ನಟಿ ಏಂಜಲೀನಾ ಜೋಲಿ (Angelina Jolie) ಅವರು ಜಗತ್ತಿನಾದ್ಯಂತ ಜನಪ್ರಿಯತೆ ಹೊಂದಿದ್ದಾರೆ. ಅವರ ನಟನೆ ಕಂಡ ಹಾಲಿವುಡ್ (Hollywood) ಸಿನಿಮಾ ಪ್ರೇಕ್ಷಕರು ವಾವ್ ಎಂದಿದ್ದಾರೆ. ಬಣ್ಣದ ಲೋಕದಲ್ಲಿ ಮೂರು ದಶಕಗಳ ಅನುಭವ ಅವರಿಗೆ ಇದೆ. ಈಗ ಏಂಜಲೀನಾ ಜೋಲಿ ಅವರು ತಮ್ಮೆಲ್ಲ ಸಿನಿಮಾ ಕೆಲಸಗಳಿಗೆ ಬಿಡುವು ನೀಡಿ, ನೇರವಾಗಿ ಪಾಕಿಸ್ತಾನಕ್ಕೆ (Pakistan) ಬಂದಿದ್ದಾರೆ. ಪಾಕ್ ಪ್ರಜೆಗಳನ್ನು ಭೇಟಿ ಮಾಡಿ, ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಪಾಕಿಸ್ತಾನದ ಜನರನ್ನು ಭೇಟಿ ಮಾಡಿರುವ ಏಂಜಲೀನಾ ಜೋಲಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನಟಿಯ ಈ ಕಾರ್ಯಕ್ಕೆ ನೆಟ್ಟಿಗರಿಂದ ಬಗೆಬಗೆಯ ಅಭಿಪ್ರಾಯ ವ್ಯಕ್ತವಾಗಿದೆ.
ಅಷ್ಟಕ್ಕೂ ಏಂಜಲೀನಾ ಜೋಲಿ ಅವರು ಸಿನಿಮಾ ಕೆಲಸಗಳನ್ನು ಬದಿಗಿಟ್ಟು ಪಾಕಿಸ್ತಾನಕ್ಕೆ ಬಂದಿದ್ದು ಯಾಕೆ? ಮಾನವೀಯತೆ ಕಾರಣದಿಂದ. ಹೌದು, ಈ ವರ್ಷ ಪಾಕ್ನಲ್ಲಿ ಧಾರಾಕಾರ ಮಳೆ ಸುರಿದ ಕಾರಣ ಅಲ್ಲಿನ ಜನಜೀವನ ಅಸ್ತವ್ಯಸ್ತ ಆಗಿದೆ. ಎಷ್ಟೋ ಜನರು ಮನೆ ಕಳೆದುಕೊಂಡಿದ್ದಾರೆ. ಅನೇಕರ ಜೀವಕ್ಕೆ ಹಾನಿ ಆಗಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಕಾಯಿಲೆಗಳು ಹರಡಿವೆ. ಆದ್ದರಿಂದ ಸಂಕಷ್ಟದಲ್ಲಿ ಇರುವ ಪಾಕ್ ಪ್ರಜೆಗಳಿಗೆ ನೆರವು ನೀಡಲು ಏಂಜಲೀನಾ ಜೋಲಿ ಅವರು ಅಮೆರಿಕದಿಂದ ಪಾಕಿಸ್ತಾನಕ್ಕೆ ಬಂದಿದ್ದಾರೆ.
ಜಗತ್ತಿನಾದ್ಯಂತ ಇರುವ ನಿರಾಶ್ರಿತರ ಸಹಾಯಕ್ಕಾಗಿ ವಿಶ್ವಸಂಸ್ಥೆ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಅದರ ಪ್ರತಿನಿಧಿಯಾಗಿ ಏಂಜಲೀನಾ ಜೋಲಿ ಅವರು ಕೆಲಸ ಮಾಡುತ್ತಿದ್ದಾರೆ. 2011ರಿಂದಲೂ ಅವರು ಈ ಕಾರ್ಯ ಮಾಡುತ್ತಿದ್ದಾರೆ. ಅದರ ಅಂಗವಾಗಿ ಅವರೀಗ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಈ ಭೇಟಿಯ ಸಂದರ್ಭದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.
ಪ್ರವಾಹ ಪೀಡಿತ ಪಾಕ್ ಪ್ರದೇಶಗಳಿಗೆ ಭೇಟಿ ನೀಡಿರುವ ಏಂಜಲೀನಾ ಜೋಲಿ ಅವರು ಅಲ್ಲಿನ ಜನರ ಜೊತೆ ಮಾತುಕತೆ ನಡೆಸಿದ್ದಾರೆ. ಪ್ರವಾಹ ಸಂತ್ರಸ್ತರ ಸ್ಥಿತಿಗತಿ ಹೇಗಿದೆ ಎಂಬುದನ್ನು ಪರಿಶೀಲಿಸಿದ್ದಾರೆ. ಅವರ ಈ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ‘ಹೃದಯ ಶ್ರೀಮಂತ ಮಹಿಳೆ’, ‘ನಿಮ್ಮ ಒಳ್ಳೆಯತನಕ್ಕೆ ಧನ್ಯವಾದ’ ಎಂದೆಲ್ಲ ಜನರು ಕಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ, ಏಂಜಲೀನಾ ಜೋಲಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು ಇದೇ ಮೊದಲೇನಲ್ಲ. 2005ರಲ್ಲಿ ತೀವ್ರ ಭೂಕಂಪ ಆಗಿದ್ದಾಗ ಹಾಗೂ 2010ರಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆದಾಗ ಪಾಕ್ಗೆ ಬಂದು ಅವರು ನೆರವು ನೀಡಿದ್ದರು. ಮಾನವೀಯ ಕಾರ್ಯಕ್ಕಾಗಿ ಅವರು ಅನೇಕ ಸಂಸ್ಥೆಗಳ ಜೊತೆ ಕೈ ಜೋಡಿಸಿದ್ದಾರೆ. ಅವರ ಕೆಲಸವನ್ನು ಗುರುತಿಸಿ ಹಲವು ಪ್ರಶಸ್ತಿಗಳು ಬಂದಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:30 am, Wed, 21 September 22