Jeff Goldblum: ‘ನಾನು ಯೋಗದ ವಿದ್ಯಾರ್ಥಿ’; ಹೆಮ್ಮೆಯಿಂದ ಭಾರತದ ಮೇಲಿನ ಪ್ರೀತಿಯನ್ನು ಹೇಳಿಕೊಂಡ ಹಾಲಿವುಡ್​ನ ಖ್ಯಾತ ನಟ

Jeff Goldblum: ‘ನಾನು ಯೋಗದ ವಿದ್ಯಾರ್ಥಿ’; ಹೆಮ್ಮೆಯಿಂದ ಭಾರತದ ಮೇಲಿನ ಪ್ರೀತಿಯನ್ನು ಹೇಳಿಕೊಂಡ ಹಾಲಿವುಡ್​ನ ಖ್ಯಾತ ನಟ
ಜೆಫ್​ ಗೋಲ್ಡ್​ಬ್ಲಮ್

Jeff Goldblum on India: ಜೆಫ್ ಗೋಲ್ಡ್​​ಬ್ಲಮ್ ಮಾತ್ರವಲ್ಲ ಅವರ ಕುಟುಂಬ ಕೂಡ ಭಾರತೀಯ ಸಂಸ್ಕೃತಿಗೆ ಹತ್ತಿರವಾಗಿದೆ. ಇಲ್ಲಿನ ಸಂಸ್ಕೃತಿ ಹಾಗೂ ಯೋಗದ ಬಗ್ಗೆ ಅವರು ಮಾತನಾಡಿದ್ದಾರೆ. ‘ಜುರಾಸಿಕ್ ಪಾರ್ಕ್’ ಸೇರಿದಂತೆ ಹಲವು ಪ್ರಖ್ಯಾತ ಸಿನಿಮಾಗಳಲ್ಲಿ ನಟಿಸಿರುವ ನಟ ಹೇಳಿದ್ದೇನು? ಇಲ್ಲಿದೆ ನೋಡಿ.

TV9kannada Web Team

| Edited By: shivaprasad.hs

May 24, 2022 | 3:29 PM

ಹಾಲಿವುಡ್​ನ (Hollywood) ಹಲವು ಖ್ಯಾತ ನಟರು ಭಾರತದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಅದರಲ್ಲೂ ಇಲ್ಲಿನ ಯೋಗ ಹಾಗೂ ಆಧ್ಯಾತ್ಮ ಪರಂಪರೆಗೆ ಬಹುತೇಕರು ಮಾರು ಹೋಗಿದ್ದಾರೆ. ಇದೀಗ ಮತ್ತೋರ್ವ ಖ್ಯಾತ ನಟ ಜೆಫ್ ಗೋಲ್ಡ್‌ಬ್ಲಮ್ (Jeff Goldblum) ಭಾರತದ ಮೇಲಿನ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ಅದರಲ್ಲೂ ಭಾರತದ ಯೋಗ ಪದ್ಧತಿಯೊಂದಿಗೆ ತಾವು ಬೆಸೆದುಕೊಂಡಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ನಟ. ಭಾರತದ ಸೆಳೆತ ಎಂದಿನಿಂದ ಆರಂಭವಾಯಿತು ಎಂದು ತಿಳಿಸಿರುವ ನಟ, ‘‘ದಿ ರಿವರ್’ ಚಿತ್ರದ ಮೂಲಕ ಮೊದಲ ಬಾರಿಗೆ ಭಾರತದ ಪರಂಪರೆಯ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೆ. ವೆಸ್ ಆಂಡರ್ಸನ್ ಅವರ ‘ದಿ ಡಾರ್ಜಿಲಿಂಗ್ ಲಿಮಿಟೆಡ್’ ಮೂಲಕ ಭಾರತಕ್ಕೆ ಮತ್ತಷ್ಟು ಹತ್ತಿರವಾದೆ’’ ಎಂದಿದ್ದಾರೆ. ‘ಜುರಾಸಿಕ್ ಪಾರ್ಕ್’ ಖ್ಯಾತಿಯ ನಟ ಜೆಫ್ ವಿಡಿಯೋ ಸಂದರ್ಶನದಲ್ಲಿ ಮಾತನಾಡುತ್ತಾ ತಮ್ಮ ನಿವಾಸದಲ್ಲಿರುವ ಯೋಗಾನಂದ ಹಾಗೂ ಮುಕ್ತಾನಂದ ಅವರ ಕಲಾಕೃತಿಗಳನ್ನೂ ತೋರಿಸಿದ್ದಾರೆ.

ಜೆಫ್ ಗೋಲ್ಡ್​​ಬ್ಲಮ್ ಮಾತ್ರವಲ್ಲ ಅವರ ಕುಟುಂಬ ಕೂಡ ಭಾರತೀಯ ಸಂಸ್ಕೃತಿಗೆ ಹತ್ತಿರವಾಗಿದೆ. ಅವರ ಮನೆಯಲ್ಲಿರುವ ಯೋಗಾನಂದರ ಕಲಾಕೃತಿಯನ್ನು ರಚಿಸಿದ್ದು ಜೆಫ್ ಅವರ ಸಹೋದರಿ. ಈ ಬಗ್ಗೆ ಸ್ವತಃ ನಟ ಹೇಳಿಕೊಂಡಿದ್ದಾರೆ. ಸಹೋದರಿಯಿಂದ ಪ್ರೇರಿತನಾಗಿ ಯೋಗಾನಂದರ ಬಗ್ಗೆ ಓದಿ ತಿಳಿದುಕೊಂಡಿದ್ದೇನೆ ಎಂದಿದ್ದಾರೆ ಅವರು.

69 ವರ್ಷದ ನಟ ಮುಂದುವರೆದು ಮಾತನಾಡಿ, ‘ನಾನು ಯೋಗಿಯಲ್ಲ. ಆದರೆ ಯೋಗದ ವಿದ್ಯಾರ್ಥಿ. ಧ್ಯಾನವನ್ನೂ ಮಾಡುತ್ತೇನೆ. ನಾನು ಅದಕ್ಕೆ ಮತ್ತಷ್ಟು ತೆರೆದುಕೊಂಡಿದ್ದೇನೆ. ನನ್ನನ್ನು ಈ ಎಲ್ಲಾ ವಿಚಾರಗಳು ನಮ್ರನನ್ನಾಗಿಸಿದೆ. ಎಷ್ಟು ಕಡಿಮೆ ತಿಳಿದಿದೆ ಎಂದು ಅರ್ಥಮಾಡಿಕೊಂಡಿರುವ ನಾನು, ಅತ್ಯುತ್ತಮವಾಗಿ ಹೇಗೆ ಬದುಕಬೇಕೆಂದು ಅರಿತುಕೊಂಡೆ ಎಂದಿದ್ದಾರೆ.

ಭಾರತದ ಆಹಾರ ಪದ್ಧತಿಯ ಬಗ್ಗೆಯೂ ಮಾತನಾಡಿರುವ ನಟ, ಅದನ್ನು ಬಹಳ ಇಷ್ಟಪಡುತ್ತೇನೆ. ಭೂಮಿಯ ಮೇಲಿನ ಅತ್ಯಂತ ರುಚಿಕರ ಆಹಾರವದು ಎಂದು ಹೇಳಿಕೊಂಡಿದ್ದಾರೆ.

‘ಇಂಡಿಪೆಂಡೆನ್ಸ್ ಡೇ’, ‘ಜುರಾಸಿಕ್ ಪಾರ್ಕ್’, ‘ದಿ ಲಾಸ್ಟ್ ವರ್ಲ್ಡ್: ಜುರಾಸಿಕ್ ಪಾರ್ಕ್​’, ಜುರಾಸಿಕ್ ವರ್ಲ್ಡ್​​: ಫಾಲನ್ ಕಿಂಗ್​ಡಮ್’ ಸೇರಿದಂತೆ ಅತ್ಯಂತ ಹೆಚ್ಚು ಗಳಿಕೆ ಮಾಡಿರುವ ಹಾಲಿವುಡ್ ಚಿತ್ರಗಳಲ್ಲಿ ಜೆಫ್​ ಗೋಲ್ಡ್​​ಬ್ಲಮ್ ನಟಿಸಿರುವ ಚಿತ್ರಗಳು ಹಲವಾರಿವೆ. ತಮ್ಮ ಪಾತ್ರದ ಮೂಲಕ ಸಿನಿಮಾ ಪ್ರೇಮಿಗಳ ಆರಾಧ್ಯ ಕಲಾವಿದರಾಗಿ ಗುರುತಿಸಿಕೊಂಡವರು ಜೆಫ್. ವಿಭಿನ್ನ ಪಾತ್ರಗಳ ಮೂಲಕ ಈಗಲೂ ಚಿತ್ರಗಳಲ್ಲಿ ನಟಿಸುತ್ತಿರುವ ಅವರು ಬ್ಯುಸಿ ನಟರಲ್ಲಿ ಓರ್ವರಾಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada