ಸಿನಿಮಾಗಳ ಟಿಕೆಟ್ ಬೆಲೆ ವಿಚಾರದಲ್ಲಿ ಚರ್ಚೆ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಾರದೇ ಇರಲು ದುಬಾರಿ ಟಿಕೆಟ್ ಬೆಲೆಯೇ ಕಾರಣ ಎಂಬ ವಾದ ಇದೆ. ಹಾಗಾಗಿ ಇತ್ತೀಚಿನ ಕೆಲವು ಸಿನಿಮಾಗಳ ಟಿಕೆಟ್ ಬೆಲೆ ತಗ್ಗಿಸುವ ಪ್ರಯೋಗ ನಡೆದಿತ್ತು. ಆದರೆ ಬಹುನಿರೀಕ್ಷಿತ ‘ಅವತಾರ್ 2’ (Avatar The Way of Water) ಚಿತ್ರ ಬೇರೆಯದೇ ಮಾರ್ಗ ಅನುಸರಿಸುತ್ತಿದೆ. ಈ ಸಿನಿಮಾದ ಟಿಕೆಟ್ ಬೆಲೆ ಮುಗಿಲು ಮುಟ್ಟಿದೆ. ಸಾಮಾನ್ಯಾವಾಗಿ 300 ಅಥವಾ 350 ರೂಪಾಯಿ ಇರುತ್ತಿದ್ದ ಸ್ಕ್ರೀನ್ಗಳಲ್ಲಿ ಈ ಸಿನಿಮಾದ ಬೆಲೆ ಸಾವಿರ ರೂಪಾಯಿ ದಾಟಿದೆ. ಕೆಲವು ಕಡೆಗಳಲ್ಲಿ 1,650 ರೂಪಾಯಿ ತನಕವೂ ಟಿಕೆಟ್ (Avatar 2 Movie Ticket) ಬೆಲೆ ಇದೆ. ಹಾಗಿದ್ದರೂ ಕೂಡ ಪ್ರೇಕ್ಷಕರು ಮುಗಿಬಿದ್ದು ಈ ಹಾಲಿವುಡ್ (Hollywood) ಚಿತ್ರದ ಟಿಕೆಟ್ ಬುಕ್ ಮಾಡುತ್ತಿದ್ದಾರೆ ಎಂಬುದು ವಿಶೇಷ.
ಡಿಸೆಂಬರ್ 16ರಂದು ‘ಅವತಾರ್ 2’ ಚಿತ್ರ ಬಿಡುಗಡೆ ಆಗಲಿದೆ. ಇನ್ನೂ 24 ದಿನಗಳು ಬಾಕಿ ಇರುವಾಗಲೇ ಚಿತ್ರದ ಬುಕಿಂಗ್ ಓಪನ್ ಮಾಡಲಾಗಿದೆ. 3ಡಿ, ಐಮ್ಯಾಕ್ಸ್ 3ಡಿ, 4ಡಿಎಕ್ಸ್ ಮುಂತಾದ ವರ್ಷನ್ಗಳಲ್ಲಿ ಈ ಚಿತ್ರ ತೆರೆಕಾಣಲಿದೆ. ಜಗತ್ತಿನಾದ್ಯಂತ ಇರುವ ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾದಿದ್ದಾರೆ. ಬೆಂಗಳೂರಿನಲ್ಲೂ ಮೊದಲ ದಿನ ಭರ್ಜರಿ ಪ್ರದರ್ಶನ ಕಾಣಲಿದೆ ಎಂಬುದಕ್ಕೆ ಸೂಚನೆ ಸಿಕ್ಕಿದೆ.
ಬೆಂಗಳೂರಿನ ಪ್ರಮುಖ ಮಲ್ಟಿಪ್ಲೆಕ್ಸ್ಗಳಲ್ಲಿ ಈಗಾಗಲೇ ‘ದಿ ಅವತಾರ್ 2’ ಚಿತ್ರದ ಟಿಕೆಟ್ ಬುಕಿಂಗ್ಗೆ ಅವಕಾಶ ನೀಡಲಾಗಿದೆ. ಟಿಕೆಟ್ ಬೆಲೆ 800, 1000, 1500 ಮತ್ತು ಕೆಲವು ಕೆಲವು ಕಡೆಗಳಲ್ಲಿ 1650 ರೂಪಾಯಿ ಇದ್ದರೂ ಕೂಡ ಜನರು ಬುಕ್ ಮಾಡುತ್ತಿದ್ದಾರೆ. ಇನ್ನೂ ಅನೇಕ ಕಡೆಗಳಲ್ಲಿ ಬುಕಿಂಗ್ ಓಪನ್ ಆಗುವುದು ಬಾಕಿ ಇದೆ. ಸಿಂಗಲ್ ಸ್ಕ್ರೀನ್ಗಳಲ್ಲಿ ಎಷ್ಟು ದರ ಇರಲಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಜೇಮ್ಸ್ ಕ್ಯಾಮೆರಾನ್ ಅವರು ‘ಅವತಾರ್ 2’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅವರ ಮೇಲೆ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಭರವಸೆ ಇದೆ. 13 ವರ್ಷಗಳ ಹಿಂದೆ ‘ಅವತಾರ್’ ಚಿತ್ರ ತೆರೆಕಂಡು ದಾಖಲೆ ಬರೆದಿತ್ತು. ಆ ದಾಖಲೆಯನ್ನು ‘ಅವತಾರ್ 2’ ಮುರಿಯಲಿದೆಯೇ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ. ಕನ್ನಡಕ್ಕೂ ಡಬ್ ಆಗಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ಚಿತ್ರದ ಝಲಕ್ ಹೇಗಿರಲಿದೆ ಎಂಬುದನ್ನು ತಿಳಿಸಲು ಟ್ರೇಲರ್ ಬಿಡುಗಡೆ ಆಗಿದೆ. ಬೇರೊಂದು ಲೋಕವನ್ನೇ ಪರಿಚಯಿಸುವಂತಹ ದೃಶ್ಯಗಳು ಟ್ರೇಲರ್ನಲ್ಲಿ ಹೈಲೈಟ್ ಆಗಿವೆ. ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಈ ಚಿತ್ರಕ್ಕೆ ಬಳಕೆ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.