‘ದಿ ಅಪ್ರೆಂಟಿಸ್’ ಸಿನಿಮಾದಲ್ಲಿ ಡೋನಾಲ್ಡ್ ಟ್ರಂಪ್ ಜೀವನದ ಕಥೆ; ಭಾರಿ ವಿವಾದ

|

Updated on: Nov 08, 2024 | 9:51 PM

‘ದಿ ಅಪ್ರೆಂಟಿಸ್’ ಚಿತ್ರವು ಡೋನಾಲ್ಡ್ ಟ್ರಂಪ್ ಅವರ ಜೀವನದ ವಿವರಗಳನ್ನು ಒಳಗೊಂಡಿದೆ. ಈ ಸಿನಿಮಾ ಟ್ರಂಪ್ ಅವರ ಯೌವನದಿಂದ ಆರಂಭಿಸಿ ಅವರ ರಾಜಕೀಯ ಏರಿಕೆಯವರೆಗೆ ವಿವರಿಸುತ್ತದೆ. ಆದರೆ, ಟ್ರಂಪ್ ಅವರು ಈ ಸಿನಿಮಾವನ್ನು ತೀವ್ರವಾಗಿ ಟೀಕಿಸಿದ್ದು, ಅದರ ವಿವಾದಾತ್ಮಕ ಅಂಶಗಳಿಂದಾಗಿ ಅಮೆರಿಕದಲ್ಲಿ ಬಿಡುಗಡೆ ಮಾಡುವುದು ಕಷ್ಟವಾಯಿತು. ಆದಾಗ್ಯೂ, ಅಂತಾರಾಷ್ಟ್ರೀಯವಾಗಿ ಉತ್ತಮ ಪ್ರತಿಕ್ರಿಯೆಯನ್ನು ಈ ಚಿತ್ರ ಪಡೆದುಕೊಂಡಿದೆ.

‘ದಿ ಅಪ್ರೆಂಟಿಸ್’ ಸಿನಿಮಾದಲ್ಲಿ ಡೋನಾಲ್ಡ್ ಟ್ರಂಪ್ ಜೀವನದ ಕಥೆ; ಭಾರಿ ವಿವಾದ
‘ದಿ ಅಪ್ರೆಂಟಿಸ್’ ಸಿನಿಮಾ ಪೋಸ್ಟರ್​
Follow us on

ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಡೋನಾಲ್ಡ್​ ಟ್ರಂಪ್​ ಅವರಿಗೆ ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ. ಅವರ ಜೀವನದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಅನೇಕರಿಗೆ ಇದೆ. ಅಂಥವರ ಮುಂದಿರುವ ಮೊದಲ ಆಯ್ಕೆಯೇ ‘ದಿ ಅಪ್ರೆಂಟಿಸ್’ ಸಿನಿಮಾ. ಹೌದು, ಈ ಸಿನಿಮಾದಲ್ಲಿ ಡೋನಾಲ್ಡ್ ಟ್ರಂಪ್ ಅವರ ಬದುಕಿನ ಖಾಸಗಿ ವಿವರಗಳು ಇವೆ. ಈಗಾಗಲೇ ಈ ಸಿನಿಮಾವನ್ನು ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಸ್ವತಃ ಡೋನಲ್ಡ್ ಟ್ರಂಪ್ ಅವರಿಗೆ ಈ ಸಿನಿಮಾ ಕಿಂಚಿತ್ತೂ ಇಷ್ಟವಾಗಿಲ್ಲ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ದಿ ಅಪ್ರೆಂಟಿಸ್’ ಸಿನಿಮಾಗೆ ಅಲಿ ಅಬ್ಬಾಸಿ ನಿರ್ದೇಶನ ಮಾಡಿದ್ದಾರೆ. ಅಮೆರಿಕದಲ್ಲಿ ಡೋನಾಲ್ಡ್ ಟ್ರಂಪ್ ಬೆಳೆದಿದ್ದು ಹೇಗೆ ಎಂಬುದನ್ನು ಈ ಸಿನಿಮಾದಲ್ಲಿ ವಿವರಿಸಲಾಗಿದೆ. ಟ್ರಂಪ್ ಅವರ ಯೌವನದ ದಿನಗಳಿಂದ ಹಿಡಿದು ನಂತರದ ಕಾಲಘಟ್ಟದ ವಿವರಗಳನ್ನು ಈ ಸಿನಿಮಾ ತೆರೆದಿಡುತ್ತದೆ. ಅವರ ವೈಯಕ್ತಿಕ ವಿಷಯಗಳನ್ನು ಕೂಡ ಎಳೆಎಳೆಯಾಗಿ ಬಿತ್ತರಿಸುತ್ತದೆ. ಆ ಕಾರಣದಿಂದಲೇ ಡೋನಾಲ್ಡ್ ಟ್ರಂಪ್ ಅವರಿಗೆ ಈ ಸಿನಿಮಾ ಮೇಲೆ ಎಲ್ಲಿಲ್ಲದ ಕೋಪ.

ಕೆನಡಾ, ಡೆನ್ಮಾರ್ಕ್, ಐರ್ಲ್ಯಾಂಡ್ ಹಾಗೂ ಅಮೆರಿಕದ ನಿರ್ಮಾಣ ಸಂಸ್ಥೆಗಳು ಒಟ್ಟಾಗಿ ‘ದಿ ಅಪ್ರೆಂಟಿಸ್’ ಸಿನಿಮಾ ಸಿನಿಮಾವನ್ನು ನಿರ್ಮಾಣ ಮಾಡಿವೆ. ಈ ವರ್ಷ ಮೇ 20ರಂದು ಈ ಸಿನಿಮಾ ಕಾನ್​ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತು. ಅಲ್ಲಿ ಸಿನಿಮಾ ನೋಡಿದ ಬಹುತೇಕರಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿತು. ಆದರೆ ಅಮೆರಿಕದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವುದು ಕಷ್ಟವಾಯಿತು.

ಡೋನಾಲ್ಡ್ ಟ್ರಂಪ್ ಜೀವನದ ವಿವಾದಾತ್ಮಕ ಅಂಶಗಳು ‘ದಿ ಅಪ್ರೆಂಟಿಸ್’ ಸಿನಿಮಾದಲ್ಲಿ ಇವೆ. ಆದ್ದರಿಂದ ಈ ಚಿತ್ರವನ್ನು ಅಮೆರಿಕದಲ್ಲಿ ಬಿಡುಗಡೆ ಮಾಡಲು ಆರಂಭದಲ್ಲಿ ಯಾವುದೇ ವಿತರಕರು ಮುಂದೆ ಬರಲಿಲ್ಲ. ಈ ಸಿನಿಮಾದ ಬಿಡುಗಡೆಯನ್ನು ತಡೆ ಹಿಡಿಯಲು ಡೋನಾಲ್ಡ್ ಟ್ರಂಪ್ ಕೇಸ್​ ಕೂಡ ಹಾಕಿದ್ದರು. ಕೊನೆಗೆ Briarcliff Entertainment ಸಂಸ್ಥೆಯು ಈ ಸಿನಿಮಾವನ್ನು ಬಿಡುಗಡೆ ಮಾಡಿತು. ಅಕ್ಟೋಬರ್​ 11ರಂದು ಸಿನಿಮಾ ತೆರೆಕಂಡಿತು.

ತೆಲಂಗಾಣದ ದೇವಾಲಯದಲ್ಲಿ ಅಭಿಮಾನಿಗಳಿಂದ ಡೊನಾಲ್ಡ್​ ಟ್ರಂಪ್​ಗೆ ಹಾಲಿನ ಅಭಿಷೇಕ!

‘ಈ ಸಿನಿಮಾ ನನ್ನ ಮಾನಹಾನಿ ಮಾಡುವ ರೀತಿಯಲ್ಲಿ ಇದೆ. ರಾಜಕೀಯದ ಉದ್ದೇಶದಿಂದ ಮಾಡಿರುವ ಕೆಟ್ಟ ಸಿನಿಮಾ. ನನ್ನ ಅಧ್ಯಕೀಯ ಚುನಾವಣೆಯ ಮೇಲೆ ಪರಿಣಾಮ ಬೀರುವ ಉದ್ದೇಶ ಈ ಸಿನಿಮಾಗಿದೆ’ ಎಂದು ಡೋನಾಲ್ಡ್ ಟ್ರಂಪ್ ಅವರು ಟೀಕಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.