ಬಿಡುಗಡೆಗೆ ಮೂರು ದಿನ ಮುಂಚೆಯೇ 50 ಸಾವಿರ ಟಿಕೆಟ್ ಮಾರಿದ ಎಂಐ

Mission Impossible: ಟಾಮ್ ಕ್ರೂಸ್ ನಟನೆಯ ವಿಶ್ವಪ್ರಸಿದ್ಧ ‘ಮಿಷನ್ ಇಂಪಾಸಿಬಲ್’ ಸಿನಿಮಾ ಸರಣಿಯ ಹೊಸ ಸಿನಿಮಾ ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್ ಸಿನಿಮಾ ಮೇ 17 ರಂದು ಭಾರತದಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾ ಬಿಡುಗಡೆಯ ಮೂರು ದಿನ ಮುಂಚಿತವಾಗಿ 50 ಸಾವಿರಕ್ಕೂ ಹೆಚ್ಚು ಟಿಕೆಟ್​ಗಳನ್ನು ಮುಂಗಡವಾಗಿ ಮಾರಾಟ ಮಾಡಿದೆ.

ಬಿಡುಗಡೆಗೆ ಮೂರು ದಿನ ಮುಂಚೆಯೇ 50 ಸಾವಿರ ಟಿಕೆಟ್ ಮಾರಿದ ಎಂಐ
Mission Imposible

Updated on: May 15, 2025 | 12:58 PM

ಇತ್ತೀಚೆಗಿನ ವರ್ಷಗಳಲ್ಲಿ ಕೆಲ ಹಾಲಿವುಡ್ (Hollywood) ಸಿನಿಮಾಗಳು ಭಾರತದಲ್ಲಿ ಭಾರಿ ದೊಡ್ಡ ಕಲೆಕ್ಷನ್ ಮಾಡುತ್ತಿವೆ. ಕೆಲ ಹಾಲಿವುಡ್ ಸಿನಿಮಾಗಳು ಭಾರತದ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡೇ ಸಿನಿಮಾ ನಿರ್ಮಾಣ ಮಾಡುತ್ತಿವೆ. ಭಾರತದಲ್ಲಿ ಪ್ರಚಾರ ಮಾಡಲು ಅನುಕೂಲವಾಗಲೆಂದು ಭಾರತದ ನಟರನ್ನು ಸಿನಿಮಾಗಳಲ್ಲಿ ಹಾಕಿಕೊಳ್ಳಲಾಗುತ್ತಿದೆ. ಇದೀಗ ವಿಶ್ವಪ್ರಸಿದ್ಧ ‘ಮಿಷನ್ ಇಂಪಾಸಿಬಲ್’ ಸಿನಿಮಾ ಸರಣಿಯ ಹೊಸ ಸಿನಿಮಾ ಬಿಡುಗಡೆ ಆಗಲಿದ್ದು, ಈ ಸಿನಿಮಾವನ್ನು ವಿಶೇಷವಾಗಿ ಭಾರತದಲ್ಲಿಯೇ ಮೊದಲು ಬಿಡುಗಡೆ ಮಾಡಲಾಗುತ್ತಿದೆ. ಅದಕ್ಕೆ ತಕ್ಕಂತೆ ಭಾರತ ಬಾಕ್ಸ್ ಆಫೀಸ್​ನಲ್ಲಿ ದೂಳೆಬ್ಬಿಸಲು ಸಿನಿಮಾ ರೆಡಿಯಾಗಿದೆ.

‘ಮಿಷನ್ ಇಂಪಾಸಿಬಲ್: ಫೈನಲ್ ರೆಕನಿಂಗ್’ ಸಿನಿಮಾ ಮೇ 17 ರಂದು ಭಾರತದಾದ್ಯಂತ ಬಿಡುಗಡೆ ಆಗುತ್ತಿದೆ. ಇಂಗ್ಲೀಷ್ ಮಾತ್ರವೇ ಅಲ್ಲದೆ ಇನ್ನೂ ಕೆಲವು ಪ್ರಾದೇಶಿಕ ಭಾಷೆಗಳಿಗೆ ಡಬ್ ಆಗಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾ ಬಿಡುಗಡೆಗೆ ಮೂರು ದಿನ ಇರುವಂತೆಯೇ ಕೇವಲ ಮಲ್ಟಿಪ್ಲೆಕ್ಸ್​ಗಳಲ್ಲಿ 50 ಸಾವಿರಕ್ಕೂ ಹೆಚ್ಚು ಟಿಕೆಟ್​ಗಳು ಮುಂಗಡವಾಗಿ ಬುಕ್ ಆಗಿವೆ. ಇನ್ನೂ ಮೂರು ದಿನಗಳಲ್ಲಿ ಇನ್ನೂ 30 ಸಾವಿರಕ್ಕೂ ಹೆಚ್ಚು ಟಿಕೆಟ್​ಗಳು ಮುಂಗಡವಾಗಿ ಬುಕ್ ಆಗುವ ಸಾಧ್ಯತೆ ಇದೆ.

‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ, ಪಿವಿಆರ್-ಐನಾಕ್ಸ್​ನಲ್ಲಿ 38 ಸಾವಿರಕ್ಕೂ ಹೆಚ್ಚು ಟಿಕೆಟ್​ಗಳು ಮುಂಗಡವಾಗಿ ಬುಕ್ ಆಗಿವೆ. ಸಿನಿಪೋಲೀಸ್ ಹಾಗೂ ಇತರೆ ಕೆಲ ಮಲ್ಟಿಪ್ಲೆಕ್ಸ್​ಗಳಲ್ಲಿ ಸುಮಾರು 12500 ಟಿಕೆಟ್​ಗಳು ಮುಂಗಡವಾಗಿ ಬುಕ್ ಆಗಿವೆ. ಹಾಲಿವುಡ್​ ಸಿನಿಮಾಗಳಾದ್ದರಿಂದ ಟಿಕೆಟ್ ಬೆಲೆಯೂ ಬಲು ದುಬಾರಿಯೇ ಆಗಿದ್ದು, ಈಗ ಆಗಿರುವ ಬುಕಿಂಗ್​ಗೆ ಸರಾಸರಿ ಟಿಕೆಟ್ ದರ 300 ರೂಪಾಯಿ ಲೆಕ್ಕ ಹಾಕಿದರೂ ಸುಮಾರು 1.50 ಕೋಟಿ ರೂಪಾಯಿ ಕಲೆಕ್ಷನ್ ಆಗುತ್ತಿದೆ. ಈ ಮೊತ್ತ ಇನ್ನಷ್ಟು ಹೆಚ್ಚಾಗಲಿದೆ.

ಇದನ್ನೂ ಓದಿ:ಭಾರತದಲ್ಲಿ ದಾಖಲೆ ಬರೆಯಲು ಸಜ್ಜಾದ ಹಾಲಿವುಡ್ ಸಿನಿಮಾ ‘ಮಿಷನ್ ಇಂಪಾಸಿಬಲ್’

ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್ ಸಿನಿಮಾದ ಮುಂಗಡ ಟಿಕೆಟ್​ಗಳು ಅತಿ ಹೆಚ್ಚು ಬುಕ್ ಆಗಿರುವುದು ಮುಂಬೈನಲ್ಲಂತೆ. ಅದರ ನಂತರದ ಸ್ಥಾನ ಬೆಂಗಳೂರಿಗೆ ಎನ್ನಲಾಗುತ್ತಿದೆ. ಹೈದರಾಬಾದ್, ದೆಹಲಿ ಇನ್ನೂ ಕೆಲವು ಮೆಟ್ರೊ ಸಿಟಿಗಳಲ್ಲಿ ಸಿನಿಮಾ ಒಳ್ಳೆಯ ಪ್ರದರ್ಶನ ನೀಡುವ ವಿಶ್ವಾಸ ಚಿತ್ರತಂಡದ್ದು. ‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ ಬಿಡುಗಡೆ ಆಗುವ ಒಂದು ದಿನ ಮುಂಚಿತವಾಗಿ ಅಂದರೆ ಮೇ 16 ರಂದು ‘ಫೈನಲ್ ಡೆಸ್ಟಿನೇಷನ್’ ಸಿನಿಮಾ ಸಹ ಬಿಡುಗಡೆ ಆಗುತ್ತಿದ್ದು, ‘ಮಿಷನ್ ಇಂಪಾಸಿಬಲ್’ ಸಿನಿಮಾಕ್ಕೆ ವಿಶ್ವಮಟ್ಟದಲ್ಲಿ ಸ್ಪರ್ಧೆ ನೀಡಲಿದೆ.

‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ ‘ಮಿಷನ್ ಇಂಪಾಸಿಬಲ್’ ಸರಣಿಯ ಎಂಟನೇ ಸಿನಿಮಾ ಆಗಿದ್ದು, ಇದು ಈ ಸರಣಿಯ ಕೊನೆಯ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾದ ಮುಖ್ಯ ಪಾತ್ರವಾದ ಈತನ್ ಹಂಟ್ ಈ ಸಿನಿಮಾದ ಅಂತ್ಯದಲ್ಲಿ ಸಾಯಲಿದ್ದಾನೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ 2023 ರಲ್ಲಿ ಬಿಡುಗಡೆ ಆಗಿದ್ದ ‘ಮಿಷನ್ ಇಂಪಾಸಿಬಲ್: ಡೆಡ್ ರೆಕನಿಂಗ್’ ಸಿನಿಮಾದ ಎರಡನೇ ಭಾಗವಾಗಿದೆ. ಸಿನಿಮಾದಲ್ಲಿ ಟಾಮ್ ಕ್ರೂಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶನ ಕ್ರಿಸ್ಟೊಫರ್ ಮೆಕ್ವೈರ್ ಅವರದ್ದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ