‘ಆರ್ಆರ್ಆರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ಆಸ್ಕರ್ ಪ್ರಶಸ್ತಿ ಗೆಲ್ಲಲಿ ಎಂದು ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamouli) ಸೇರಿ ಅನೇಕರು ಬಯಸಿದ್ದರು. ಆದರೆ, ಈ ಕನಸು ಭಗ್ನವಾಗಿದೆ. ಈ ವರ್ಷ ಭಾರತದಿಂದ ಆಸ್ಕರ್ ರೇಸ್ಗೆ ಅಧಿಕೃತವಾಗಿ ಎಂಟ್ರಿಕೊಟ್ಟಿದ್ದು ಗುಜರಾತಿ ಸಿನಿಮಾ! ಹೌದು, ಗುಜರಾತಿ ಭಾಷೆಯ ‘ಚೆಲ್ಲೋ ಶೋ’ (Chhello Show) ಸಿನಿಮಾ ಭಾರತದಿಂದ ಆಸ್ಕರ್ಗೆ ಎಂಟ್ರಿ ಕೊಟ್ಟಿದೆ. ಈ ವಿಚಾರಕ್ಕೆ ನಿರ್ದೇಶಕ ರಾಜಮೌಳಿ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮೂಡಿದೆ.
ಅಕಾಡೆಮಿ ಅವಾರ್ಡ್ಸ್ನಲ್ಲಿ ‘ಅತ್ಯುತ್ತಮ ವಿದೇಶಿ ಫೀಚರ್ ಸಿನಿಮಾ’ ವಿಭಾಗ ಇದೆ. ಈ ವಿಭಾಗದ ಅಡಿಯಲ್ಲಿ ಇಂಗ್ಲಿಷ್ ಅಲ್ಲದೆ ಬೇರೆ ಭಾಷೆಯ ಒಂದು ಸಿನಿಮಾಗೆ ಅವಾರ್ಡ್ ಕೊಡಲಾಗುತ್ತದೆ. ಪ್ರತಿ ರಾಷ್ಟ್ರದವರು ಒಂದು ಚಿತ್ರವನ್ನು ಈ ವಿಭಾಗಕ್ಕೆ ಕಳುಹಿಸಿಕೊಡಬೇಕು. ಈ ಬಾರಿ ‘ಚೆಲ್ಲೋ ಶೋ’ ಸಿನಿಮಾ ಆಯ್ಕೆ ಆಗಿದ್ದು, ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ‘ಕೊನೆಯ ಸಿನಿಮಾ ಶೋ’ ಎಂಬ ಅರ್ಥವನ್ನು ಇದು ಹೊಂದಿದೆ.
ಪ್ಯಾನ್ ನಳಿನ್ ಅವರು ‘ಚೆಲ್ಲೋ ಶೋ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅನೇಕ ಸಿನಿಮೋತ್ಸವಗಳಲ್ಲಿ ಸಿನಿಮಾ ಪ್ರದರ್ಶನ ಕಂಡು ಗಮನ ಸೆಳೆದಿದೆ. ಪ್ರಶಸ್ತಿ ಕೂಡ ಗೆದ್ದಿದೆ. ಈ ಚಿತ್ರ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಈ ಸಿನಿಮಾ ಅಕ್ಟೋಬರ್ 14ರಂದು ರಿಲೀಸ್ ಆಗಲಿದೆ. ಅದಕ್ಕೂ ಮೊದಲೇ ಈ ಚಿತ್ರ ಆಸ್ಕರ್ ರೇಸ್ನಲ್ಲಿ ಸ್ಥಾನ ಪಡೆದುಕೊಂಡಿರುವುದು ವಿಶೇಷ.
‘ಆರ್ಆರ್ಆರ್’ ಸಿನಿಮಾ ಆಸ್ಕರ್ ರೇಸ್ನಲ್ಲಿ ಸ್ಥಾನ ಪಡೆದುಕೊಳ್ಳಲಿದೆ, ಆಸ್ಕರ್ ಗೆಲ್ಲಲಿದೆ ಎಂದು ರಾಜಮೌಳಿ ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ. ಅನೇಕರು ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ‘ಆರ್ಆರ್ಆರ್’ ಚಿತ್ರಕ್ಕೆ ಅವಕಾಶ ನೀಡಲೇಬೇಕು ಎಂದು ಕೋರುತ್ತಿದ್ದಾರೆ.
ಇದನ್ನೂ ಓದಿ: RRR ಚಿತ್ರಕ್ಕೆ ಆಸ್ಕರ್ ಸಿಕ್ಕರೆ ಏನಾಗುತ್ತದೆ? ಅಭಿಪ್ರಾಯ ತಿಳಿಸಿದ ನಿರ್ದೇಶಕ ರಾಜಮೌಳಿ
‘ಆರ್ಆರ್ಆರ್’ ಸಿನಿಮಾ ಮಾರ್ಚ್ ತಿಂಗಳಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆಯಿತು. ವಿಶ್ವ ಬಾಕ್ಸ್ ಆಫೀಸ್ನಲ್ಲೂ ಚಿತ್ರ ಅಬ್ಬರಿಸಿತು. ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆದ ಬಳಿಕೆ ವಿಶ್ವದ ನಾನಾ ಚಿತ್ರರಂಗದ ತಂತ್ರಜ್ಞರು, ನಟರು ಈ ಚಿತ್ರವನ್ನು ವೀಕ್ಷಿಸಿ ರಾಜಮೌಳಿ ಅವರನ್ನು ಹೊಗಳಿದ್ದರು.
Published On - 7:26 pm, Tue, 20 September 22