ಭಾರತದಲ್ಲೇ 500 ಕೋಟಿ ರೂ. ದಾಟಿದ ಧುರಂಧರ್ ಕಲೆಕ್ಷನ್: ಮುಂದಿನ ಟಾರ್ಗೆಟ್ ಏನು?
‘ಅವತಾರ್ 3’ ಬಿಡುಗಡೆ ಆಗಿದ್ದರೂ ಕೂಡ ‘ಧುರಂಧರ್’ ಸಿನಿಮಾದ ಕಲೆಕ್ಷನ್ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅಕ್ಷಯ್ ಖನ್ನಾ, ರಣವೀರ್ ಸಿಂಗ್ ನಟನೆಯ ಈ ಸಿನಿಮಾವನ್ನು ಜನರು ಇಂದಿಗೂ ಮುಗಿಬಿದ್ದು ನೋಡುತ್ತಿದ್ದಾರೆ. ಇನ್ನಷ್ಟು ಪ್ರಚಾರ ಸಿಕ್ಕರೆ ಭಾರತದಲ್ಲಿ ‘ಧುರಂಧರ್’ ಸಿನಿಮಾದ ಕಲೆಕ್ಷನ್ 700 ಕೋಟಿ ರೂಪಾಯಿ ತಲುಪಬಹುದು.

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ (Dhurandhar) ಸಿನಿಮಾ ಇಷ್ಟು ದೊಡ್ಡ ಹಿಟ್ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆರಂಭದಲ್ಲಿ ಸಾಧಾರಣ ಓಪನಿಂಗ್ ಪಡೆದುಕೊಂಡ ಈ ಸಿನಿಮಾ, ನಂತರದಲ್ಲಿ ಭಾರಿ ಕಲೆಕ್ಷನ್ ಮಾಡಲು ಆರಂಭಿಸಿತು. ನೋಡನೋಡುತ್ತಿದ್ದಂತೆಯೇ ಭಾರತದ ಬಾಕ್ಸ್ ಆಫೀಸ್ನಲ್ಲಿ ‘ಧುರಂಧರ್’ ಸಿನಿಮಾದ ಕಲೆಕ್ಷನ್ (Dhurandhar Box Office Collection) 500 ಕೋಟಿ ರೂಪಾಯಿ ಮೀರಿದೆ. ಈಗಾಗಲೇ ಅನೇಕ ಸಿನಿಮಾಗಳ ದಾಖಲೆಗಳನ್ನು ಈ ಚಿತ್ರ ಮುರಿದಿದೆ. ರಣವೀರ್ ಸಿಂಗ್ (Ranveer Singh) ಅವರಿಗೆ ಈ ಸಿನಿಮಾದಿಂದ ಭರ್ಜರಿ ಗೆಲುವು ಸಿಕ್ಕಿದೆ.
‘ಧುರಂಧರ್’ ಸಿನಿಮಾ ಬಿಡುಗಡೆ ಆಗಿ 17 ದಿನಗಳ ಕಳೆದಿವೆ. ಹಾಗಿದ್ದರೂ ಕೂಡ ಈ ಚಿತ್ರದ ನಾಗಾಲೋಟ ನಿಂತಿಲ್ಲ. ಪ್ರತಿ ದಿನ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತ ಮುಂದುವರಿದಿದೆ. ವೀಕೆಂಡ್ ಮಾತ್ರವಲ್ಲದೇ ಇನ್ನುಳಿದ ದಿನಗಳಲ್ಲಿ ಕೂಡ ಈ ಸಿನಿಮಾ ಪ್ರತಿ ದಿನ 20 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುತ್ತಿರುವುದು ವಿಶೇಷ.
3ನೇ ಶನಿವಾರ, ಅಂದರೆ 16ನೇ ದಿನ ‘ಧುರಂಧರ್’ ಸಿನಿಮಾ ಅಂದಾಜು 33.5 ಕೋಟಿ ರೂಪಾಯಿ ಗಳಿಸಿದೆ. sacnilk ನೀಡಿರುವ ಆರಂಭಿಕ ವರದಿಗಳ ಪ್ರಕಾರ, 16 ದಿನಕ್ಕೆ ಭಾರತದಲ್ಲಿ ಈ ಸಿನಿಮಾದ ಒಟ್ಟು ಕಲೆಕ್ಷನ್ 516 ಕೋಟಿ ರೂಪಾಯಿ ಮೀರಿದೆ. ಭಾನುವಾರ (ಡಿಸೆಂಬರ್ 21) ಕೂಡ ಈ ಸಿನಿಮಾಗೆ ಉತ್ತಮವಾಗಿ ಕಲೆಕ್ಷನ್ ಆಗುವ ಸಾಧ್ಯತೆ ದಟ್ಟವಾಗಿದೆ.
ಇಂದಿಗೂ ಹಲವು ಕಡೆಗಳಲ್ಲಿ ‘ಧುರಂಧರ್’ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಇದರಿಂದಾಗಿ ಇನ್ನೂ ಹಲವು ದಿನಗಳ ಕಾಲ ಈ ಚಿತ್ರಕ್ಕೆ ಬಹುಕೋಟಿ ರೂಪಾಯಿ ಕಲೆಕ್ಷನ್ ಆಗಲಿದೆ. ಆದ್ದರಿಂದ ಈ ಚಿತ್ರ ಅನಾಯಾಸವಾಗಿ 600 ಕೋಟಿ ರೂಪಾಯಿ ಗಳಿಕೆ ಮಾಡಲಿದೆ. ಹೊಸ ಸಿನಿಮಾಗಳು ಬಿಡುಗಡೆ ಆದರೂ ಕೂಡ ‘ಧುರಂದರ್’ ಅಬ್ಬರವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: ಬ್ಯಾನ್ ಮಧ್ಯೆಯೂ ಕಳ್ಳ ಮಾರ್ಗದಲ್ಲಿ ‘ಧುರಂಧರ್’ ವೀಕ್ಷಿಸಿದ 20 ಲಕ್ಷ ಪಾಕ್ ಮಂದಿ
‘ಗದರ್ 2’ (525 ಕೋಟಿ), ಪಠಾಣ್ (543 ಕೋಟಿ), ‘ಅನಿಮಲ್’ (553 ಕೋಟಿ) ಸಿನಿಮಾಗಳನ್ನು ಶೀಘ್ರದಲ್ಲೇ ‘ಧುರಂಧರ್’ ಚಿತ್ರ ಹಿಂದಿಕ್ಕಲಿದೆ. ಭಾರತದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾಗಳಾದ ‘ಸ್ತ್ರೀ’ (598 ಕೋಟಿ), ‘ಛಾವ’ (601 ಕೋಟಿ) ಹಾಗೂ ‘ಜವಾನ್’ (640 ಕೋಟಿ) ದಾಖಲೆಯನ್ನು ಮುರಿಯುವ ಟಾರ್ಗೆಟ್ ಈಗ ‘ಧುರಂಧರ್’ ಸಿನಿಮಾದ ಮುಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




