2022ರ ಆರಂಭದಲ್ಲೇ ಸಿನಿಮಾ ಜಗತ್ತಿಗೆ ಕಹಿ ಸುದ್ದಿ ಕೇಳಿಬಂದಿದೆ. ಆಸ್ಕರ್ ಪ್ರಶಸ್ತಿ ಪುರಸ್ಕೃತ ಲೆಜೆಂಡರಿ ನಿರ್ದೇಶಕ ಪೀಟರ್ ಬಾಗ್ಡಾನವಿಚ್ (Peter Bogdanovich) ಅವರು ನಿಧನರಾಗಿದ್ದಾರೆ. ಗುರುವಾರ (ಜ.6) ಇಹಲೋಕ ತ್ಯಜಿಸಿದ ಅವರಿಗೆ 82 ವರ್ಷ ವಯಸ್ಸಾಗಿತ್ತು. ಹಲವಾರು ಜನಪ್ರಿಯ ಹಾಲಿವುಡ್ ಸಿನಿಮಾಗಳಿಗೆ (Hollywood Movies) ನಿರ್ದೇಶನ ಮಾಡಿದ್ದ ಪೀಟರ್ ಬಾಗ್ಡಾನವಿಚ್ ಅವರು ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರು. ಅನೇಕ ನಿರ್ದೇಶಕರಿಗೆ ಅವರು ಸ್ಫೂರ್ತಿ ಆಗಿದ್ದರು. ಸಿನಿಮಾ ನಿರ್ದೇಶಕ ಆಗುವುದಕ್ಕೂ ಮುನ್ನ ಅವರು ವಿಮರ್ಶಕನಾಗಿ ಫೇಮಸ್ ಆಗಿದ್ದರು. ಗೋಲ್ಡನ್ ಗ್ಲೋಬ್, ಆಸ್ಕರ್, ಗ್ರ್ಯಾಮಿ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಅವರು ಪಡೆದುಕೊಂಡಿದ್ದರು.
ಪೀಟರ್ ಬಾಗ್ಡಾನವಿಚ್ ನಿಧನಕ್ಕೆ ವಿಶ್ವಾದ್ಯಂತ ಸಿನಿಮಾ ಜಗತ್ತಿನ ಅನೇಕರು ಸಂತಾಪ ಸೂಚಿಸಿದ್ದಾರೆ. ದಿಗ್ಗಜ ನಿರ್ದೇಶಕನ ಅಗಲಿಕೆಗೆ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. ಮೊದಲು ವಿಮರ್ಶಕನಾಗಿದ್ದ ಪೀಟರ್ ಬಾಗ್ಡಾನವಿಚ್ ಅವರು ಸಿನಿಮಾ ನಿರ್ದೇಶನದಲ್ಲಿ ಆಸಕ್ತಿ ಬೆಳೆಸಿಕೊಂಡ ಬಳಿಕ ಹಾಲಿವುಡ್ಗೆ ಕಾಲಿಟ್ಟರು. 1968ರಲ್ಲಿ ಅವರು ನಿರ್ದೇಶಕನಾಗಿ ಕೆಲಸ ಆರಂಭಿಸಿದರು. 1971ರಲ್ಲಿ ಅವರು ನಿರ್ದೇಶಿಸಿದ ‘ದಿ ಲಾಸ್ಟ್ ಪಿಕ್ಚರ್ ಶೋ’ ಸಿನಿಮಾ ಸೂಪರ್ ಹಿಟ್ ಆಗಿತ್ತು. 8 ವಿಭಾಗಳಲ್ಲಿ ಆಸ್ಕರ್ ಪ್ರಶಸ್ತಿಗೆ ಆ ಚಿತ್ರ ನಾಮಿನೇಟ್ ಆಗಿತ್ತು.
ನಟನಾಗಿಯೂ ಪೀಟರ್ ಬಾಗ್ಡಾನವಿಚ್ ಫೇಮಸ್ ಆಗಿದ್ದರು. ಅನೇಕ ಸಾಕ್ಷ್ಯಚಿತ್ರಗಳನ್ನೂ ಅವರು ನಿರ್ದೇಶಿಸಿದ್ದರು. ಸಿನಿಮಾ ಸಂಬಂಧಿತ ಹಲವು ಕೃತಿಗಳನ್ನು ಕೂಡ ಅವರ ರಚಿಸಿದ್ದರು. ಪೀಟರ್ ಬಾಗ್ಡಾನವಿಚ್ ಕೆಲಸಗಳು ವಿಶ್ವದ ಅನೇಕ ನಿರ್ದೇಶಕರ ಮೇಲೆ ಪ್ರಭಾವ ಬೀರಿವೆ.
ಪೀಟರ್ ಬಾಗ್ಡಾನವಿಚ್ ನಿರ್ದೇಶನದ ಪ್ರಮುಖ ಸಿನಿಮಾಗಳು:
ದಿ ಲಾಸ್ಟ್ ಪಿಕ್ಚರ್ ಶೋ -1971
ವಾಟ್ಸಪ್ ಡಾಕ್ – 1972
ಪೇಪರ್ ಮೂನ್ – 1973
ಸೇಂಟ್ ಜಾಕ್ – 1979
ದೇ ಆಲ್ ಲಾಫ್ಡ್ – 1981
ಮಾಸ್ಕ್ – 1985
ಮುಂತಾದವು
ಇದನ್ನೂ ಓದಿ:
ಸಾವಿರಾರು ಗೀತೆ ಹಾಡಿದ್ದ ಖ್ಯಾತ ಗಾಯಕ ಮಾಣಿಕ ವಿನಾಯಗಂ ನಿಧನ; ಕಂಬನಿ ಮಿಡಿದ ಚಿತ್ರರಂಗ
ಹಾಲಿವುಡ್ ಆಫರ್ ಬಗ್ಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದ ‘ಆರ್ಆರ್ಆರ್’ ನಿರ್ದೇಶಕ ರಾಜಮೌಳಿ
Published On - 10:40 am, Fri, 7 January 22