ಕೊಟ್ಟ ಮಾತು ಉಳಿಸಿಕೊಂಡ ‘ಹನುಮಾನ್’ ತಂಡ, ರಾಮ ಮಂದಿರಕ್ಕೆ ಕೊಟ್ಟಿದ್ದೆಷ್ಟು?

Hanuman: ಮಾರಾಟವಾಗುವ ಪ್ರತಿ ಟಿಕೆಟ್​ನ ಐದು ರೂಪಾಯಿಯನ್ನು ರಾಮ ಮಂದಿರಕ್ಕೆ ದೇಣಿಗೆ ನೀಡುವುದಾಗಿ ಘೋಷಿಸಿದ್ದ ‘ಹನುಮಾನ್’ ಚಿತ್ರತಂಡ ಕೊಟ್ಟ ದೇಣಿಗೆ ಎಷ್ಟು?

ಕೊಟ್ಟ ಮಾತು ಉಳಿಸಿಕೊಂಡ ‘ಹನುಮಾನ್’ ತಂಡ, ರಾಮ ಮಂದಿರಕ್ಕೆ ಕೊಟ್ಟಿದ್ದೆಷ್ಟು?

Updated on: Jan 21, 2024 | 9:04 PM

ಅಯೋಧ್ಯೆ (Ayodhya) ರಾಮ ಮಂದಿರದಲ್ಲಿ ನಾಳೆ (ಜನವರಿ 22) ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಹಲವು ವರ್ಷಗಳ ನಿರೀಕ್ಷೆ ನಾಳೆಗೆ ಅಂತ್ಯವಾಗಲಿದೆ. ರಾಮ ಮಂದಿರ ನಿರ್ಮಾಣಕ್ಕೆ ಕೋಟ್ಯಂತರ ಮಂದಿ ದೇಣಿಗೆ ನೀಡಿದ್ದಾರೆ. ಸಾಮಾನ್ಯ ಜನರು ಮಾತ್ರವಲ್ಲದೆ ಹಲವು ಸಿನಿಮಾ ಸೆಲೆಬ್ರಿಟಿಗಳು, ಉದ್ಯಮಿಗಳು, ರಾಜಕಾರಣಿಗಳು ಸಹ ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿರುವ ‘ಹನುಮಾನ್’ ತಂಡ ಸಿನಿಮಾ ಬಿಡುಗಡೆಗೆ ಮುನ್ನವೇ ರಾಮ ಮಂದಿರಕ್ಕೆ ದೇಣಿಗೆ ನೀಡುವುದಾಗಿ ಪ್ರಕಟಿಸಿತ್ತು, ಅಂತೆಯೇ ಚಿತ್ರತಂಡ ದೇಣಿಗೆ ನೀಡಿದೆ.

ಮಾರಾಟವಾಗುವ ಪ್ರತಿ ಟಿಕೆಟ್​ನ ಐದು ರೂಪಾಯಿ ಮೊತ್ತವನ್ನು ರಾಮ ಮಂದಿರಕ್ಕೆ ದೇಣಿಗೆ ನೀಡುವುದಾಗಿ ಚಿತ್ರತಂಡ ಮೊದಲೇ ಘೋಷಿಸಿತ್ತು. ಅಂತೆಯೇ ಈವರೆಗೆ 53.28 ಲಕ್ಷ ಟಿಕೆಟ್​ಗಳನ್ನು ಚಿತ್ರತಂಡ ಮಾರಾಟ ಮಾಡಿದ್ದು ಪ್ರತಿ ಟಿಕೆಟ್​ಗೆ ಐದು ರೂಪಾಯಿಯಂತೆ 2.66 ಕೋಟಿ ರೂಪಾಯಿ ಮೊತ್ತವನ್ನು ಚಿತ್ರತಂಡ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದೆ.

‘ಹನುಮಾನ್’ ಚಿತ್ರತಂಡ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ 14.85 ಲಕ್ಷ ರೂಪಾಯಿ ಹಣವನ್ನು ಚಿತ್ರತಂಡ ದೇಣಿಗೆ ನೀಡಿತ್ತು. ಇದು ಪ್ರೀಮಿಯರ್ ಶೋನ ಟಿಕೆಟ್ ಮಾರಾಟದಿಂದ ಒಟ್ಟಾಗಿದ್ದ ಹಣದ ಭಾಗವಾಗಿತ್ತು. ಈಗ ಮತ್ತೆ 2.66 ಕೋಟಿ ರೂಪಾಯಿ ಮೊತ್ತವನ್ನು ದೇಣಿಗೆ ನೀಡಿದೆ. ಆ ಮೂಲಕ ಕೊಟ್ಟ ಮಾತನ್ನು ಚಿತ್ರತಂಡ ಉಳಿಸಿಕೊಂಡಿದೆ.

ಇದನ್ನೂ ಓದಿ:‘ಹನುಮಾನ್​’ ಚಿತ್ರವನ್ನು ಮಾಸ್ಟರ್​ಪೀಸ್​ ಎಂದು ಹೊಗಳಿದ ಕೇಂದ್ರ ಸಚಿವ ಅನುರಾಗ್​ ಠಾಕೂರ್​

‘ಹನುಮಾನ್’ ಸಿನಿಮಾ ಹನುಮಂತನ ಭಕ್ತನೊಬ್ಬನ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ದೊಡ್ಡ ಸ್ಟಾರ್ ನಟ ಇಲ್ಲದಿದ್ದರೂ ಸಹ ಸಿನಿಮಾದ ಕತೆ, ಗುಣಮಟ್ಟದ ವಿಎಫ್​ಎಕ್ಸ್, ಗ್ರಾಫಿಕ್ಸ್​ಗಳಿಂದ ಈ ಸಿನಿಮಾ ಗಮನ ಸೆಳೆದಿದೆ. ತೆಲುಗು ಮಾತ್ರವೇ ಅಲ್ಲದೆ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲಿಯೂ ಈ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಇನ್ನೂ ಹಲವರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾಲ ನಟನಾಗಿ ಹೆಸರು ಮಾಡಿದ್ದ ತೇಜ ಸಜ್ಜಾ ನಾಯಕನಾಗಿಯೂ ಕೆಲವು ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸಿದ್ದರು. ಇದು ಅವರ ಮೊದಲ ಆಕ್ಷನ್ ಕಮ್ ಸೂಪರ್ ಹೀರೋ ಸಿನಿಮಾ ಆಗಿದೆ. ತೇಜ ನಟನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾವನ್ನು ಪ್ರಶಾಂತ್ ವರ್ಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಕಂಡಗಟ್ಲ ನಿರಂಜನ ರೆಡ್ಡಿ. 25 ಕೋಟಿ ಬಜೆಟ್​ನಲ್ಲಿ ನಿರ್ಮಾಣ ಮಾಡಲಾದ ಈ ಸಿನಿಮಾ ಈ ವರೆಗೆ ಸುಮಾರು 200 ಕೋಟಿ ಗಳಿಕೆ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ