇದೆಯಾದರೂ ಸಾಮರ್ಥ್ಯ, ಸವಲತ್ತು, ಬೆಲೆಗಳಲ್ಲಿ ಭೂಮಿ-ಆಕಾಶದಷ್ಟು ಅಂತರವಿದೆ. ವೋಲ್ಕ್ಸ್ ವ್ಯಾಗನ್ ಗಾಲ್ಫ್ ಜಿಟಿಐನ ಕೇವಲ 150 ಕಾರುಗಳಷ್ಟೆ ಭಾರತದಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಅದರಲ್ಲಿ ಒಂದು ಈಗ ಫಹಾದ್ ಫಾಸಿಲ್ ಮನೆಯಲ್ಲಿದೆ.
ವೋಲ್ಕ್ಸ್ ವ್ಯಾಗನ್ ಗಾಲ್ಫ್ ಜಿಟಿಐ ಹ್ಯಾಚ್ ಬ್ಯಾಕ್ ಕಾರಾಗಿದ್ದು, ಭಾರಿ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಿರುವ ಕಾರಾಗಿದೆ. ಕಾರಿನ ಎಕ್ಸ್ ಶೋರೂಂ ಬೆಲೆ 53 ಲಕ್ಷಗಳಿದ್ದು, ಆನ್ ರೋಡ್ ಬೆಲೆ 60 ಲಕ್ಷಕ್ಕೂ ಹೆಚ್ಚಿಗಿದೆ. ಸೊನ್ನೆಯಿಂದ 100 ಕಿ.ಮೀ ವೇಗವನ್ನು ಕೇವಲ 5 ಸೆಕೆಂಡ್ನಲ್ಲಿ ತಲುಪುತ್ತದೆ. ಅತ್ಯುತ್ತಮ ಬ್ರೇಕಿಂಗ್ ವ್ಯವಸ್ಥೆ, ಇಂಟೀರಿಯರ್, ಭದ್ರತಾ ವ್ಯವಸ್ಥೆಗಳನ್ನು ಈ ಕಾರು ಹೊಂದಿದ್ದು, ವಿಶೇಷವಾಗಿ ಹೀಟೆಡ್-ವೆಂಟಿಲೇಟೆಡ್ ಸೀಟುಗಳು ಸಹ ಈ ಕಾರಿನಲ್ಲಿದೆ.
ಇದನ್ನೂ ಓದಿ:ಮಲಯಾಳಂ ಚಿತ್ರರಂಗಕ್ಕೆ ವಿದಾಯ ಹೇಳಿದರೆ ಅನುಪಮ ಪರಮೇಶ್ವರನ್
ಅಂದಹಾಗೆ ವೋಲ್ಕ್ಸ್ ವ್ಯಾಗನ್ ಗಾಲ್ಫ್ ಜಿಟಿಐ ಗಿಂತಲೂ ಬಲು ದುಬಾರಿಯಾದ ಹಲವು ಕಾರುಗಳು ಫಹಾದ್ ಫಾಸಿಲ್ ಮನೆಯ ಪಾರ್ಕಿಂಗ್ನಲ್ಲಿವೆ. ಎರಡು ಕೋಟಿ ಬೆಲೆಯ ಫೆರಾರ್ರಿ 911 ಸೆರ್ರೆರಾ, 5 ಕೋಟಿ ಬೆಲೆಯ ಮರ್ಸಿಡೀಜ್ ಬೆಂಜ್ ಜಿ 63 ಎಎಂಜಿ, 4.50 ಕೋಟಿ ಬೆಲೆಯ ಲ್ಯಾಂಬೊರ್ಗಿನಿ ಉರುಸ್, ಲ್ಯಾಂಡ್ ರೋವರ್ ಡಿಫೆಂಡರ್, ಇನ್ನೂ ಹಲವು ಸಣ್ಣ-ಪುಟ್ಟ ಕಾರುಗಳು ಸಹ ಫಹಾದ್ ಫಾಸಿಲ್ ಬಳಿ ಇವೆ. ಮಲಯಾಳಂ ನಟರಾದ ದುಲ್ಕರ್ ಸಲ್ಮಾನ್ ಮತ್ತು ಪೃಥ್ವರಾಜ್ ಸುಕುಮಾರ್ ಅವರಿಗೂ ಸಹ ಕಾರುಗಳ ಮೇಲೆ ವಿಪರೀತ ಆಸಕ್ತಿ. ಇವರುಗಳ ಬಳಿಯೂ ಸಹ ಬಲು ದುಬಾರಿಯಾದ ಹಲವು ವಿದೇಶಿ ಮಾಡೆಲ್ ಕಾರುಗಳು ಮತ್ತು ಬೈಕುಗಳು ಇವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ