‘ಹನುಮಾನ್ ಅಂಶ್’ ನಿರ್ಮಾಪಕರ ನಡುವೆ ಭಿನ್ನಾಭಿಪ್ರಾಯ; ತಡವಾಗಿ ಬೆಳಕಿಗೆ ಬಂತು ವಿಷಯ

ವಿಶ್ವಾದ್ಯಂತ 450 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದ 'ಹನುಮಾನ್ ಅಂಶ್' ಸಿನಿಮಾದ ನಿರ್ಮಾಪಕರ ನಡುವೆ ಭಿನ್ನಾಭಿಪ್ರಾಯ ಇದ್ದಿದ್ದು ನಿಜ ಎಂದು ಸಹ ನಿರ್ಮಾಪಕಿ ರಾಗಿಣಿ ಸೋನಾ ಒಪ್ಪಿಕೊಂಡಿದ್ದಾರೆ. ಗೋವಾ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಅವರು, ಸದ್ಯ ಎಲ್ಲವೂ ಸರಿಯಾಗಿದೆ ಎಂದಿದ್ದಾರೆ. ಅಲ್ಲದೆ ಸಿನಿಮಾದ ಸೀಕ್ವೆಲ್ ಹಾಗೂ 'ರಾಮಾಯಣ' ಚಿತ್ರದ ಜೊತೆಗಿನ ಹೋಲಿಕೆ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದಾರೆ.

‘ಹನುಮಾನ್ ಅಂಶ್’ ನಿರ್ಮಾಪಕರ ನಡುವೆ ಭಿನ್ನಾಭಿಪ್ರಾಯ; ತಡವಾಗಿ ಬೆಳಕಿಗೆ ಬಂತು ವಿಷಯ
ಹನುಮಾನ್ ಅಂಶ್
Edited By:

Updated on: Nov 25, 2026 | 8:01 AM

ವಿಶ್ವಾದ್ಯಂತ 450 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಬ್ಲಾಕ್‌ಬಸ್ಟರ್ ಹಿಟ್ ಆದ ‘ಹನುಮಾನ್ ಅಂಶ್‘ ಸಿನಿಮಾ ಈಗ ಮತ್ತೆ ಸುದ್ದಿಯಲ್ಲಿದೆ. ಚಿತ್ರದ ನಿರ್ಮಾಪಕರ ನಡುವೆ ಮನಸ್ತಾಪ ಉಂಟಾಗಿದೆ ಎಂಬ ಸುದ್ದಿ ಹರಡಿತ್ತು. ಇದೀಗ ಗೋವಾದಲ್ಲಿ ನಡೆಯುತ್ತಿರುವ 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಹ ನಿರ್ಮಾಪಕಿ ರಾಗಿಣಿ ಸೋನಾ ಈ ವದಂತಿಗಳ ಬಗ್ಗೆ ಮೌನ ಮುರಿದಿದ್ದಾರೆ.

ನಿರ್ಮಾಪಕರಾದ ಅನುಪ್ರಿಯಾ ನಾಗರ್, ವಿಶಾಲ್ ಚತುರ್ವೇದಿ, ರಾಗಿಣಿ ಸೋನಾ ಮತ್ತು ನಮ್ರತಾ ಸಿಂಗ್ ನಡುವೆ ಭಿನ್ನಾಭಿಪ್ರಾಯ ಇತ್ತು ಎಂಬುದು ನಿಜ. ಈ ಬಗ್ಗೆ ಮಾತನಾಡಿರುವ ರಾಗಿಣಿ ಸೋನಾ, ಒಂದೇ ಮನೆಯಲ್ಲಿ ನಾಲ್ಕು ಪಾತ್ರೆಗಳಿದ್ದಾಗ ಶಬ್ದ ಆಗುವುದು ಸಹಜ ಎಂದು ಹೇಳಿದ್ದಾರೆ. ಆರಂಭದಲ್ಲಿ ಕೆಲವರಿಂದ ತಪ್ಪುಗಳಾಗಿವೆ. ಆದರೆ ಈಗ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Loading...

ಈ ಭಿನ್ನಾಭಿಪ್ರಾಯ ಸಿನಿಮಾದ ಮುಂದಿನ ಭಾಗಗಳಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂದು ರಾಗಿಣಿ ಭರವಸೆ ನೀಡಿದ್ದಾರೆ. ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನದ ಕಥೆಯನ್ನು ಒಂದೇ ಸಿನಿಮಾದಲ್ಲಿ ಹೇಳಲು ಸಾಧ್ಯವಿಲ್ಲ. ಹೀಗಾಗಿ ಚಿತ್ರೀಕರಣದ ಸಮಯದಲ್ಲೇ ಮೂರು ಭಾಗಗಳಲ್ಲಿ ಸಿನಿಮಾ ಮಾಡಲು ನಿರ್ಧರಿಸಿದ್ದೆವು. ಸದ್ಯದಲ್ಲೇ ಎರಡನೇ ಭಾಗದ ಕೆಲಸ ಶುರುವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಿನಿಮಾದ ಯಶಸ್ಸಿನ ಬಗ್ಗೆ ಮಾತನಾಡಿದ ರಾಗಿಣಿ, ಆರಂಭದ ಎರಡು ವಾರ ಚಿತ್ರಮಂದಿರಗಳ ಕೊರತೆ ಇತ್ತು. ಕಲೆಕ್ಷನ್ ಕೂಡ ಅಷ್ಟಾಗಿ ಇರಲಿಲ್ಲ. ಆದರೆ ಇನ್ನೊಂದು ವಾರ ಸಿನಿಮಾ ಪ್ರದರ್ಶನ ಮುಂದುವರಿಸುವ ನಿರ್ಧಾರ ಇಡೀ ಚಿತ್ರದ ದಿಕ್ಕನ್ನೇ ಬದಲಿಸಿತು. ನಾವು ಹಣದ ಆಸೆಗಾಗಿ ಈ ಸಿನಿಮಾ ಮಾಡಲಿಲ್ಲ. ಹೆಚ್ಚು ಜನರಿಗೆ ಬಾಬಾ ಅವರ ಸಂದೇಶ ತಲುಪಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು ಎಂದಿದ್ದಾರೆ.

ಇದನ್ನೂ ಓದಿ: ‘ಹನುಮಾನ್ ಅಂಶ್’ ಸಿನಿಮಾ ಒಟಿಟಿ ಹಕ್ಕು ಮಾರಾಟವಾಗಿದ್ದು ಎಷ್ಟು ಕೋಟಿಗೆ?

ಇದೇ ವೇಳೆ ಯಶ್, ರಣಬೀರ್ ಕಪೂರ್ ನಟನೆಯ 2000 ಕೋಟಿ ಬಜೆಟ್‌ನ ‘ರಾಮಾಯಣ’ ಸಿನಿಮಾದ ಜೊತೆಗಿನ ಹೋಲಿಕೆಗೆ ಅವರು ಪ್ರತಿಕ್ರಿಯಿಸಿದ್ದಾರೆ. ‘ರಾಮಾಯಣ’ ಸಿನಿಮಾ ಹೊಸ ಇತಿಹಾಸ ಸೃಷ್ಟಿಸಲಿದೆ. ಆದರೆ ನಮ್ಮ ‘ಹನುಮಾನ್ ಅಂಶ್’ ಸಿನಿಮಾ ಹೊಸ ಟ್ರೆಂಡ್ ಸೆಟ್ ಮಾಡಿದೆ. ಬಜೆಟ್ ಮಿತಿಯಲ್ಲಿದ್ದರೆ ಸಿನಿಮಾ ಸೋಲಲು ಸಾಧ್ಯವೇ ಇಲ್ಲ. ನಾವು ಇದನ್ನು ಒಂದು ಪ್ರಾರ್ಥನೆಯಂತೆ ಭಕ್ತಿಯಿಂದ ಮಾಡಿದ್ದೇವೆ ಎಂದು ರಾಗಿಣಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಕಾಮರ್ಸ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಫ್ರೀಲ್ಯಾನ್ಸಿಂಗ್ ಮಾಡುತ್ತಿದ್ದು, ಟಿವಿ9 ಕನ್ನಡದಲ್ಲಿಯೂ ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us