ರಾಜಮೌಳಿಗೆ ಕಾಡುತ್ತಿದೆ ಆ ಭಯ, ಅಭಿಮಾನಿಗಳಲ್ಲಿ ಮಾಡಿದ್ದಾರೆ ಮನವಿ

SS Rajamouli video: ಎಸ್​​ಎಸ್ ರಾಜಮೌಳಿ ನಿರ್ದೇಶನ ಮಾಡುತ್ತಿರುವ ಮಹೇಶ್ ಬಾಬು ನಟನೆಯ ಹೊಸ ಸಿನಿಮಾ ವಿಶ್ವಮಟ್ಟದಲ್ಲಿ ಕುತೂಹಲ ಕೆರಳಿಸಿದೆ. ವಿಶ್ವ ಸಿನಿಮಾ ಪ್ರೇಮಿಗಳು ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ. ಇದೀಗ ಸಿನಿಮಾದ ಟೈಟಲ್ ಹಾಗೂ ಟೀಸರ್ ಬಿಡುಗಡೆ ಇವೆಂಟ್ ಅನ್ನು ರಾಜಮೌಳಿ ಅದ್ಧೂರಿಯಾಗಿ ಆಯೋಜಿಸಿದ್ದು, ನವೆಂಬರ್ 15 ರಂದು ಇವೆಂಟ್ ನಡೆಯಲಿದೆ. ಆದರೆ ಅದಕ್ಕೆ ಮುಂಚೆ ರಾಜಮೌಳಿ ಅವರಿಗೆ ಭಯವೊಂದು ಕಾಡುತ್ತಿದೆ. ಇದೇ ಕಾರಣಕ್ಕೆ ಅವರು ಅಭಿಮಾನಿಗಳಲ್ಲಿ ಮನವಿ ಸಹ ಮಾಡಿದ್ದಾರೆ.

ರಾಜಮೌಳಿಗೆ ಕಾಡುತ್ತಿದೆ ಆ ಭಯ, ಅಭಿಮಾನಿಗಳಲ್ಲಿ ಮಾಡಿದ್ದಾರೆ ಮನವಿ
Mahesh Babu Ss Rajamouli

Updated on: Nov 13, 2025 | 2:03 PM

ರಾಜಮೌಳಿ (SS Rajamouli) ನಿರ್ದೇಶಿಸುತ್ತಿರುವ ಹೊಸ ಸಿನಿಮಾ ವಿಶ್ವ ಸಿನಿಮಾ ಪ್ರೇಮಿಗಳ ಗಮನ ಸೆಳೆದಿದೆ. ವಿಶ್ವದಾದ್ಯಂತ ಇರುವ ಸಿನಿಮಾ ಪ್ರೇಮಿಗಳು ಸಿನಿಮಾದ ಬಗ್ಗೆ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ತಕ್ಕಂತೆ ರಾಜಮೌಳಿ ಸಹ ಸಿನಿಮಾವನ್ನು ಹಾಲಿವುಡ್ ಗುಣಮಟ್ಟದಲ್ಲಿ ನಿರ್ದೇಶಿಸಿದ್ದಾರೆ. ಮಹೇಶ್ ಬಾಬು ನಾಯಕನಾಗಿ, ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ, ಪೃಥ್ವಿರಾಜ್ ಸುಕುಮಾರನ್ ವಿಲನ್ ಆಗಿ ನಟಿಸುತ್ತಿರುವ ಈ ಸಿನಿಮಾದ ಟೈಟಲ್ ರಿಲೀಸ್​​ಗಾಗಿ ಅದ್ಧೂರಿ ಕಾರ್ಯಕ್ರಮವನ್ನು ರಾಜಮೌಳಿ ಆಯೋಜಿಸಿದ್ದಾರೆ. ಆದರೆ ಇದೀಗ ಅವರಿಗೆ ಭಯವೊಂದು ಕಾಡುತ್ತಿದೆ. ಇದೇ ಕಾರಣಕ್ಕೆ ಅಭಿಮಾನಿಗಳಲ್ಲಿ ನಿರ್ದಿಷ್ಟ ಮನವಿಯೊಂದನ್ನು ಮಾಡಿದ್ದಾರೆ.

ರಾಜಮೌಳಿ-ಮಹೇಶ್ ಬಾಬು ಅವರ ಸಿನಿಮಾವನ್ನು ‘ಗ್ಲೋಬ್ ಟ್ರೋಟೆರ್’ ಎಂದು ಕರೆಯಲಾಗುತ್ತಿದ್ದು, ಇದೀಗ ಈ ಸಿನಿಮಾ ಟೈಟಲ್ ರಿವೀಲ್ ಮತ್ತು ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ರಾಮೋಜಿ ಫಿಲಂ ಸಿಟಿಯಲ್ಲಿ ನವೆಂಬರ್ 15 ರಂದು ಆಯೋಜಿಸಲಾಗಿದೆ. ಭಾರಿ ಸಂಖ್ಯೆಯ ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಯಾವುದೇ ಅವಘಡ ಸಂಭವಿಸದಂತೆ ಪೊಲೀಸರು, ಸ್ವಯಂಸೇವಕರ ನೆರವನ್ನು ಪಡೆಯಲಾಗುತ್ತಿದೆ. ಅದಾಗ್ಯೂ, ರಾಜಮೌಳಿ ಅವರು ಖುದ್ದಾಗಿ ವಿಡಿಯೋ ಮಾಡಿ, ಕಾರ್ಯಕ್ರಮಕ್ಕೆ ಬರುವ ಅಭಿಮಾನಿಗಳಲ್ಲಿ ಕೆಲ ಮನವಿ ಮಾಡುವ ಜೊತೆಗೆ ಕೆಲ ಸೂಚನೆಗಳನ್ನು ಸಹ ನೀಡಿದ್ದಾರೆ.

‘ಈ ಇವೆಂಟ್ ಓಪನ್ ಇವೆಂಟ್ ಆಗಿರುವುದಿಲ್ಲ, ಟಿಕೆಟ್ ಇದ್ದವರಿಗೆ ಮಾತ್ರವೇ ಪ್ರವೇಶ ಇರಲಿದೆ. ಟಿಕೆಟ್ ಇಲ್ಲದವರಿಗೆ ಪ್ರವೇಶ ಇರುವುದಿಲ್ಲ. ಜೊತೆಗೆ ಮಕ್ಕಳು ಹಾಗೂ ವಯಸ್ಸಾದವರಿಗೆ ಪ್ರವೇಶವನ್ನು ಪೊಲೀಸರು ನಿರಾಕರಿಸಿದ್ದಾರೆ’ ಎಂದಿದ್ದಾರೆ. ಮುಂದುವರೆದು, ‘ಕಾರ್ಯಕ್ರಮದ ದಿನದಂದು ರಾಮೋಜಿ ಫಿಲಂ ಸಿಟಿಯ ಮುಖ್ಯ ದ್ವಾರ ಬಂದ್ ಆಗಿರಲಿದೆ. ಕಾರ್ಯಕ್ರಮಕ್ಕೆ ಬರುವವರಿಗಾಗಿ ಮೂರು ಬದಲಿ ರಸ್ತೆಗಳನ್ನು ವ್ಯವಸ್ಥೆ ಮಾಡಲಾಗಿದ್ದು, ವಿಜಯವಾಡ, ಗಚ್ಚಿಬೋಲಿ ಇನ್ನಿತರೆ ಕಡೆಗಳಿಂದ ಬರುವವರಿಗಾಗಿ ಸೂಕ್ತವಾದ ಸೂಚನಾ ಫಲಕಗಳನ್ನು ಹಾಕಲಾಗಿದ್ದು, ಕಡ್ಡಾಯವಾಗಿ ಆ ಸೂಚನಾ ಫಲಕಗಳನ್ನು ಅನುಸರಿಸಿಯೇ ಕಾರ್ಯಕ್ರಮದ ಸ್ಥಳವನ್ನು ತಲುಪಿ’ ಎಂದು ರಾಜಮೌಳಿ ಹೇಳಿದ್ದಾರೆ.

ಇದನ್ನೂ ಓದಿ:ಒಟಿಟಿಯಲ್ಲಿ ನೋಡಿ ಮಹೇಶ್ ಬಾಬು-ರಾಜಮೌಳಿ ಸಿನಿಮಾ ಇವೆಂಟ್​: ಯಾವಾಗ?

‘ಇತ್ತೀಚೆಗೆ ನಡೆದ ಕೆಲವು ಘಟನೆಗಳಿಂದಾಗಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ. ಈ ಕಾರ್ಯಕ್ರಮ ಯಶಸ್ವಿ ಆಗಬೇಕೆಂದರೆ ನೀವು ಸಹಕಾರ ನೀಡಬೇಕು. ವಿಧಿಸಲಾಗಿರುವ ನಿಯಮಗಳನ್ನು ಪಾಲಿಸಿಯೇ ಕಾರ್ಯಕ್ರಮಕ್ಕೆ ಬನ್ನಿ ಮತ್ತು ಕಾರ್ಯಕ್ರಮದಿಂದ ನಿರ್ಗಮಿಸಿ. ನಾವು ಹಾಕಿರುವ ಫಲಕಗಳ ಹೊರತಾಗಿ ಬೇರೆ ದಾರಿಗಳಲ್ಲಿ ಯಾವುದೇ ಕಾರಣಕ್ಕೂ ಬರಬೇಡಿ’ ಎಂದು ಸಹ ರಾಜಮೌಳಿ ಒತ್ತಿ ಹೇಳಿದ್ದಾರೆ.

ಇತ್ತೀಚೆಗೆ ದಳಪತಿ ವಿಜಯ್ ಚುನಾವಣಾ ಪ್ರಚಾರದ ವೇಳೆ ನಡೆದ ಕಾಲ್ತುಳಿತದಲ್ಲಿ 41 ಮಂದಿ ನಿಧನ ಹೊಂದಿದರು. ಅದಕ್ಕೂ ಮುನ್ನ, ಅಲ್ಲು ಅರ್ಜುನ್ ಅವರು ಪ್ರೀಮಿಯರ್ ಶೋ ನೋಡಲು ಹೈದರಾಬಾದ್​​ನ ಸಂಧ್ಯಾ ಥಿಯೇಟರ್​​ಗೆ ಹೋದಾಗ ಅಲ್ಲಿ ನಡೆದ ಕಾಲ್ತುಳಿತದಲ್ಲಿ ಇಬ್ಬರು ಅಸುನೀಗಿದ್ದು, ಒಬ್ಬ ಬಾಲಕ ಈಗಲೂ ಕೋಮಾದಲ್ಲಿದ್ದಾನೆ. ಹೀಗಾಗಿ, ಅದೇ ಅವಘಡಗಳು ಮರುಕಳಿಸದೇ ಇರಲೆಂದು ಪೊಲೀಸರು ಕೆಲ ಕಠಿಣ ನಿಯಮಗಳನ್ನು ಹಾಕಿದ್ದಾರೆ. ಅವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ರಾಜಮೌಳಿ ಸಹ ಮನವಿ ಮಾಡಿದ್ದಾರೆ. ಅಂದಹಾಗೆ, ನವೆಂಬರ್ 15 ರಂದು ನಡೆಯಲಿರುವ ಆ ಇವೆಂಟ್, ಜಿಯೋ ಹಾಟ್​​ಸ್ಟಾರ್​​ನಲ್ಲಿ ಲೈವ್ ಪ್ರದರ್ಶನ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ