ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿಗಳಿಗೆ ರಾಜಾತಿಥ್ಯ ಪ್ರಕರಣ; ಸಿಸಿಬಿ ತನಿಖೆಗೆ ಸರ್ಕಾರ ಆದೇಶ
ಪರಪ್ಪನ ಅಗ್ರಹಾರದಲ್ಲಿ ರೌಡಿಶೀಟರ್ಗಳ ಜೊತೆ ದರ್ಶನ್ ಸಿಗರೇಟು ಸೇದುತ್ತಾ ಕಾಲ ಕಳೆದ ಫೋಟೋ ವೈರಲ್ ಆದ ಬೆನ್ನಲ್ಲೇ ಜೈಲಿನ ಅಕ್ರಮಗಳು ಒಂದೊಂದಾಗಿಯೇ ಬಹಿರಂಗ ಆದವು. ಜೈಲಿನೊಳಗೆ ಖೈದಿಗಳು ಮೊಬೈಲ್ ಬಳಕೆ ಮಾಡುತ್ತಿರುವುದು ಕೂಡ ಬೆಳಕಿಗೆ ಬಂತು. ಈ ಎಲ್ಲ ಅಕ್ರಮಗಳ ಬಗ್ಗೆ ತನಿಖೆ ಮಾಡಲು ಸಿಸಿಬಿ ಹಿರಿಯ ಅಧಿಕಾರಿಗಳಿಗೆ ಅದೇಶಿಸಲಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿಯಾಗಿ ಜೈಲು ಸೇರಿದ ದರ್ಶನ್ ಹಾಗೂ ಇತರರಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶಿಸಿದೆ. ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತಗೆ ಆದೇಶ ನೀಡಲಾಗಿದೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿಯನ್ನು ನೇರವಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ. ಆ ಮೂಲಕ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ವಿಚಾರಣಾಧೀನ ಖೈದಿ ಆಗಿರುವ ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿ ಇರುವ ರೌಡಿಶೀಟರ್ಗಳ ಜೊತೆ ಹಾಯಾಗಿ ಕುಳಿತು ಸಿಗರೇಟ್ ಸೇದುತ್ತಾ, ಕಾಫಿ ಕುಡಿದ ಫೋಟೋ ವೈರಲ್ ಆಯಿತು. ಅಲ್ಲದೇ, ಜೈಲಿನ ಹೊರಗೆ ಇರುವ ರೌಡಿಗಳ ಜೊತೆ ವಿಡಿಯೋ ಕಾಲ್ನಲ್ಲಿ ದರ್ಶನ್ ಮಾತನಾಡಿರುವುದು ಕೂಡ ಬಳಕಿಗೆ ಬಂದಿದೆ. ಆದ್ದರಿಂದ ಜೈಲಿನಲ್ಲಿ ಕಾನೂನಿನ ಉಲ್ಲಂಘನೆ ಆಗಿರುವುದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಜೈಲಿನ ಒಳಗೆ ಮೊಬೈಲ್ ಬಳಕೆ ಹಾಗೂ ಅಕ್ರಮ ಚಟುವಟಿಕೆಗಳ ಬಗ್ಗೆ ತನಿಖೆ ನಡೆಯಲಿದೆ. ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರು ನೀಡುವ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ದರ್ಶನ್ಗೆ ವಿಐಪಿ ಟ್ರೀಟ್ಮೆಂಟ್ ಸಿಕ್ಕಿರುವ ವಿಷಯ ಬಹಿರಂಗ ಆಗುತ್ತಿದ್ದಂತೆಯೇ ಅನೇಕರು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಟೀಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆಗೆ ಸರ್ಕಾರ ಆದೇಶಿಸಿದೆ.
ಇದನ್ನೂ ಓದಿ: ಆರೋಪಿ ದರ್ಶನ್ಗೆ ಬಳ್ಳಾರಿ ಜೈಲಿನಲ್ಲಿ ಸರ್ಜಿಕಲ್ ಚೇರ್ ನೀಡಲು ಸಿಕ್ತು ಅನುಮತಿ
ಪರಪ್ಪನ ಅಗ್ರಹಾರದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಕಾರಾಗೃಹ ಇಲಾಖೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರಿಗೂ ಇತ್ತೀಚೆಗೆ ನೋಟಿಸ್ ನೀಡಲಾಗಿದೆ. ಕಾರಾಗೃಹದಲ್ಲಿ ನಡೆದ ಅಕ್ರಮಗಳನ್ನು ತಡೆಯುವ ವಿಚಾರದಲ್ಲಿ ನೀವು ಕೈಗೊಂಡ ಕ್ರಮಗಳು ಏನು? ಜೈಲಿನಲ್ಲಿ ಈವರೆಗೆ ನಡೆದ ಅಕ್ರಮಗಳು ನಿಮ್ಮ ಗಮನಕ್ಕೆ ಬಂದಿರಲಿಲ್ಲವಾ? ನೀವು ಸಹ ಈ ಅಕ್ರಮದಲ್ಲಿ ಭಾಗಿ ಆಗಿದ್ದೀರಿ ಅಂತ ಯಾಕೆ ಭಾವಿಸಬಾರದು ಎಂಬಿತ್ಯಾದಿ ಪ್ರಶ್ನೆಗಳಿಗೆ ವಿವರವಾಗಿ ಉತ್ತರ ನೀಡುವಂತೆ ಮಾಲಿನಿ ಕೃಷ್ಣಮೂರ್ತಿ ಅವರಿಗೆ ನೋಟಿಸ್ ನೀಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.