ಶೇನ್ ವಾರ್ನ್ ಸಿನಿಮಾ: ಭಾರತದಲ್ಲಿ ಚಿಗುರಿದ್ದ ಆ ಕನಸು ನನಸಾಗಲೇ ಇಲ್ಲ; ಏನಿದು ವಿಷಯ?
ಶೇನ್ ವಾರ್ನ್ ಅವರು ಆಸ್ಟ್ರೇಲಿಯಾದ ಕ್ರಿಕೆಟರ್ ಆಗಿದ್ದರೂ ಕೂಡ ಭಾರತದಲ್ಲಿ ಅವರ ಬಯೋಪಿಕ್ ಮಾಡಲು ತಯಾರಿ ನಡೆದಿತ್ತು! ಆ ಬಗ್ಗೆ ಅವರು ಮಾತನಾಡಿದ್ದರು.
ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ (Shane Warne) ಹೃದಯಾಘಾತದಿಂದ ನಿಧನರಾಗಿರುವುದಕ್ಕೆ ವಿಶ್ವಾದ್ಯಂತ ಇರುವ ಅವರ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಕ್ರಿಕೆಟ್ ಲೋಕದ ಅನೇಕ ದಿಗ್ಗಜರು ಶೇನ್ ವಾರ್ನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಕ್ರೀಡೆ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಅವರು ಸಿನಿಮಾದಲ್ಲಿ ನಟಿಸುವ ಬಗ್ಗೆಯೂ ಪ್ಲ್ಯಾನ್ ಮಾಡಿದ್ದರು. ಅದು ಕೂಡ ಭಾರತದ ಸಿನಿಮಾದಲ್ಲಿ ಎಂಬುದು ವಿಶೇಷ. ಕ್ರಿಕೆಟ್ ಮತ್ತು ಸಿನಿಮಾ ಜಗತ್ತಿನ ನಡುವೆ ಮೊದಲಿನಿಂದಲೂ ಒಂದು ನಂಟು ಇದೆ. ಕೆಲವು ಲೆಜೆಂಡರಿ ಕ್ರಿಕೆಟರ್ಗಳ ಕುರಿತು ಸಿನಿಮಾ ಮಾಡಲಾಗಿದೆ. ಅದೇ ರೀತಿ ಶೇನ್ ವಾರ್ನ್ ಕುರಿತಾಗಿಯೂ ಸಿನಿಮಾ ಸಿದ್ಧಗೊಳ್ಳುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಕಾರಣಾಂತರಗಳಿಂದ ಆ ಕನಸು ಕೈಗೂಡಲೇ ಇಲ್ಲ. ಆ ಬಗ್ಗೆ ಸ್ವತಃ ಶೇನ್ ವಾರ್ನ್ ಅವರು ಈ ಹಿಂದೆ ಹೇಳಿಕೊಂಡಿದ್ದರು. ಬಯೋಪಿಕ್ (Shane Warne Biopic) ಮಾತ್ರವಲ್ಲದೇ ಬೇರೆಯವರ ಸಿನಿಮಾಗಳಲ್ಲಿ ನಟಿಸುವಂತೆಯೂ ಅವರಿಗೆ ಆಫರ್ ನೀಡಲಾಗಿತ್ತು. ಆ ಯೋಜನೆಗಳೆಲ್ಲ ಕಾರ್ಯರೂಪಕ್ಕೆ ಬರುವ ಮುನ್ನವೇ ಶೇನ್ ವಾರ್ನ್ ಅವರು 52ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವುದು (Shane Warne Death) ನೋವಿನ ಸಂಗತಿ.
ಅದು 2015ರ ಸಮಯ. ಶೇನ್ ವಾರ್ನ್ ಅವರು ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಗುಸುಗುಸು ಹರಿದಾಡಿತ್ತು. ನಂತರ ಆ ಸುದ್ದಿಯನ್ನು ಅವರು ಖಚಿತಪಡಿಸಿದ್ದರು. ‘ಒಂದು ಆಫರ್ ಬಂದಿದೆ. ಯಾರೋ ನನಗಾಗಿ ಏನೋ ಪ್ಲ್ಯಾನ್ ಮಾಡಿಕೊಂಡಿದ್ದಾರೆ’ ಎಂದು ಶೇನ್ ವಾರ್ನ್ ಹೇಳಿದ್ದರು. ಆದರೆ ಆ ಸಿನಿಮಾದ ಪ್ಲ್ಯಾನ್ ಮುಂದೇನಾಯಿತು ಎಂದು ತಿಳಿಯಲಿಲ್ಲ. ಅವರು ಸಿನಿಮಾದಲ್ಲಿ ನಟಿಸಿದ ಬಗ್ಗೆ ಯಾವುದೇ ಮಾಹಿತಿ ಕೂಡ ಹೊರಬೀಳಲಿಲ್ಲ.
ಕೆಲವು ಸಮಯದ ಬಳಿಕ ಶೇನ್ ವಾರ್ನ್ ಅವರ ಬಯೋಪಿಕ್ ಬಗ್ಗೆ ಪ್ರಸ್ತಾಪ ಆಯಿತು. ಅವರು ಆಸ್ಟ್ರೇಲಿಯಾದ ಕ್ರಿಕೆಟರ್ ಆಗಿದ್ದರೂ ಕೂಡ ಭಾರತದಲ್ಲಿ ಅವರ ಬಯೋಪಿಕ್ ಮಾಡಲು ತಯಾರಿ ನಡೆದಿತ್ತು! ಆದರೆ ಕೊವಿಡ್ ಕಾರಣದಿಂದ ಆ ಸಿನಿಮಾದ ಕೆಲಸಗಳಿಗೆ ಬ್ರೇಕ್ ಬಿತ್ತು. ನಂತರ ಮಾತನಾಡಿದ್ದ ಶೇನ್ ವಾರ್ನ್ ಅವರು, ‘ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷ ಆರಂಭದಲ್ಲಿ ನಾವು ಆ ಪ್ರಾಜೆಕ್ಟ್ ಮತ್ತೆ ಕೈಗೆತ್ತಿಕೊಳ್ಳುತ್ತೇವೆ. ಏನಾಗುತ್ತಿದೆ ಅಂತ ನೋಡೋಣ’ ಎಂದು ಹೇಳಿದ್ದರು. ತಮ್ಮ ಪಾತ್ರದಲ್ಲಿ ಹಾಲಿವುಡ್ ಹೀರೋಗಳಾದ ಬ್ರಾಡ್ ಪಿಟ್ ಅಥವಾ ಲಿಯೊನಾರ್ಡೊ ಡಿಕಾಪ್ರಿಯೊ ನಟಿಸಬೇಕು ಎಂದು ಅವರು ಹಂಬಲ ವ್ಯಕ್ತಪಡಿಸಿದ್ದರು.
ಅಚ್ಚರಿ ಎಂದರೆ ಅದು ಹಾಲಿವುಡ್ ಸಿನಿಮಾ ಆಗಿರಲಿದ್ದು, ಭಾರತ ಪ್ರೇಕ್ಷಕರಿಗಾಗಿ ತಯಾರಿಸಬೇಕು ಎಂದುಕೊಳ್ಳಲಾಗಿತ್ತು. ಡ್ರಗ್ಸ್, ಪರಸ್ತ್ರೀ ಸಹವಾಸ, ವಿವಾದ ಸೇರಿದಂತೆ ಶೇನ್ ವಾರ್ನ್ ಅವರ ಬದುಕಿನ ಎಲ್ಲ ವಿವರಗಳನ್ನೂ ಆ ಸಿನಿಮಾ ಒಳಗೊಂಡಿರಬೇಕು ಎಂದು ಪ್ಲ್ಯಾನ್ ಮಾಡಲಾಗಿತ್ತು. ಆದರೆ ಆ ಕೆಲಸ ಕೈಗೂಡುವುದಕ್ಕೂ ಮುನ್ನವೇ ಶೇನ್ ವಾರ್ನ್ ವಿಧಿವಶರಾಗಿದ್ದಾರೆ. ಅವರ ನಿಧನಕ್ಕೆ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದ್ದಾರೆ. ಶಿಲ್ಪಾ ಶೆಟ್ಟಿ, ಅಜಯ್ ದೇವಗನ್, ಅಕ್ಷಯ್ ಕಮಾರ್, ವರುಣ್ ಧವನ್, ರಣವೀರ್ ಸಿಂಗ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಶೇನ್ ವಾರ್ನ್ಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಇದನ್ನೂ ಓದಿ:
Shane Warne Passes Away: ಹೃದಯಾಘಾತದಿಂದ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟರ್ ಶೇನ್ ವಾರ್ನ್ ನಿಧನ
Shane Warne Passes Away: ತನ್ನ ನೆಲದಲ್ಲಿ ಈಡೇರದ ಶೇನ್ ವಾರ್ನ್ ಕನಸ್ಸನ್ನು ಭಾರತದ ಐಪಿಎಲ್ ನನಸು ಮಾಡಿತ್ತು..!