25 ದಿನಗಳಲ್ಲಿ 300 ಕೋಟಿ ರೂಪಾಯಿ ಗಳಿಸಿದ ‘ಹನುಮಾನ್’ ಸಿನಿಮಾ
ತೆಲುಗಿನ ‘ಹನುಮಾನ್’ ಸಿನಿಮಾ ಕನ್ನಡ, ತಮಿಳು, ಹಿಂದಿ ಮುಂತಾದ ಭಾಷೆಗಳಿಗೆ ಡಬ್ ಆಗಿ ತೆರೆಕಂಡಿತು. 25 ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಂಡಿದ್ದು, ಈ ಸಿನಿಮಾದ ಗಳಿಕೆ ಎಲ್ಲರ ಕಣ್ಣು ಕುಕ್ಕುವಂತಾಗಿದೆ. ವಿಶ್ವಾದ್ಯಂತ ಬರೋಬ್ಬರಿ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಈ ಸಿನಿಮಾ ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆದ ‘ಹನುಮಾನ್’ ಸಿನಿಮಾ (HanuMan Movie) ಈ ಪರಿ ಕಲೆಕ್ಷನ್ ಮಾಡುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ನೋಡನೋಡುತ್ತಿದ್ದಂತೆಯೇ ಈ ಸಿನಿಮಾದ ಕಲೆಕ್ಷನ್ 300 ಕೋಟಿ ರೂಪಾಯಿ ಆಗಿದೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಮುನ್ನೂರು ಕೋಟಿ ರೂಪಾಯಿ ಕ್ಲಬ್ ಸೇರಿರುವುದಕ್ಕೆ ಚಿತ್ರತಂಡ ಸಂಭ್ರಮಿಸಿದೆ. ಈ ಸಿನಿಮಾಗೆ ಪ್ರಶಾಂತ್ ವರ್ಮಾ ನಿರ್ದೇಶನ ಮಾಡಿದ್ದಾರೆ. ಕಲೆಕ್ಷನ್ (HanuMan Movie Collection) ಬಗ್ಗೆ ಮಾಹಿತಿ ನೀಡುವ ಪೋಸ್ಟರ್ ಅನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತೇಜ ಸಜ್ಜಾ (Teja Sajja) ಅವರು ‘ಹನುಮಾನ್’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಈ ಸಿನಿಮಾದ ಗೆಲುವಿನ ಬಳಿಕ ಅವರ ಡಿಮ್ಯಾಂಡ್ ಹೆಚ್ಚಾಗಿದೆ. ಕನ್ನಡದ ಕಲಾವಿದರು ಸಹ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.
ಜನವರಿ 12ರಂದು ‘ಹನುಮಾನ್’ ಸಿನಿಮಾ ರಿಲೀಸ್ ಆಯಿತು. ಈ ಸಿನಿಮಾದಲ್ಲಿ ದೇಸಿ ಸೂಪರ್ ಹೀರೋ ಕಾನ್ಸೆಪ್ಟ್ ಇದೆ. ಆಂಜನೇಯನ ಕಾರಣದಿಂದ ಸೂಪರ್ ಪವರ್ ಪಡೆಯುವ ಸಾಮಾನ್ಯ ಹಳ್ಳಿ ಹುಡುಗನ ಕಹಾನಿ ಈ ಚಿತ್ರದಲ್ಲಿ ಇದೆ. ಇದರಲ್ಲಿನ ಗ್ರಾಫಿಕ್ಸ್ ನೋಡಿ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಕನ್ನಡದಲ್ಲೂ ‘ಹನುಮಾನ್’ ಬಿಡುಗಡೆಯಾಗಿ ಯಶಸ್ವಿ ಆಗಿದೆ.
ಇದನ್ನೂ ಓದಿ: ‘ಹನುಮಾನ್’ ಚಿತ್ರಕ್ಕಾಗಿ 75 ಸಿನಿಮಾಗಳ ಅವಕಾಶ ಕೈಚೆಲ್ಲಿದ್ದ ನಟ ತೇಜ ಸಜ್ಜಾ
ಕನ್ನಡದ ಹುಡುಗಿ ಅಮೃತಾ ಅಯ್ಯರ್, ರಾಜ್ ದೀಪಕ್ ಶೆಟ್ಟಿ ಅವರು ‘ಹನುಮಾನ್’ ಸಿನಿಮಾದಲ್ಲಿ ನಟಿಸಿದ್ದಾರೆ. ವಿನಯ್ ರೈ ಅವರು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಖ್ಯಾತ ನಟಿ ವರಲಕ್ಷ್ಮೀ ಶರತ್ಕುಮಾರ್ ಅವರಿಗೂ ಒಂದು ಮುಖ್ಯವಾದ ಪಾತ್ರವಿದೆ. ಸೂಪರ್ ಹೀರೋ ಆಗಿ ತೇಜ ಸಜ್ಜಾ ಅವರು ನಟಿಸಿದ್ದಾರೆ. ಈ ಸಿನಿಮಾಗಾಗಿ ಅವರು 3 ವರ್ಷ ಮೀಸಲಿಟ್ಟಿದ್ದರು. ಆ ಗ್ಯಾಪ್ನಲ್ಲಿ 70ಕ್ಕೂ ಅಧಿಕ ಪ್ರಾಜೆಕ್ಟ್ಗಳನ್ನು ರಿಜೆಕ್ಟ್ ಮಾಡಿರುವುದಾಗಿ ಅವರು ಇತ್ತೀಚೆಗೆ ಹೇಳಿಕೊಂಡಿದ್ದರು.
ಪ್ರಶಾಂತ್ ವರ್ಮಾ ಸೋಶಿಯಲ್ ಮೀಡಿಯಾ ಪೋಸ್ಟ್:
View this post on Instagram
ಮಹೇಶ್ ಬಾಬು, ಧನುಷ್, ಅಕ್ಕಿನೇನಿ ನಾಗಾರ್ಜುನ ಅವರಂತಹ ಸ್ಟಾರ್ ನಟರ ಸಿನಿಮಾಗಳ ಎದುರಿನಲ್ಲಿ ‘ಹನುಮಾನ್’ ಚಿತ್ರ ಬಿಡುಗಡೆ ಆಗಿತ್ತು. ಹಾಗಾಗಿ ಈ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡುವುದಿಲ್ಲ ಎಂದು ಕೆಲವರು ಅಂದುಕೊಂಡಿದ್ದರು. ಆದರೆ ನಂತರ ಬಾಕ್ಸ್ ಆಫೀಸ್ನಲ್ಲಿ ಆಗಿದ್ದು ನಿಜಕ್ಕೂ ಮ್ಯಾಜಿಕ್. ಸಂಕ್ರಾಂತಿ ಸಂದರ್ಭದಲ್ಲಿ ಬಿಡುಗಡೆಯಾದ ಬೇರೆ ಎಲ್ಲ ನಟರ ಸಿನಿಮಾಗಳಿಗಿಂತಲೂ ‘ಹನುಮಾನ್’ ಹೆಚ್ಚು ಕಲೆಕ್ಷನ್ ಮಾಡಿತು. ಈಗ ಸಿನಿಮಾದ ಗಳಿಕೆ 300 ಕೋಟಿ ರೂಪಾಯಿ ತಲುಪಿದ್ದು ಚಿತ್ರತಂಡಕ್ಕೆ ಖುಷಿ ನೀಡಿದೆ. ಸದ್ಯ ಈ ಸಿನಿಮಾಗೆ ಸೀಕ್ವೆಲ್ ಸಿದ್ಧವಾಗಿತ್ತಿದ್ದು, ಅದಕ್ಕೆ ‘ಜೈ ಹನುಮಾನ್’ ಎಂದು ಶೀರ್ಷಿಕೆ ಇಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ