ದೇಶದೆಲ್ಲೆಡೆ ಕೊರೊನಾ ವೈರಸ್ನ ಎರಡನೇ ಅಲೆ ಹಬ್ಬುತ್ತಿದೆ. ಮತ್ತೆ ಲಾಕ್ಡೌನ್ ಆಗಬಹುದಾದ ಆತಂಕ ನಿರ್ಮಾಣ ಆಗುತ್ತಿದೆ. ಹಾಗಿದ್ದರೂ ಅನೇಕರಿಗೆ ಇದರ ಬಗ್ಗೆ ಕಾಳಜಿ ಇದ್ದಂತಿಲ್ಲ. ಜನ ಸಾಮಾನ್ಯರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ಕಾನೂನು ಪಾಲಿಸುವಲ್ಲಿ ಎಡವುತ್ತಿದ್ದಾರೆ. ಅಂಥವರಿಗೆ ಪಾಠ ಕಲಿಸಲಾಗುತ್ತಿದೆ. ಬಾಲಿವುಡ್ ನಟಿ ಗೌಹರ್ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆ ಮೂಲಕ ಇತರರಿಗೂ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.
ಕೆಲವು ಹಿಂದಿ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿರುವ ಗೌಹರ್ ಖಾನ್ ಅವರು ಬಿಗ್ ಬಾಸ್ನಲ್ಲೂ ಸ್ಪರ್ಧಿಸಿದ್ದರು. ಕೆಲವೇ ದಿನಗಳ ಹಿಂದೆ ಅವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢವಾಗಿತ್ತು. ಹಾಗಿದ್ದರೂ ಕೂಡ ಅವರು ನಿರ್ಲಕ್ಷ್ಯ ತೋರಿದ್ದಾರೆ. ಕ್ವಾರಂಟೈನ್ ಆಗುವ ಬದಲು ಎಲ್ಲ ಕಡೆ ಸುತ್ತಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಚಿತ್ರೀಕರಣದಲ್ಲೂ ಪಾಲ್ಗೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಇತರರ ಪ್ರಾಣಕ್ಕೂ ಅಪಾಯ ಇರುವುದರಿಂದ ಗೌಹರ್ ಖಾನ್ ವಿರುದ್ಧ ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಕೊರೊನಾ ಪಾಸಿಟಿವ್ ಆಗಿದ್ದರೂ ಕೂಡ ಗೌಹರ್ ಮನೆಯಲ್ಲಿ ಇಲ್ಲ ಎಂಬ ಮಾಹಿತಿ ಕೇಳಿಬಂದ ಹಿನ್ನೆಲೆಯಲ್ಲಿ ಬಿಎಂಸಿ ಅಧಿಕಾರಿಗಳು ನಟಿಯ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದರು. ಅಲ್ಲಿ ಗೌಹರ್ ಇಲ್ಲದಿರುವುದು ಖಚಿತ ಆಯಿತು. ನಂತರ ಅವರಿಗೆ ಕರೆ ಮಾಡಿದಾಗ ತಾವು ಮತ್ತೆ ಪರೀಕ್ಷೆ ಮಾಡಿಸಿದ್ದು, ಈಗ ನೆಗೆಟಿವ್ ವರದಿ ಬಂದಿದೆ ಎಂದು ಗೌಹರ್ ಉತ್ತರಿಸಿದರು. ಅವರ ಸಮಜಾಯಿಷಿಯನ್ನು ಅಧಿಕಾರಿಗಳು ಒಪ್ಪಿಕೊಂಡಿಲ್ಲ. ಕೂಡಲೇ ಮನೆಗೆ ಬರಬೇಕು ಎಂದು ಸೂಚನೆ ನೀಡಿರುವುದೂ ಅಲ್ಲದೆ, ಅವರ ವಿರುದ್ಧ ಪ್ರಕರಣ ದಾಖಲಿಸಿ ಕ್ವಾರಂಟೈನ್ಗೆ ಒಳಪಡಿಸಿದ್ದಾರೆ.
ನಟಿಯ ವಿರುದ್ಧ ದಾಖಲಾಗಿರುವ ದೂರಿನ ಎಫ್ಐಆರ್ ಪ್ರತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಎಂಸಿ ಹಂಚಿಕೊಂಡಿದೆ. ‘ನಗರದ ಸುರಕ್ಷತೆ ವಿಚಾರದಲ್ಲಿ ರಾಜಿ ಆಗುವುದಿಲ್ಲ. ಕೋವಿಡ್ ನಿಯಮಗಳು ಎಲ್ಲರಿಗೂ ಅನ್ವಯ ಆಗುತ್ತವೆ. ಅದನ್ನು ಸಾರ್ವಜನಿಕರು ಪಾಲಿಸಬೇಕು ಮತ್ತು ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡಬೇಕು’ ಎಂದು ಟ್ವೀಟ್ ಮಾಡಲಾಗಿದೆ. ಎಲ್ಲ ಚಿತ್ರರಂಗದಲ್ಲೂ ಸಿನಿಮಾ ಚಟುವಟಿಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿವೆ. ಈ ನಡುವೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಅದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಸರ್ಕಾರದ ಕೊವಿಡ್ ಮಾರ್ಗಸೂಚಿಗೆ ಕ್ಯಾರೇ ಅನ್ನದ ಜನ: ಸಾವಿರದ ಸನಿಹಕ್ಕೆ ತಲುಪಿದ ಕೊರೊನಾ ಕೇಸ್!
Published On - 5:27 pm, Mon, 15 March 21