ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ತ್ರಿಶಾ ಕೃಷ್ಣನ್ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರೆಲ್ಲರಿಂದಲೂ ಈ ಸ್ಟಾರ್ ನಟಿಗೆ ಇಂದು (ಮೇ 4) ಜನ್ಮದಿನದ ಶುಭಾಶಯ ಹರಿದುಬರುತ್ತಿದೆ. ದಕ್ಷಿಣ ಭಾರತದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದ ತ್ರಿಶಾ ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹದಿಹರೆಯದ ಹೀರೋಯಿನ್ಗಳು ಕೂಡ ನಾಚುವಂತೆ ಇಂದಿಗೂ ತ್ರಿಶಾ ಬೇಡಿಕೆ ಉಳಿಸಿಕೊಂಡಿದ್ದಾರೆ.
ತ್ರಿಶಾ ಚಿತ್ರರಂಗಕ್ಕೆ ಕಾಲಿಟ್ಟು 22 ವರ್ಷ ಕಳೆದಿದೆ. 90ರ ದಶಕದಲ್ಲಿ ಬಹುತೇಕ ಹುಡುಗರ ಪಾಲಿನ ಕ್ರಶ್ ಆಗಿದ್ದವರು ಅವರು. ಈಗಲೂ ಅವರ ಬಗ್ಗೆ ಸಿನಿಪ್ರಿಯರು ಅಷ್ಟೇ ಅಭಿಮಾನ ಇಟ್ಟುಕೊಂಡಿದ್ದಾರೆ. ಅವರ ಜನ್ಮದಿನದ ಸಲುವಾಗಿ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಳೆ ಸುರಿಸಲಾಗುತ್ತಿದೆ. ತ್ರಿಶಾ ನಟನೆಯ ಬೆಸ್ಟ್ ಪಾತ್ರಗಳನ್ನು ಅಭಿಮಾನಿಗಳು ಮೆಲುಕು ಹಾಕುತ್ತಿದ್ದಾರೆ. ಅವರ 5 ದಿ ಬೆಸ್ಟ್ ಪಾತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ…
1. 96
2018ರಲ್ಲಿ ತೆರೆಕಂಡ 96 ಸಿನಿಮಾ ತ್ರಿಶಾ ವೃತ್ತಿಜೀವನದ ಅತಿ ಮುಖ್ಯ ಚಿತ್ರ ಎಂದರೂ ತಪ್ಪಲ್ಲ. ಎಲ್ಲೋ ಒಂದು ಕಡೆ ಅವರು ತೆರೆಮರೆಗೆ ಸರಿಯುತ್ತಿದ್ದಾರೇನೋ ಎಂದುಕೊಳ್ಳುತ್ತಿರುವಾಗಲೇ ಅವರಿಗೆ 96 ಸಿನಿಮಾದಿಂದ ಭರ್ಜರಿ ಗೆಲುವು ಸಿಕ್ಕಿತು. ಯಾವುದೇ ಗ್ಲಾಮರ್ ಹಂಗಿಲ್ಲದೇ ಕಾಣಿಸಿಕೊಂಡ ಅವರ ಪಾತ್ರಕ್ಕೆ ಜನ ಫಿದಾ ಆದರು. ಈ ಚಿತ್ರದಲ್ಲಿ ನಟ ವಿಜಯ್ ಸೇತುಪತಿಗೆ ತ್ರಿಶಾ ಜೋಡಿ ಆಗಿದ್ದರು.
2. ವಿನ್ನೈತಾಂಡಿ ವರುವಾಯಾ
ಗೌತಮ್ ಮೆನನ್ ನಿರ್ದೇಶನದ ಈ ಸಿನಿಮಾ ತೆರೆಕಂಡಿದ್ದು 2010ರಲ್ಲಿ. ಜೆಸ್ಸಿ ಎಂಬ ಕ್ರಿಶ್ಚಿಯನ್ ಹುಡುಗಿಯ ಪಾತ್ರಕ್ಕೆ ತ್ರಿಶಾ ಬಣ್ಣ ಹಚ್ಚಿದ್ದರು. ಅವರಿಗೆ ಜೋಡಿಯಾಗಿ ನಟಿಸಿದ್ದ ಸಿಂಬು ಹಿಂದು ಹುಡುಗನಾಗಿ ಕಾಣಿಸಿಕೊಂಡಿದ್ದರು. ಜೆಸ್ಸಿ ಪಾತ್ರಕ್ಕೆ ತ್ರಿಶಾ ಅಲ್ಲದೇ ಬೇರೆ ಯಾರೂ ಸೂಕ್ತ ಅಲ್ಲ ಎಂದು ಅವರ ಅಭಿಮಾನಿಗಳು ಈಗಲೂ ಹೇಳುತ್ತಾರೆ.
3. ಅಭಿಯುಮ್ ನಾನುಮ್
ರಾಧಾ ಮೋಹನ್ ನಿರ್ದೇಶನದ ಈ ಸಿನಿಮಾದಲ್ಲಿ ಖ್ಯಾತ ನಟ ಪ್ರಕಾಶ್ ರಾಜ್ ಜೊತೆ ತ್ರಿಶಾ ನಟಿಸಿದ್ದರು. ಅಪ್ಪ-ಮಗಳ ಬಾಂಧವ್ಯದ ಕಥೆಯನ್ನು ಈ ಚಿತ್ರ ಹೊಂದಿದೆ. ಹದಿಹರೆಯದ ಹುಡುಗಿಯ ಪಾತ್ರದಲ್ಲಿ ಅವರ ನಟನೆಗೆ ಎಲ್ಲರೂ ಫಿದಾ ಆದರು. ಇದೇ ಸಿನಿಮಾ 2010ರಲ್ಲಿ ಕನ್ನಡಕ್ಕೆ ‘ನಾನು ನನ್ನ ಕನಸು’ ಹೆಸರಿನಲ್ಲಿ ರಿಮೇಕ್ ಆಗಿತು. ಅದರಲ್ಲಿ ಪ್ರಕಾಶ್ ರಾಜ್ ಜೊತೆ ಅಮೂಲ್ಯ ನಟಿಸಿದ್ದರು.
4. ನೂವಸ್ತಾವಂಟೆ ನೇನೊದ್ದಾಂಟಾನಾ
ಈ ಸಿನಿಮಾ 2005ರಲ್ಲಿ ತೆರೆಕಂಡಿತ್ತು. ತ್ರಿಶಾ ಮತ್ತು ಸಿದ್ಧಾರ್ಥ್ ಜೋಡಿಯಾಗಿ ನಟಿಸಿದ್ದರು. ಹಳ್ಳಿ ಹುಡುಗಿಯ ಪಾತ್ರದಲ್ಲಿ, ರೈತನ ತಂಗಿಯಾಗಿ ತ್ರಿಶಾ ಕಾಣಿಸಿಕೊಂಡಿದ್ದರು. ಆ ಚಿತ್ರದಲ್ಲಿನ ತ್ರಿಶಾ ನಟನೆಯನ್ನು ಅಭಿಮಾನಿಗಳು ಇಂದಿಗೂ ಕೊಂಡಾಡುತ್ತಾರೆ. ಒಂದೂವರೆ ದಶಕ ಕಳೆದರೂ ಅನೇಕರ ಫೇವರಿಟ್ ಪಟ್ಟಿಯಲ್ಲಿ ಆ ಸಿನಿಮಾ ಇದೆ. ಆ ಚಿತ್ರದಲ್ಲಿನ ನಟನೆಗಾಗಿ ತ್ರಿಶಾ ಅತ್ಯುತ್ತಮ ನಟಿ ಫಿಲ್ಮ್ಫೇರ್ ಪ್ರಶಸ್ತಿ ಪಡೆದುಕೊಂಡರು.
5. ಮೌನಂ ಪೇಸಿಯಾದೆ
ನಾಯಕಿಯಾಗಿ ತ್ರಿಶಾ ನಟಿಸಿದ ಮೊದಲ ಸಿನಿಮಾ ಮೌನಂ ಪೇಸಿಯಾದೆ. 2002ರಲ್ಲಿ ಈ ಚಿತ್ರ ತೆರೆಕಂಡಿತು. ಆಗ ತಾನೆ ಚಿತ್ರರಂಗಕ್ಕೆ ಕಾಲಿಟ್ಟ ಈ ಹೊಸ ನಟಿಯ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ವಿಮರ್ಶಕರಿಂದಲೂ ಅವರು ಮೆಚ್ಚಿಗೆ ಪಡೆದುಕೊಂಡರು. ಈ ಸಿನಿಮಾದಲ್ಲಿ ನಟ ಸೂರ್ಯಗೆ ತ್ರಿಶಾ ಜೋಡಿ ಆಗಿದ್ದರು. ಆನಂತರ ಅವರು ಮಾಡಿದ್ದೆಲ್ಲವೂ ಇತಿಹಾಸ.
ಇದನ್ನೂ ಓದಿ: ನನ್ನ ಫೇವರೆಟ್ ಕನ್ನಡ ಸಿನಿಮಾ ಯಾವುದು ಗೊತ್ತಾ? -ನಟಿ ರಶ್ಮಿಕಾ ಮಂದಣ್ಣ