ಸಾವಿರಾರು ಗೀತೆ ಹಾಡಿದ್ದ ಖ್ಯಾತ ಗಾಯಕ ಮಾಣಿಕ ವಿನಾಯಗಂ ನಿಧನ; ಕಂಬನಿ ಮಿಡಿದ ಚಿತ್ರರಂಗ
Manikka Vinayagam Death: 2001ರಲ್ಲಿ ಹಾಡುಗಾರಿಕೆ ಆರಂಭಿಸಿದ ಮಾಣಿಕ ವಿನಾಯಗಂ ಅವರು ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದರು. ಭಾನುವಾರ (ಡಿ.26) ರಾತ್ರಿ ಅವರು ಕೊನೆಯುಸಿರು ಎಳೆದರು.
ಈ ವರ್ಷ ಅನೇಕ ಸೆಲೆಬ್ರಿಟಿಗಳು ಇಹಲೋಕ ತ್ಯಜಿಸಿದ್ದಾರೆ. 2021ನೇ ವರ್ಷ ಮುಗಿಯುತ್ತಿರುವ ಈ ಸಂದರ್ಭದಲ್ಲಿ ಚಿತ್ರರಂಗಕ್ಕೆ ಮತ್ತೊಂದು ಬೇಸರದ ಸಂಗತಿ ಕೇಳಿಬಂದಿದೆ. ತಮಿಳು ಸಿನಿಮಾರಂಗದ ಖ್ಯಾತ ಗಾಯಕ ಮಾಣಿಕ ವಿನಾಯಗಂ (Manikka Vinayagam) ವಿಧಿವಶರಾಗಿದ್ದಾರೆ. ಭಾನುವಾರ (ಡಿ.26) ರಾತ್ರಿ ಅವರು ಕೊನೆಯುಸಿರು ಎಳೆದರು. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ನಿಧನರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಣಿಕ ವಿನಾಯಗಂ ನಿಧನಕ್ಕೆ (Manikka Vinayagam Death) ಸೂಕ್ತ ಕಾರಣ ಏನೆಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಅವರ ಅಗಲಿಕೆಗೆ ತಮಿಳು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದ್ದಿದ್ದಾರೆ.
ನಾಟ್ಯಾಚಾರ್ಯ ಪದ್ಮಶ್ರೀ ವಳುವೂರ್ ಬಿ ರಾಮಯ್ಯ ಪಿಳೈ ಅವರ ಕಿರಿಯ ಪುತ್ರನಾಗಿದ್ದ ಮಾಣಿಕ ವಿನಾಯಗಂ ಅವರಿಗೆ 73 ವರ್ಷ ವಯಸ್ಸಾಗಿತ್ತು. 800ಕ್ಕೂ ಅಧಿಕ ಸಿನಿಮಾ ಗೀತೆಗಳಿಗೆ ಅವರು ಧ್ವನಿ ನೀಡಿದ್ದರು. ಸಾವಿರಾರು ಭಕ್ತಿಗೀತೆಗಳು ಅವರ ಕಂಠದಲ್ಲಿ ಮೂಡಿಬಂದಿದ್ದವು. ಗಾಯನದ ಜೊತೆಯಲ್ಲಿ ನಟನಾಗಿಯೂ ಅವರು ಗುರುತಿಸಿಕೊಂಡಿದ್ದರು.
2001ರಲ್ಲಿ ಹಾಡುಗಾರಿಕೆ ಆರಂಭಿಸಿದ ಮಾಣಿಕ ವಿನಾಯಗಂ ಅವರು ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದರು. ಭಕ್ತಿ ಗೀತೆ ಮತ್ತು ಜಾನಪದ ಗೀತೆಗಳ ಮೂಲಕ ಅವರು ಫೇಮಸ್ ಆಗಿದ್ದರು. ‘ತಿರುಡ ತಿರುಡಿ’ ಚಿತ್ರದಲ್ಲಿ ಧನುಷ್ಗೆ ತಂದೆ ಆಗಿ ಅವರು ನಟಿಸಿದ್ದರು. ಆನಂತರ ಅನೇಕ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದರು. ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರು ಮಾಣಿಕ ವಿನಾಯಗಂ ಅವರ ಅಂತಿಮ ದರ್ಶನ ಪಡೆಯಲಿದ್ದಾರೆ ಎಂದು ವರದಿ ಆಗಿದೆ.
ಇದನ್ನೂ ಓದಿ:
Year Ender 2021: ಚಿತ್ರರಂಗದ ಪಾಲಿಗೆ ಕಪ್ಪು ಚುಕ್ಕೆಯಾದ 2021; ಮರೆಯೋಕೆ ಆಗಲ್ಲ ಪುನೀತ್ ನಿಧನದ ನೋವು
ಹಿರಿಯ ಛಾಯಾಗ್ರಾಹಕ ಗೋಪಾಲಕೃಷ್ಣನ್ ನಿಧನ; ಪೊಲೀಸ್ ಠಾಣೆಗೆ ದೂರು ನೀಡಿದ ಪುತ್ರ
Published On - 11:55 am, Mon, 27 December 21