ಹಾಲಿವುಡ್​ ಆಫರ್​ ಬಗ್ಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದ ‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ

ಹಾಲಿವುಡ್​ ಆಫರ್​ ಬಗ್ಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದ ‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ
ರಾಜಮೌಳಿ

ರಾಜಮೌಳಿ ನಿರ್ದೇಶನದ ಸಿನಿಮಾಗಳು ಹಾಲಿವುಡ್​ ಚಿತ್ರಗಳ ರೀತಿಯೇ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ಮಾಡುತ್ತವೆ. ಹಾಲಿವುಡ್​ ಮಂದಿ ಕೂಡ ರಾಜಮೌಳಿ ಅವರನ್ನು ಬೆರಗಿನಿಂದ ನೋಡುತ್ತಾರೆ.

TV9kannada Web Team

| Edited By: Madan Kumar

Dec 11, 2021 | 8:30 AM

‘ಆರ್​ಆರ್​ಆರ್​’ (RRR Movie) ಸಿನಿಮಾದ  ನಿರ್ದೇಶಕ ರಾಜಮೌಳಿ (SS Rajamouli) ಅವರ ಹವಾ ಏನು ಎಂಬುದು ಎಲ್ಲರಿಗೂ ಗೊತ್ತು. ಈಗಾಗಲೇ ಅವರು ‘ಮಗಧೀರ’, ‘ಬಾಹುಬಲಿ’, ‘ಈಗ’ ಮುಂತಾದ ಸಿನಿಮಾಗಳ ಮೂಲಕ ತಮ್ಮ ಸಾಮರ್ಥ್ಯ ಏನು ಎಂಬುದು ಸಾಬೀತು ಮಾಡಿದ್ದಾರೆ. ಅವರ ಪ್ರತಿ ಹೊಸ ಸಿನಿಮಾದಲ್ಲಿಯೂ ತಾಂತ್ರಿಕ ಶ್ರೀಮಂತಿಕೆ ಹೆಚ್ಚುತ್ತಲೇ ಇದೆ. ಇಡೀ ವಿಶ್ವವೇ ತಿರುಗಿ ನೋಡುವಂತಹ ಸಿನಿಮಾಗಳನ್ನು (SS Rajamouli Movies) ಅವರು ನಿರ್ದೇಶಿಸುತ್ತಾರೆ. ಹಾಲಿವುಡ್​ (Hollywood) ಮಂದಿ ಕೂಡ ರಾಜಮೌಳಿ ಅವರನ್ನು ಬೆರಗಿನಿಂದ ನೋಡುತ್ತಾರೆ. ಇಷ್ಟೆಲ್ಲ ಪ್ರತಿಭಾವಂತನಾಗಿರುವ ರಾಜಮೌಳಿ, ಹಾಲಿವುಡ್​ ಸಿನಿಮಾ ಮಾಡುವುದು ಯಾವಾಗ? ಹಾಲಿವುಡ್​ ನಿರ್ಮಾಪಕರಿಂದ ಅವರಿಗೆ ಆಫರ್​ ಬಂದಿದೆಯೇ? ಈ ಕೌತುಕದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.

‘ಆರ್​ಆರ್​ಆರ್​’ ಸಿನಿಮಾದ ಪ್ರಚಾರಕ್ಕಾಗಿ ಇತ್ತೀಚೆಗೆ ರಾಜಮೌಳಿ ಮತ್ತು ಅವರ ತಂಡದವರು ಮುಂಬೈಗೆ ತೆರಳಿದ್ದರು. ಈ ವೇಳೆ ಅವರಿಗೆ ಮಾಧ್ಯಮದವರಿಂದ ಹಾಲಿವುಡ್​ ಕುರಿತ ಪ್ರಶ್ನೆ ಎದುರಾಯಿತು. ಅದಕ್ಕೆ ರಾಜಮೌಳಿ ನೀಡಿದ ಉತ್ತರ ಅಚ್ಚರಿ ಮೂಡಿಸಿತು. ಈವರೆಗೂ ರಾಜಮೌಳಿ ಅವರಿಗೆ ಹಾಲಿವುಡ್​ನಿಂದ ಯಾವುದೇ ಆಫರ್​ ಬಂದಿಲ್ಲವಂತೆ! ಅದನ್ನು ಅವರು ನೇರವಾಗಿಯೇ ಒಪ್ಪಿಕೊಂಡರು.

ರಾಜಮೌಳಿ ನಿರ್ದೇಶನದ ಸಿನಿಮಾಗಳು ಹಾಲಿವುಡ್​ ಚಿತ್ರಗಳ ರೀತಿಯೇ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ಮಾಡುತ್ತವೆ. ಹೀಗಿರುವಾಗ ಭವಿಷ್ಯದಲ್ಲಿ ಅವರಿಗೆ ಹಾಲಿವುಡ್​ ನಿರ್ಮಾಣ ಸಂಸ್ಥೆಗಳಿಂದ ಆಫರ್​ ಬರಬಹುದು. ಒಂದು ವೇಳೆ ಅಂತಹ ಅವಕಾಶ ಬಂದರೆ ಆಗಲೂ ಸಹ ಭಾರತೀಯ ನೆಲೆಕ್ಕೆ ಸಂಬಂಧಿಸಿದ ಕಥೆಯನ್ನೇ ಆಯ್ಕೆ ಮಾಡಿಕೊಂಡು, ಹಾಲಿವುಡ್​ ಸಿನಿಮಾ ಮಾಡಿ ಅದನ್ನು ಇಡೀ ಜಗತ್ತಿಗೆ ತೋರಿಸುವುದಾಗಿ ರಾಜಮೌಳಿ ಹೇಳಿದ್ದಾರೆ. ಅವರು ನೀಡಿದ ಈ ಉತ್ತರ ಕೇಳಿ ಫ್ಯಾನ್ಸ್​ ಫಿದಾ ಆಗಿದ್ದಾರೆ.

ಸದ್ಯ ರಾಜಮೌಳಿ ಗಮನವೆಲ್ಲ ‘ಆರ್​ಆರ್​ಆರ್​’ ಸಿನಿಮಾ ಮೇಲಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಅವರು ತೊಡಗಿಕೊಂಡಿದ್ದಾರೆ. ಶುಕ್ರವಾರ (ಡಿ.10) ಬೆಂಗಳೂರಿಗೂ ಬಂದು ಅವರು ಪ್ರಚಾರ ಮಾಡಿದ್ದಾರೆ. ಅವರ ಜೊತೆ ಜ್ಯೂ. ಎನ್​ಟಿಆರ್​, ರಾಮ್​ ಚರಣ್​, ಆಲಿಯಾ ಭಟ್​, ನಿರ್ಮಾಪಕ ಡಿವಿವಿ ದಾನಯ್ಯ ಕೂಡ ಪ್ರಚಾರದಲ್ಲಿ ಪಾಲ್ಗೊಂಡರು. ಜ್ಯೂ. ಎನ್​ಟಿಆರ್​ ಅವರು ಪುನೀತ್ ರಾಜ್​ಕುಮಾರ್​​ ಜತೆಗಿನ ಸ್ನೇಹವನ್ನು ನೆನಪು ಮಾಡಿಕೊಂಡು ‘ಗೆಳೆಯ ಗೆಳೆಯ..’ ಹಾಡು ಹೇಳಿ ಭಾವುಕರಾದರು.

ಜ.7ರಂದು ವಿಶ್ವಾದ್ಯಂತ ಆರ್​ಆರ್​ಆರ್​ ಸಿನಿಮಾ ಬಿಡುಗಡೆ ಆಗಲಿದೆ. ತೆಲುಗಿನಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾ ಕನ್ನಡ, ಮಲಯಾಳಂ, ಹಿಂದಿ, ತಮಿಳು ಮುಂತಾದ ಭಾಷೆಗಳಿಗೆ ಡಬ್​ ಆಗಿಯೂ ತೆರೆಕಾಣುತ್ತಿದೆ.

ಇದನ್ನೂ ಓದಿ:

RRR​ ಸುದ್ದಿಗೋಷ್ಠಿ: ಕರುನಾಡಿಗೆ ಬಂದ ರಾಜಮೌಳಿ, ಆಲಿಯಾ, ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ಹೇಳಿದ್ದೇನು?

ಪುಷ್ಪ, ಆರ್​ಆರ್​ಆರ್​ ಮೀರಿಸಿ ಟ್ರೆಂಡ್​ ಆದ ‘ಗಂಧದ ಗುಡಿ’; ಪುನೀತ್​ ಡಾಕ್ಯುಮೆಂಟರಿಗೆ ಬಹುಪರಾಕ್​

Follow us on

Related Stories

Most Read Stories

Click on your DTH Provider to Add TV9 Kannada