ಬೆಂಗಳೂರು: ಖ್ಯಾತ ನಟ ಪ್ರಕಾಶ್ ರಾಜ್ (Prakash Raj) ಅವರು ಹಲವು ವಿವಾದಗಳನ್ನು ಮಾಡಿಕೊಂಡಿದ್ದಾರೆ. ಸಮಾಜದ ಅನೇಕ ಆಗುಹೋಗುಗಳ ಬಗ್ಗೆ ಅವರು ಮುಕ್ತವಾಗಿ ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಅದರಿಂದ ಅವರು ಸದಾ ಕಾಲ ಚರ್ಚೆಯಲ್ಲಿ ಇರುತ್ತಾರೆ. ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಾರೆ. ಪ್ರಕಾಶ್ ರಾಜ್ ಅವರನ್ನು ಟೀಕಿಸುವ ದೊಡ್ಡ ವರ್ಗ ಕೂಡ ಇದೆ. ಒಂದಷ್ಟು ದಿನಗಳ ಹಿಂದೆ ಖ್ಯಾತ ಯೂಟ್ಯೂಬ್ ವಾಹಿನಿಯಲ್ಲಿ ಪ್ರಕಾಶ್ ರಾಜ್ ವಿರುದ್ಧ ಜೀವ ಬೆದರಿಕೆ (Death Threat) ಹಾಕುವಂತಹ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಪ್ರಕಾಶ್ ರಾಜ್ ದೂರು ನೀಡಿದ್ದರು. ಈಗ ಆ ಯೂಟ್ಯೂಬ್ ವಾಹಿನಿ (YouTube Channel) ವಿರುದ್ಧ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಐಪಿಸಿ ಸೆಕ್ಷನ್ 506, 504, 505(2) ಸೆಕ್ಷನ್ ಅಡಿಯಲ್ಲಿ ಮೊಕದ್ದಮೆ ದಾಖಲಾಗಿದ್ದು, ತನಿಖೆ ಮಾಡಲಾಗುತ್ತಿದೆ. ಯೂಟ್ಯೂಬ್ ಚಾನೆಲ್ನಲ್ಲಿ ಆಗಸ್ಟ್ 14ರಂದು ಜೀವ ಬೆದರಿಕೆ ಹಾಕುವ ಸಂದೇಶದ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಅಪ್ಲೋಡ್ ಮಾಡಿರುವ 2 ವಿಡಿಯೋಗಳಲ್ಲೂ ಬೆದರಿಕೆ ಹಾಕಲಾಗಿದೆ ಎಂದು ಪ್ರಕಾಶ್ ರಾಜ್ ಆರೋಪಿಸಿದ್ದಾರೆ.
ಇದನ್ನೂ ಓದಿ: ‘ಚಂದ್ರಯಾನ 3’ ಬಗ್ಗೆ ಪ್ರಕಾಶ್ ರಾಜ್ ಮಾಡಿದ ಹಾಸ್ಯದ ಹಿಂದೆ ಬೇರೆಯದೇ ಕಥೆ ಇದೆ; ವಿವರಿಸಿದ ನಟ
ಪ್ರಕಾಶ್ ರಾಜ್ ಮಾತ್ರವಲ್ಲದೇ ಅವರ ಕುಟುಂಬದವರಿಗೂ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಯೂಟ್ಯೂಬ್ ವಾಹಿನಿ ವಿರುದ್ಧ ದೂರು ನೀಡಲಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಪ್ರಕಾಶ್ ರಾಜ್ ನೀಡಿದ ದೂರಿನ ಅನ್ವಯ ಯೂಟ್ಯೂಬ್ ವಾಹಿನಿಯ ಮುಖ್ಯಸ್ಥ ಮತ್ತು ಸಿಬ್ಬಂದಿ ವಿರುದ್ಧ ಅಶೋಕ ನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಸದ್ಯ ತನಿಖೆ ಆರಂಭ ಆಗಿದೆ.
ಬಹುಭಾಷೆಯಲ್ಲಿ ಪ್ರಕಾಶ್ ರಾಜ್ ಅವರು ಫೇಮಸ್ ಆಗಿದ್ದಾರೆ. ಎಲ್ಲ ಚಿತ್ರರಂಗದಲ್ಲೂ ಅವರಿಗೆ ಬೇಡಿಕೆ ಇದೆ. ಕೇವಲ ನಟನಾಗಿ ಮಾತ್ರವಲ್ಲದೇ ಸಾಮಾಜಿಕ ಹೋರಾಟಗಾರನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಅವರು ಟೀಕಿಸುತ್ತಾ ಬಂದಿದ್ದಾರೆ. ಆ ಬಗ್ಗೆ ಅವರು ನೇರವಾಗಿ ತಮ್ಮ ಟೀಕೆಗಳನ್ನು ವ್ಯಕ್ತಪಡಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲೂ ಪ್ರಕಾಶ್ ರಾಜ್ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಚಂದ್ರಯಾನದ ಕುರಿತು ಮಾಡಿದ ಟ್ವೀಟ್ನಿಂದ ವಿವಾದ ಸೃಷ್ಟಿ ಆಗಿತ್ತು. ನಂತರ ಅದಕ್ಕೆ ಪ್ರಕಾಶ್ ರಾಜ್ ಸ್ಪಷ್ಟನೆ ನೀಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.