ವರದಿಗಳ ಪ್ರಕಾರ ಹಾಲಿವುಡ್ನ (Hollywood) ಖ್ಯಾತ ನಟ ಕೆವಿನ್ ಸ್ಪೇಸಿ (Kevin Spacey) ವಿರುದ್ಧ ಬ್ರಿಟನ್ನ ಕ್ರೌನ್ ಪ್ರೊಟೆಕ್ಷನ್ ಸರ್ವಿಸಸ್ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದೆ. ಮೂವರು ಪುರುಷರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೆವಿನ್ ಮೇಲಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಟನ ವಿರುದ್ಧ ತನಿಖೆ ನಡೆಸಿ ಆರೋಪಗಳನ್ನು ಅಧಿಕೃತಗೊಳಿಸಲಾಗಿದೆ. ರಾಯಿಟರ್ಸ್ ತನ್ನ ವರದಿಯಲ್ಲಿ ತಿಳಿಸಿರುವಂತೆ, ಬುಧವಾರ ಯುಕೆ ಕ್ರೌನ್ ಪ್ರಾಸಿಕ್ಯೂಷನ್ ಸೇವೆಯು ಮೂವರು ಪುರುಷರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ನಾಲ್ಕು ಕ್ರಿಮಿನಲ್ ಆರೋಪಗಳನ್ನು ಅಧಿಕೃತಗೊಳಿಸಿದೆ. ಹಾಲಿವುಡ್ನಲ್ಲಿ ಕೆವಿನ್ ದೊಡ್ಡ ಹೆಸರಾಗಿದ್ದು 2 ಬಾರಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. 62 ವರ್ಷ ವಯಸ್ಸಿನ ನಟ 2017 ರಿಂದ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇದರ ಪರಿಣಾಮ ಅವರ ವೃತ್ತಿ ಬದುಕಿನಲ್ಲೂ ಆಗಿದ್ದು, ಅವರು ಕಾಣಿಸಿಕೊಳ್ಳಬೇಕಿದ್ದ ಚಿತ್ರದಲ್ಲಿ ಬೇರೆ ನಟ ಕಾಣಿಸಿಕೊಳ್ಳುತ್ತಿದ್ದಾರೆ. ಪರಿಣಾಮವಾಗಿ 2018ರಿಂದ ಕೆವಿನ್ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ.
ವೆರೈಟಿ ವರದಿಯ ಪ್ರಕಾರ ಬ್ರಿಟಿಷ್ ಪ್ರಾಸಿಕ್ಯೂಷನ್ ಕೆವಿನ್ ಸ್ಪೇಸಿ ಮೇಲಿನ ಆರೋಪವನ್ನು ಅಧಿಕೃತಗೊಳಿಸಿದೆ. ಪೊಲೀಸರು ತನಿಖೆಯಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಅಂದಹಾಗೆ ಕೆವಿನ್ ಈ ಪ್ರಕರಣದಲ್ಲಿ ಆರೋಪಿಯಾಗಿದ್ದರೂ ಕೂಡ ಅವರಿಗೆ ನ್ಯಾಯಯುತ ವಿಚಾರಣೆಯ ಹಕ್ಕಿದೆ ಎಂದು ತಿಳಿಸಲಾಗಿದೆ.
2017ರಲ್ಲಿ ವ್ಯಕ್ತಿಯೋರ್ವರು 1986 ರಲ್ಲಿ ತಮಗೆ 14 ವರ್ಷ ವಯಸ್ಸಾಗಿದ್ದಾಗ ಕೆವಿನ್ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಿದ್ದರು. ಇದರ ನಂತರದಲ್ಲಿ ನೆಟ್ಫ್ಲಿಕ್ಸ್ನ ಜನಪ್ರಿಯ ಶೋ ಆದ ‘ಹೌಸ್ ಆಫ್ ಕಾರ್ಡ್ಸ್’ ತಂಡದ ಕೆಲವು ಸದಸ್ಯರು ಕೂಡ ಇದೇ ಆರೋಪಗಳನ್ನು ಮಾಡಿದರು. ಆ ಸರಣಿಯ ಜನಪ್ರಿಯ ನಟರಾಗಿದ್ದ ಕೆವಿನ್ರನ್ನು ಕಂಪನಿಯ ಲೈಂಗಿಕ ಕಿರುಕುಳ ನೀತಿಯ ಉಲ್ಲಂಘನೆಯ ಕಾರಣದಿಂದ $ 31 ಮಿಲಿಯನ್ ಪಾವತಿಸಲು ಆದೇಶಿಸಿತ್ತು.
ಇದನ್ನೂ ಓದಿ: Jeff Goldblum: ‘ನಾನು ಯೋಗದ ವಿದ್ಯಾರ್ಥಿ’; ಹೆಮ್ಮೆಯಿಂದ ಭಾರತದ ಮೇಲಿನ ಪ್ರೀತಿಯನ್ನು ಹೇಳಿಕೊಂಡ ಹಾಲಿವುಡ್ನ ಖ್ಯಾತ ನಟ
ಪ್ರಸ್ತುತ ಕೆವಿನ್, ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಲು ಪ್ರಯತ್ನಿಸುತ್ತಿದ್ದಾರೆ. ಅವರ ಹೊಸ ಚಿತ್ರ ಪೀಟರ್ ಫೈವ್ ಎಯ್ಟ್‌ನಲ್ಲಿ ಕೊಲೆಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಟ್ರೇಲರ್ ಇತ್ತೀಚೆಗೆ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:56 am, Fri, 27 May 22