ಕಾಲಿವುಡ್ನ ಖ್ಯಾತ ನಟ ದಳಪತಿ ವಿಜಯ್ ಅವರಿಗೆ ಇಂದು (ಜೂ.22) ಜನ್ಮದಿನ. 1984ರಲ್ಲೇ ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು, ನಂತರ ಹೀರೋ ಆಗಿ ಮಿಂಚಲು ಆರಂಭಿಸಿದರು. ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡು ಬಹುಬೇಡಿಕೆಯ ಸ್ಟಾರ್ ನಟನಾಗಿ ಮುಂದುವರಿಯುತ್ತಿದ್ದಾರೆ. ಈವರೆಗೂ 64 ಸಿನಿಮಾಗಳನ್ನು ಮಾಡಿರುವ ವಿಜಯ್, ಈಗ 65ನೇ ಸಿನಿಮಾ ‘ಬೀಸ್ಟ್’ಗಾಗಿ ತಯಾರಿ ನಡೆಸುತ್ತಿದ್ದಾರೆ. ಪ್ರತಿ ಚಿತ್ರದಲ್ಲಿಯೂ ಹೊಸದೇನಾದರೂ ಪ್ರಯತ್ನಿಸುವುದು ಅವರ ಗುಣ. ಆ ಕಾರಣಕ್ಕಾಗಿ ಅವರು ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗುತ್ತಾರೆ. ದಳಪತಿ ವಿಜಯ್ ಅವರ ಈ 5 ದಿ ಬೆಸ್ಟ್ ಸಿನಿಮಾಗಳನ್ನು ಪ್ರೇಕ್ಷಕರು ಮಿಸ್ ಮಾಡಿಕೊಳ್ಳಬಾರದು.
ಪೋಕಿರಿ:
2007ರಲ್ಲಿ ಪೋಕಿರಿ ಸಿನಿಮಾ ತೆರೆಕಂಡಿತು. ಪ್ರಭುದೇವ ನಿರ್ದೇಶನ ಮಾಡಿದ್ದ ಈ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಷನ್ ಇತ್ತು. ಪ್ರೇಕ್ಷಕರು ಚಿತ್ರವನ್ನು ಸಖತ್ ಮೆಚ್ಚಿಕೊಂಡರು. ಚಿತ್ರಮಂದಿರದಲ್ಲಿ 200 ದಿನಗಳ ಕಾಲ ಪ್ರದರ್ಶನ ಕಂಡ ಪೋಕಿರಿ ಬ್ಲಾಕ್ಬಸ್ಟರ್ ಹಿಟ್ ಎನಿಸಿಕೊಂಡಿತ್ತು.
ತುಪ್ಪಾಕಿ:
ತುಪ್ಪಾಕಿ (2012) ಸಿನಿಮಾದಲ್ಲಿ ಮಿಲಿಟರಿ ಅಧಿಕಾರಿಯ ಪಾತ್ರದಲ್ಲಿ ವಿಜಯ್ ಕಾಣಿಸಿಕೊಂಡಿದ್ದರು. ಅವರಿಗೆ ನಟಿ ಕಾಜಲ್ ಅಗರ್ವಾಲ್ ಜೋಡಿ ಆಗಿದ್ದರು. ಎ.ಆರ್. ಮುರುಗದಾಸ್ ನಿರ್ದೇಶನ ಮಾಡಿದ್ದ ಈ ಚಿತ್ರಕ್ಕೆ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿತು. ವಿಜಯ್ ವೃತ್ತಿಜೀವನದಲ್ಲಿ 100 ಕೋಟಿ ರೂ. ಬಾಚಿಕೊಂಡ ಮೊದಲ ಸಿನಿಮಾ ತುಪ್ಪಾಕಿ.
ಕತ್ತಿ:
2014ರಲ್ಲಿ ಕತ್ತಿ ಸಿನಿಮಾ ಬಿಡುಗಡೆ ಆಯಿತು. ವಿಜಯ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೂ ಎ.ಆರ್. ಮುರುಗದಾಸ್ ನಿರ್ದೇಶನ ಮಾಡಿದ್ದರು. ಸಮಂತಾ ಅಕ್ಕಿನೇನಿ ಮತ್ತು ನೀಲ್ ನಿತಿನ್ ಮುಕೇಶ್ ಅವರು ವಿಜಯ್ ಜೊತೆ ಇನ್ನುಳಿದ ಪ್ರಮುಖ ಪಾತ್ರಗಳನ್ನು ಮಾಡಿದ್ದರು. ಬಾಕ್ಸ್ ಆಫೀಸ್ನಲ್ಲಿ 130 ಕೋಟಿ ರೂ.ಗಳನ್ನು ಈ ಸಿನಿಮಾ ಕಲೆಕ್ಷನ್ ಮಾಡಿತ್ತು ಎನ್ನಲಾಗಿದೆ.
ಮೆರ್ಸಲ್:
ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಆ್ಯಕ್ಷನ್-ಕಟ್ ಹೇಳಿದ್ದ ಈ ಚಿತ್ರ 2017ರಲ್ಲಿ ರಿಲೀಸ್ ಆಗಿತ್ತು. ವಿಶೇಷ ಎಂದರೆ ಈ ಸಿನಿಮಾದಲ್ಲಿ ವಿಜಯ್ ತ್ರಿಪಾತ್ರ ಮಾಡಿದ್ದರು. ನಿತ್ಯಾ ಮೆನನ್, ಕಾಜಲ್ ಅಗರ್ವಾಲ್ ಮತ್ತು ಸಮಂತಾ ಅಕ್ಕಿನೇನಿ ನಾಯಕಿಯರಾಗಿ ನಟಿಸಿದ್ದರು. ಮೆಡಿಕಲ್ ಸ್ಕ್ಯಾಮ್ ಕುರಿತ ಕಥೆಯಲ್ಲಿ ವಿಜಯ್ ಮಾಡಿದ ವೆಟ್ರಿಮಾರನ್ ಎಂಬ ಪಾತ್ರ ಎಲ್ಲರಿಗೂ ಇಷ್ಟ ಆಯಿತು.
ಬಿಗಿಲ್:
ಸ್ಪೋರ್ಟ್ಸ್ ಡ್ರಾಮಾ ಕಥೆಯುಳ್ಳ ಸಿನಿಮಾ ಬಿಗಿಲ್. ಅಪ್ಪ ಮತ್ತು ಮಗನಾಗಿ ವಿಜಯ್ ಅವರು ದ್ವಿಪಾತ್ರ ಮಾಡಿದ್ದರು. 2019ರಲ್ಲಿ ಬಂದ ಈ ಚಿತ್ರಕ್ಕೂ ಅಟ್ಲೀ ಕುಮಾರ್ ಅವರೇ ನಿರ್ದೇಶನ ಮಾಡಿದ್ದರು. ತಂದೆಯ ಪಾತ್ರದಲ್ಲಿ ವಿಜಯ್ ನಟನೆ ಹೆಚ್ಚು ಗಮನ ಸೆಳೆದಿತ್ತು. ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದಲೂ ಈ ಸಿನಿಮಾ ಭಾರಿ ಮೆಚ್ಚುಗೆ ಪಡೆದುಕೊಂಡಿತ್ತು.
ಇದನ್ನೂ ಓದಿ:
‘ಬೀಸ್ಟ್’ ಅವತಾರದಲ್ಲಿ ದಳಪತಿ ವಿಜಯ್; ಹೊಸ ಲುಕ್ ನೋಡಿ ಫ್ಯಾನ್ಸ್ ಫಿದಾ
ದಳಪತಿ ವಿಜಯ್ಗೆ 100 ಕೋಟಿ ಸಂಭಾವನೆ ಕೊಡಲು ಮುಂದಾದ ನಿರ್ಮಾಪಕ; ಅಬ್ಬಬ್ಬಾ ಯಾವುದು ಈ ಸಿನಿಮಾ?