ಕೇರಳದ ಚಿತ್ರಮಂದಿರ ಮಾಲೀಕರಿಂದ ಪ್ರಮುಖ ನಿರ್ಧಾರ, ಕಡಿಮೆ ಬಜೆಟ್ ಸಿನಿಮಾಗಳಿಗೆ ಭಾರಿ ಸಂಕಷ್ಟ
Malayalam Movies: ಕೇರಳ ಚಿತ್ರಮಂದಿರಗಳ ಮಾಲೀಕರ ಒಕ್ಕೂಟವು ಮಹತ್ವದ ನಿರ್ಧಾರ ಪ್ರಕಟಿಸಿದೆ. ಇನ್ನು ಮುಂದೆ ಕಳಪೆ ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ಪ್ರದರ್ಶಿಸುವುದಿಲ್ಲ ಎಂದಿವೆ.
ಕೋವಿಡ್ ಬಳಿಕ ಮಲಯಾಳಂ (Malayalam) ಸಿನಿಮಾಗಳ ವೀಕ್ಷಕರ ಸಂಖ್ಯೆಯಲ್ಲಿ ದೊಡ್ಡದಾಗಿದೆ. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಲಯಾಳಂ ಸಿನಿಮಾಗಳು ಪ್ರಶಂಸೆಗೆ ಒಳಗಾಗಿವೆ. ಕೇರಳಕ್ಕೆ ಮಾತ್ರವೇ ಸೀಮಿತವಾಗಿದ್ದ ಮಲಯಾಳಂ ಸಿನಿಮಾಗಳು (Malayalam Movie Industry) ಇಂದು ದೇಶದಾದ್ಯಂತ ತೆರೆ ಕಾಣುತ್ತಿವೆ. ಆದರೆ ಕೇರಳದಲ್ಲಿ ಬೇರೆಯದ್ದೇ ಚಿತ್ರಣ ಇದೆ. ಕೇರಳ ಸಿನಿಮಾ ಪ್ರದರ್ಶಕರ ಒಕ್ಕೂಟ (ಎಫ್ಇಯುಒಕೆ) ಹೇಳುತ್ತಿರುವಂತೆ, ಕೇರಳದ ಚಿತ್ರಮಂದಿರಗಳು (Theaters) ಕಳೆದ ಕೆಲವು ತಿಂಗಳುಗಳಿಂದ ದೊಡ್ಡ ನಷ್ಟ ಅನುಭವಿಸುತ್ತಿವೆಯಂತೆ.
ಈ ಬಗ್ಗೆ ಕೇರಳ ಫಿಲಂ ಎಕ್ಸಿಬಿಟರ್ಸ್ ಯುನೈಟೆಡ್ ಆರ್ಗನೈಸೇಷನ್ನವರು ಸಭೆ ನಡೆಸಿದ್ದು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಪ್ರದರ್ಶಕರ ಒಕ್ಕೂಟದ ಈ ನಿರ್ಧಾರಗಳು ಮಲಯಾಳಂ ಸಣ್ಣ ಹಾಗೂ ಮಧ್ಯಮ ಬಜೆಟ್ನ ಸಿನಿಮಾಗಳಿಗೆ ದೊಡ್ಡ ಸಂಕಷ್ಟವನ್ನು ತಂದೊಡ್ಡಿವೆ.
ಕೇರಳ ಸಿನಿಮಾ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ ವಿಜಯ್ಕುಮಾರ್ ಹೇಳಿರುವಂತೆ, ಇನ್ನು ಮುಂದೆ ಕೇರಳದ ಚಿತ್ರಮಂದಿರಗಳಲ್ಲಿ ಸಣ್ಣ ಮತ್ತು ಮಧ್ಯಮ ಬಜೆಟ್ನ ಸಿನಿಮಾಗಳನ್ನು ಪ್ರದರ್ಶನ ಮಾಡಲಾಗುವುದಿಲ್ಲ. ಒಂದೊಮ್ಮೆ ಸಿನಿಮಾಗಳನ್ನು ಪ್ರದರ್ಶನ ಮಾಡಬೇಕು ಎಂದರೆ ಚಿತ್ರತಂಡದವರೇ ಚಿತ್ರಮಂದಿರಗಳಿಗೆ ಶುಲ್ಕ ಪಾವತಿಸಬೇಕಾಗುತ್ತದೆ. ‘ಹಲವು ಸಿನಿಮಾಗಳಿಗೆ ಬಹಳ ಕಡಿಮೆ ಪ್ರೇಕ್ಷಕರು ಬರುತ್ತಾರೆ. ಕೆಲವು ಶೋಗಳಿಗಂತೂ ಕೇವಲ ಮೂವರು, ನಾಲ್ವರು ಮಾತ್ರವೇ ಇರುತ್ತಾರೆ. ಹೀಗಿದ್ದಾಗ ಚಿತ್ರಮಂದಿರಗಳಿಗೆ ಭಾರಿ ನಷ್ಟವಾಗುತ್ತದೆ. ಈ ಸಮಸ್ಯೆಯನ್ನು ಸರಿಪಡಿಸಲು ಕನಿಷ್ಟ ಪ್ರದರ್ಶನ ಶುಲ್ಕವನ್ನು ಸಿನಿಮಾ ನಿರ್ಮಾಪಕರಿಗೆ ಪಡೆಯಲಿದ್ದೇವೆ. ಇದು ಚಿತ್ರಮಂದಿರಗಳಿಗೆ ಆಗುವ ನಷ್ಟವನ್ನು ಸರಿದೂಗಿಸಲಿದೆ. ಯಾವ ಸಿನಿಮಾ ಈ ಕನಿಷ್ಟ ಶುಲ್ಕ ಪಾವತಿಸುವುದಿಲ್ಲವೊ ಆ ಸಿನಿಮಾವನ್ನು ಪ್ರದರ್ಶನ ಮಾಡುವುದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ:ಅಶಿಸ್ತು: ಮಲಯಾಳಂ ಚಿತ್ರರಂಗದಿಂದ ಇಬ್ಬರು ಜನಪ್ರಿಯ ನಟರ ಬ್ಯಾನ್
ಈಗಿರುವ ಸ್ಥಿತಿ ಮುಂದುವರೆದರೆ ಕೇರಳದಲ್ಲಿನ ಐವತ್ತಕ್ಕೂ ಹೆಚ್ಚು ಚಿತ್ರಮಂದಿರಗಳು ಕೆಲವೇ ತಿಂಗಳಲ್ಲಿ ಬಾಗಿಲು ಹಾಕಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿರುವ ಕೇರಳ ಸಿನಿಮಾ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ ವಿಜಯ್ಕುಮಾರ್, ಕೇರಳದ ಚಿತ್ರಮಂದಿರಗಳ ಸಾಮರ್ಥ್ಯವನ್ನೂ ಮೀರಿದ್ದಷ್ಟು ಸಿನಿಮಾಗಳು ಈ ವರ್ಷ ಬಿಡುಗಡೆ ಆಗಿವೆ. ವಾರವೊಂದಕ್ಕೆ ಏಳು-ಎಂಟು ಸಿನಿಮಾಗಳು ಬಿಡುಗಡೆ ಆಗುವ ಕೆಟ್ಟ ಪದ್ಧತಿಯನ್ನು ತಡೆಯಬೇಕಿದೆ. ಪ್ರದರ್ಶಕರ ಸಂಘವು ಮಾಡಿರುವ ಈ ನಿರ್ಧಾರಕ್ಕೆ ಮಲಯಾಳಂ ಚಿತ್ರರಂಗದ ಇತರೆ ಸಂಘಗಳು, ಒಕ್ಕೂಟಗಳು ಬೆಂಬಲ ನೀಡಬೇಕೆಂದು ಮನವಿ ಮಾಡುತ್ತಿದ್ದೇನೆ” ಎಂದಿದ್ದಾರೆ.
ಯಾವುದು ಕಳಪೆ ಸಿನಿಮಾ ಯಾವುದು ಒಳ್ಳೆಯ ಸಿನಿಮಾ ಎಂದು ನಿರ್ಧರಿಸುವುದಕ್ಕೆ ಯಾವ ಮಾನದಂಡಗಳನ್ನು ಬಳಸುತ್ತೀರ? ಎಂಬ ಪ್ರಶ್ನೆಗೆ ಉತ್ತರಿಸಿರುವ ವಿಜಯ್ಕುಮಾರ್, ”ಹಲವು ವರ್ಷಗಳ ಅನುಭವ ಇದರಲ್ಲಿ ನೆರವಾಗಲಿದೆ. ಅಲ್ಲದೆ, ಸಿನಿಮಾದ ನಟರು, ನಿರ್ಮಾಣ ಸಂಸ್ಥೆ, ವಿತರಕರು ಇಲ್ಲಿ ಬಹಳ ಪ್ರಮುಖ ಪಾತ್ರವಹಿಸುತ್ತಾರೆ. ಅವರುಗಳ ಆಧಾರದಲ್ಲಿಯೇ ಯಾವ ಸಿನಿಮಾ ಉತ್ತಮ, ಯಾವುದು ಕಳಪೆ ಯಾವುದನ್ನು ಪ್ರದರ್ಶಿಸಬೇಕು, ಯಾವುದನ್ನು ಪ್ರದರ್ಶಿಸಬಾರದು ಎಂದು ನಿರ್ಣಯಿಸುತ್ತೇವೆ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ