ಹಾಲಿವುಡ್ನ (Hollywood) ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿರುವ ನಟ ಕ್ರಿಸ್ಟಿಯಾನ್ ಓಲಿವರ್ ವಿಮಾನ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಪ್ರವಾಸಕ್ಕೆಂದು ತಮ್ಮ ಇಬ್ಬರು ಹೆಣ್ಣು ಮಕ್ಕಳೊಡನೆ ತೆರಳಿದ್ದ ವೇಳೆ ಈ ಅಪಘಾತ ನಡೆದಿದ್ದು ಅಪಘಾತದಲ್ಲಿ ಕ್ರಿಸ್ಟಿಯಾನ್ ಓಲಿವರ್ ಜೊತೆಗೆ ಮಕ್ಕಳಾದ 12 ವರ್ಷದ ಅನ್ನಿಕ್ ಹಾಗೂ 10 ವರ್ಷದ ಮ್ಯಾಡಿಟಾ ಬಾಲಕಿಯರು ಸಹ ನಿಧನ ಹೊಂದಿದ್ದಾರೆ.
ಪತ್ನಿಯಿಂದ ಕೆಲ ವರ್ಷದ ಹಿಂದೆ ವಿಚ್ಛೇದನ ಪಡೆದಿದ್ದ ನಟ ಕ್ರಿಸ್ಟಿಯಾನ್ ಓಲಿವರ್ ಹೊಸ ವರ್ಷಕ್ಕೆ ತಮ್ಮಿಬ್ಬರು ಮಕ್ಕಳನ್ನು ಕರೆದುಕೊಂಡು ಕೆರೆಬಿಯನ್ನ ದ್ವೀಪಗಳಿಗೆ ಪ್ರವಾಸಕ್ಕೆ ತೆರಳಿದ್ದರು. ಗುರುವಾರ ಸಿಂಗಲ್ ಎಂಜಿನ್ ವಿಮಾನದಲ್ಲಿ ಕ್ರಿಸ್ಟಿಯಾನ್ ಓಲಿವರ್ ತಮ್ಮ ಮಕ್ಕಳೊಡನೆ ಪೆಟಿಟ್ ನೇವೀಸ್ ದ್ವೀಪದಲ್ಲಿ ಹಾರಾಟ ನಡೆಸಿದ್ದರು.
ಸಮುದ್ರದ ಮೇಲೆ ಹಾರಾಟ ನಡೆಸುತ್ತಿದ್ದ ವಿಮಾನ ತಾಂತ್ರಿಕ ದೋಷದಿಂದಾಗಿ ಬೆಂಕಿ ಹೊತ್ತಿಕೊಂಡು ಕೆರೆಬಿಯನ್ ಸಮುದ್ರಕ್ಕೆ ಬಿದ್ದಿದೆ. ಇದರಿಂದಾಗಿ ಪೈಲೆಟ್ ಸೇರಿ ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ನೌಕಾದಳದ ಸಹಾಯದ ಮೂಲಕ ಮೃತರ ದೇಹವನ್ನು ಹೊರತೆಗೆದಿದ್ದಾರೆ.
ಇದನ್ನೂ ಓದಿ:ಹಾಲಿವುಡ್ ನಿರ್ದೇಶಕರಿಗೂ ಶಾರುಖ್ ಖಾನ್ ಜೊತೆ ಕೆಲಸ ಮಾಡುವಾಸೆ, ಎಸ್ಆರ್ಕೆ ಲೆಜೆಂಡ್ ಎಂದ ನಿರ್ದೇಶಕಿ
ಘಟನೆ ನೋಡಿದ ಕೆಲವು ಸ್ಥಳೀಯರು ಹೇಳುವಂತೆ, ಆ ವಿಮಾನದಲ್ಲಿ ಮೊದಲೇ ತಾಂತ್ರಿಕ ದೋಷ ಇದ್ದಂತಿತ್ತು. ಆ ವಿಮಾನವು ಹಾರಲು ಆರಂಭಿಸುವಾಗಲೇ ಕೆಟ್ಟ ಶಬ್ದ ಹೊಮ್ಮಿಸುತ್ತಿತ್ತು, ಮೇಲೆ ಹಾರಲು ಬಹಳ ಕಷ್ಟಪಡುತ್ತಿತ್ತು, ಕರ್ಕಶ ಧ್ವನಿ ಎಂಜಿನ್ನಿಂದ ಹೊರಬರುತ್ತಿತ್ತು ಎಂದಿದ್ದಾರೆ.
ಕ್ರಿಸ್ಟಿಯಾನ್ ಓಲಿವರ್ 1994ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ಮೊದಲ ಸಿನಿಮಾ ‘ಸೇವ್ಡ್ ಬೈ ದಿ ಬುಲ್’. ಜನಪ್ರಿಯ ಸಿನಿಮಾಗಳಾದ ‘ದಿ ಬೇಬಿ ಸಿಟ್ಟರ್ಸ್ ಕ್ಲಬ್’, ‘ದಿ ಗುಡ್ ಜರ್ಮನ್’, ‘ಸ್ಪೀಡ್ ರೆಸರ್ಸ್’, ‘ಟ್ರಿಬ್ಯುಟ್’, ‘ದಿ ತ್ರೀ ಮಸ್ಕಟೀರ್ಸ್’, ‘ನಿಂಜಾ ಅಪಾಕೊಲೆಪ್ಸಿ’, ‘ಹಂಟರ್ಸ್’ ಹಾಗೂ 2023ರಲ್ಲಿ ಬಡುಗಡೆ ಆದ ‘ಇಂಡಿಯಾನಾ ಜೋನ್ಸ್’ ಸಿನಿಮಾಗಳಲ್ಲಿ ಕ್ರಿಸ್ಟಿಯಾನ್ ಓಲಿವರ್ ನಟಿಸಿದ್ದಾರೆ. ಕ್ರಿಸ್ಟಿಯಾನ್ ಅಗಲಿಕೆಗೆ ಹಲವು ಹಾಲಿವಡ್ ನಟ, ನಿರ್ದೇಶಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ