Hina Khan: ಸ್ತನ ಕ್ಯಾನ್ಸರ್ ಮಧ್ಯೆಯೂ ಶೂಟಿಂಗ್​ಗೆ ಮರಳಿದ ಕಿರುತೆರೆ ನಟಿ

ಹಿನಾ ಖಾನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರಿಗೆ ಇತ್ತೀಚೆಗೆ ಸ್ತನ ಕ್ಯಾನ್ಸರ್ ಇರುವ ವಿಚಾರ ಗೊತ್ತಾಗಿದೆ. ಈ ರೀತಿ ಸ್ತನ ಕ್ಯಾನ್ಸರ್ ಇದ್ದಾಗ ಸಾಮಾನ್ಯವಾಗಿ ಎಲ್ಲರೂ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಆದರೆ, ಅವರು ಶೂಟಿಂಗ್​ಗೆ ಮರಳೋ ನಿರ್ಧಾರ ತೆಗೆದುಕೊಂಡಿದ್ದಾರೆ.

Hina Khan: ಸ್ತನ ಕ್ಯಾನ್ಸರ್ ಮಧ್ಯೆಯೂ ಶೂಟಿಂಗ್​ಗೆ ಮರಳಿದ ಕಿರುತೆರೆ ನಟಿ
ಹಿನಾ ಖಾನ್

Updated on: Jul 16, 2024 | 7:06 AM

ಅನೇಕ ನಟ/ನಟಿಯರು ಕೆಲಸದ ಬಗ್ಗೆ ವಿಶೇಷ ಪ್ರೀತಿ ಹೊಂದಿರುತ್ತಾರೆ. ಈ ಕಾರಣಕ್ಕೆ ಅನಾರೋಗ್ಯದ ಮಧ್ಯೆಯೂ ಶೂಟಿಂಗ್​ಗೆ ಬರುವ ಅನೇಕರಿದ್ದಾರೆ. ‘ಯೇ ರಿಷ್ತಾ ಕ್ಯಾ ಕೆಹ್ತೇ ಹೇ’ ಹಾಗೂ ‘ಕಸೌಟಿ ಜಿಂದಗಿಕಿ ಕೇ’ ಧಾರಾವಾಹಿಗಳ ನಟಿ ಹಿನಾ ಖಾನ್ ಅವರಿಗೆ ಇತ್ತೀಚೆಗೆ ಕ್ಯಾನ್ಸರ್ ಕಾಣಿಸಿಕೊಂಡಿದೆ. ಆದಾಗ್ಯೂ ಅವರು ಬಣ್ಣದ ಲೋಕದ ಕೆಲಸದಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ. ಸಂಪೂರ್ಣವಾಗಿ ಗುಣಮುಖರಾಗುವ ಮೊದಲೇ ಅವರು ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ಹಿನಾ ಖಾನ್ ಅವರು ತಮಗೆ ಸ್ತನ ಕ್ಯಾನ್ಸರ್ ಇರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಇದು ಮೂರನೇ ಹಂತ ತಲುಪಿದೆ ಎಂದು ಕೂಡ ಹೇಳಿದ್ದರು. ಈಗ ಅವರಿಗೆ ಇದರಿಂದ ಸಂಪೂರ್ಣವಾಗಿ ಗುಣ ಆಗುವ ಚಾಲೆಂಜ್ ಇದೆ. ಇದನ್ನು ಅವರು ಯಾವ ರೀತಿಯಲ್ಲಿ ತೆಗೆದುಕೊಳ್ಳಬಹುದು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡಿತ್ತು. ವಿಶೇಷ ಎಂದರೆ ಅವರು ಕ್ಯಾನ್ಸರ್ ಮಧ್ಯೆಯೂ ಬಣ್ಣದ ಲೋಕದಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ.

‘ಕ್ಯಾನ್ಸರ್ ಪತ್ತೆ ಆದ ಬಳಿಕ ನನ್ನ ಮೊದಲ ಕೆಲಸ. ನಾವು ಏನು ಹೇಳಬೇಕು ಎಂದುಕೊಂಡಿರುತ್ತೇವೋ ಅದನ್ನು ಮಾಡೋದು ನಿಜಕ್ಕೂ ಚಾಲೆಂಜ್. ಕೆಟ್ಟ ದಿನಗಳಲ್ಲಿ ನಿಮಗೆ ನೀವು ಬ್ರೇಕ್ ಕೊಟ್ಟುಕೊಳ್ಳಿ. ನೀವು ಅದಕ್ಕೆ ಅರ್ಹರು. ಒಳ್ಳೆಯ ದಿನಗಳಲ್ಲಿ ಬದುಕಲು ಮರೆಯಬೇಡಿ. ಒಳ್ಳೆಯ ದಿನಗಳು ಎಷ್ಟೇ ಕಡಿಮೆ ಇದ್ದರೂ ಆ ದಿನಗಳಿಗೆ ಇರುವ ಪ್ರಾಮುಖ್ಯತೆ ಹಾಗೆಯೇ ಇರುತ್ತದೆ. ಬದಲಾವಣೆಯನ್ನು ಒಪ್ಪಿ’ ಎಂದು ಅವರು ಕೋರಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಸ್ಪರ್ಧಿ ಹಿನಾ ಖಾನ್​ಗೆ 3ನೇ ಹಂತದ ಸ್ತನ ಕ್ಯಾನ್ಸರ್​; ಶಾಕಿಂಗ್​ ವಿಚಾರ ತಿಳಿಸಿದ ನಟಿ

ಕ್ಯಾನ್ಸರ್​ನಿಂದ ಹೊರ ಬರೋದು ದೊಡ್ಡ ಚಾಲೆಂಜ್. ಹಾಗಿದ್ದರೂ ಹಿನಾ ಖಾನ್ ಅವರು ಧೃತಿಗೆಡುತ್ತಿಲ್ಲ. ಅವರು ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.