ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ವಿರುದ್ಧ ಹಲವು ವರ್ಷಗಳಿಂದ ನಡೆಯುತ್ತ ಬಂದ ಲೈಂಗಿಕ ದೌರ್ಜನ್ಯ ಈಗ ಜಗಜ್ಜಾಹೀರಾಗಿದೆ. ಮಹಿಳೆಯರ ಮೇಲಿನ ಕಿರುಕುಳದ ಬಗ್ಗೆ ‘ಹೇಮಾ ಸಮಿತಿ’ ವರದಿ ಸಲ್ಲಿಸಿದೆ. ಇದನ್ನು ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಕೇರಳ ಸರ್ಕಾರ ಮುಂದಾಗಿದೆ. ಹೇಮಾ ಸಮಿತಿ ವರದಿ ಬಗ್ಗೆ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಟಾಲಿವುಡ್ನ ಖ್ಯಾತ ನಟಿ ಸಮಂತಾ ರುತ್ ಪ್ರಭು ಕೂಡ ಈ ವರದಿಯನ್ನು ಬೆಂಬಲಿಸಿದ್ದಾರೆ. ಅಲ್ಲದೇ, ಟಾಲಿವುಡ್ನಲ್ಲೂ ಇಂಥ ವರದಿ ಪ್ರಕಟ ಆಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಮಂತಾ ರುತ್ ಪ್ರಭು ಅವರು ಅನೇಕ ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಸ್ಟಾರ್ ನಟಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. ಮಹಿಳಾಪ್ರಧಾನ ಸಿನಿಮಾಗಳನ್ನು ಕೂಡ ಮಾಡಿ ಸೈ ಎನಿಸಿಕೊಂಡಿದ್ದಾರೆ. ಮಲಯಾಳಂ ರೀತಿಯೇ ತೆಲುಗು ಚಿತ್ರರಂಗದಲ್ಲೂ ಮಹಿಳೆಯರ ಮೇಲೆ ನಡೆದ ಲೈಂಗಿಕ ಶೋಷಣೆ ಬೆಳಕಿಗೆ ಬರಬೇಕು ಎಂಬ ಒತ್ತಾಯ ಅನೇಕರಿಂದ ಕೇಳಿಬಂದಿದೆ. ಅದಕ್ಕೆ ಸಮಂತಾ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಮಂತಾ ಅವರು ಇತ್ತೀಚೆಗೆ ಹೇಮಾ ಕಮಿಟಿ ವರದಿ ಬಗ್ಗೆ ಪೋಸ್ಟ್ ಮಾಡಿದ್ದರು. ‘ತೆಲುಗು ಚಿತ್ರರಂಗದ ಮಹಿಳೆಯರು ಹೇಮಾ ಸಮಿತಿಯ ವರದಿಯನ್ನು ಸ್ವಾಗತಿಸುತ್ತೇವೆ. ಇದಕ್ಕೆ ಕಾರಣವಾದ ಮಲಯಾಳಂ ಚಿತ್ರರಂಗದ ಮಹಿಳೆಯರಿಗೆ ಮೆಚ್ಚುಗೆ ಸೂಚಿಸುತ್ತೇವೆ. ತೆಲುಗಿನಲ್ಲಿಯೂ ವಾಯ್ಸ್ ಆಫ್ ವಿಮೆನ್ ತಂಡವನ್ನು 2019ರಲ್ಲಿ ಶುರುಮಾಡಲಾಗಿತ್ತು. ತೆಲಂಗಾಣ ಸರ್ಕಾರ ಕೂಡ ಹೇಮಾ ಸಮಿತಿ ರೀತಿಯ ವರದಿಯನ್ನು ಪ್ರಕಟಿಸಲಿ’ ಎಂದು ಈ ಪೋಸ್ಟ್ನಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: ‘ಸಮಂತಾ ನನ್ನ ಫ್ರೆಂಡ್’: ಹೊಸ ಕಥೆ ಹೇಳಿದ ವೈರಲ್ ಹುಡುಗಿ ಉರ್ಫಿ ಜಾವೇದ್
ಸಮಂತಾ ಮಾತ್ರವಲ್ಲದೇ ನಟಿ ಲಕ್ಷ್ಮಿ ಮಂಜು, ನಿರ್ದೇಶಕಿ ನಂದಿನಿ ರೆಡ್ಡಿ ಸೇರಿದಂತೆ ಹಲವರು ಇದೇ ಪೋಸ್ಟ್ ಹಂಚಿಕೊಂಡಿದ್ದಾರೆ. ಸಮಂತಾ ಅವರು ಧ್ವನಿಗೂಡಿಸಿದ ಬಳಿಕ ಈ ಅಭಿಯಾನಕ್ಕೆ ಇನ್ನಷ್ಟು ಬಲ ಬಂದಿದೆ. ಮಾಲಿವುಡ್ನಲ್ಲಿ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಒಂದು ವೇಳೆ ತೆಲುಗು ಚಿತ್ರರಂಗದಲ್ಲೂ ಇದೇ ರೀತಿ ವರದಿ ಪ್ರಕಟವಾದರೆ ಹಲವು ನಟರು, ನಿರ್ದೇಶಕರು ಮತ್ತು ನಿರ್ಮಾಪಕರ ಬಣ್ಣ ಬಯಲಾಗುವ ಸಾಧ್ಯತೆ ದಟ್ಟವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.