
ಸಿನಿಮಾಕ್ಕೆ ಸಂಬಂಧಿಸಿದಂತೆ ವಿಶ್ವದ ಅತ್ಯುತ್ತಮ ಪ್ರಶಸ್ತಿ ಎಂದು ಆಸ್ಕರ್ (Oscar) ಅನ್ನು ಪರಿಗಣಿಸಲಾಗಿದೆ. ಆಸ್ಕರ್ನ ಒಳರಾಜಕೀಯಗಳ ಬಗ್ಗೆ ಆಗೊಮ್ಮೆ-ಈಗೊಮ್ಮೆ ಸುದ್ದಿ ಆಗುತ್ತಿರುತ್ತದೆಯಾದರೂ ಆಸ್ಕರ್ ಎಂಬುದು ಸಿನಿಮಾಕ್ಕೆ ಸಂಬಂಧಿಸಿದ ಶ್ರೇಷ್ಠ ಪ್ರಶಸ್ತಿ ಎಂಬ ಗೌರವವನ್ನು ಪಡೆದುಕೊಂಡಿದೆ. ಭಾರತದ ಕೆಲವಾರು ಕಲಾವಿದರಿಗೆ ಈಗಾಗಲೇ ಆಸ್ಕರ್ ದೊರೆತಿದೆ. ಆದರೆ ಭಾರತದ ಯಾವೊಂದು ಸಿನಿಮಾಕ್ಕೂ ಸಹ ಆಸ್ಕರ್ ದೊರೆತಿಲ್ಲ. ಪ್ರತಿ ವರ್ಷವೂ ಭಾರತದಿಂದ ಕೆಲವಾರು ಸಿನಿಮಾಗಳು ಆಸ್ಕರ್ಗೆ ಹೋಗುತ್ತವೆ ಆದರೆ ನಿರಾಸೆ ಅನುಭವಿಸಿ ವಾಪಸ್ಸಾಗುತ್ತವೆ. ಈ ಬಾರಿ ‘ಹೋಮ್ಬೌಂಡ್’ ಸಿನಿಮಾವನ್ನು ಆಸ್ಕರ್ಗೆ ಕಳಿಸಲಾಗಿತ್ತು. ಈ ಸಿನಿಮಾ ಆಸ್ಕರ್ ನಲ್ಲಿ ಶಾರ್ಟ್ ಲಿಸ್ಟ್ ಆಗಿ ನಿರೀಕ್ಷೆ ಮೂಡಿಸಿದೆ.
ಈ ಬಾರಿ ಆಸ್ಕರ್ಸ್ಗೆ ಅಧಿಕೃತ ಆಯ್ಕೆಯಾಗಿ ಭಾರತದಿಂದ ‘ಹೋಮ್ಬೌಂಡ್’ ಸಿನಿಮಾವನ್ನು ಆಸ್ಕರ್ಗೆ ಕಳಿಸಲಾಗಿದೆ. ಸಿನಿಮಾನಲ್ಲಿ ಇಶಾನ್ ಕಟ್ಟರ್, ವಿಶಾಲ್ ಜೇಟ್ವ ಮತ್ತು ಜಾನ್ಹವಿ ಕಪೂರ್ ಅವರುಗಳು ನಟಿಸಿದ್ದಾರೆ. ಈ ಸಿನಿಮಾ ಭಾರತದ ಜಾತಿ ಪದ್ಧತಿ, ಧರ್ಮ ವೈರುದ್ಯಗಳ ಬಗ್ಗೆ ಮಾತನಾಡುತ್ತದೆ. ಸಿನಿಮಾ ಈಗಾಗಲೇ ಕೆಲವಾರು ಸಿನಿಮೋತ್ಸವಗಳಲ್ಲಿ ಭಾಗವಹಿಸಿ ಪ್ರಶಂಸೆ ಗಳಿಸಿಕೊಂಡಿದೆ. ಇದೀಗ ಆಸ್ಕರ್ ರೇಸಿನಲ್ಲಿಯೂ ಶಾರ್ಟ್ ಲಿಸ್ಟ್ ಆಗುವ ಮೂಲಕ ಗಮನ ಸೆಳೆದಿದೆ.
ಆಸ್ಕರ್ನ ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ‘ಹೋಮ್ಬಬೌಂಡ್’ ಸ್ಪರ್ಧೆಯಲ್ಲಿದ್ದು, ಇದೀಗ ಅಂತಿಮ 15 ಸಿನಿಮಾಗಳ ಪಟ್ಟಿಯಲ್ಲಿ ಆಯ್ಕೆ ಆಗಿದೆ. ಆಸ್ಕರ್ ನ ಎಲ್ಲ ವಿಭಾಗದ ಸದಸ್ಯರು ಇದೀಗ ಈ 15 ಸಿನಿಮಾಗಳನ್ನು ವೀಕ್ಷಿಸಿ ಮತ ಚಲಾಯಿಸುವ ಮೂಲಕ ಅಂತಿಮ ಐದು ಸಿನಿಮಾಗಳನ್ನು ಆಯ್ಕೆ ಮಾಡಲಾಗುತ್ತದೆ. ಆ ಐದು ಸಿನಿಮಾಗಳು ‘ಆಸ್ಕರ್ ನಾಮಿನೇಟೆಡ್’ ಎನಿಸಿಕೊಳ್ಳಲಿವೆ. ಆ ಐದರಲ್ಲಿ ಒಂದು ಸಿನಿಮಾ ಆಸ್ಕರ್ ಗೆಲ್ಲಲಿದೆ.
ಇದನ್ನೂ ಓದಿ:98ನೇ ಸಾಲಿನ ಆಸ್ಕರ್ ಸ್ಪರ್ಧೆಗೆ ಭಾರತದಿಂದ ‘ಹೋಮ್‌ಬೌಂಡ್’ ಸಿನಿಮಾ ಅಧಿಕೃತ ಆಯ್ಕೆ
‘ಹೋಮ್ಬೌಂಡ್’ ಸಿನಿಮಾ ಶಾರ್ಟ್ ಲಿಸ್ಟ್ ಏನೋ ಆಗಿದೆ. ಆದರೆ ಸಿನಿಮಾಕ್ಕೆ ಕೆಲವು ಪ್ರಬಲ ಪ್ರತಿಸ್ಪರ್ಧಿ ಸಿನಿಮಾಗಳಿವೆ. ಇರಾಖ್ನ ‘ದಿ ಪ್ರೆಸಿಡೆಂಟ್ ಕೇಕ್’, ಪ್ಯಾಲೆಸ್ತೇನಿನ ‘ಪ್ಯಾಲೆಸ್ತೇನ್ 36’, ‘ದಕ್ಷಿಣ ಕೊರಿಯಾದ ‘ನೋ ಅದರ್ ಚಾಯ್ಸ್’ ಸಿನಿಮಾಗಳು ಕಠಿಣ ಸ್ಪರ್ಧೆ ಒಡ್ಡಲಿವೆ. ಮಾತ್ರವಲ್ಲದೆ ‘ಹೋಮ್ಬೌಂಡ್’ ಸಿನಿಮಾಕ್ಕೆ ಇನ್ನು ಮುಂದಿನ ಹಾದಿ ಕ್ರಮಿಸಲು ದೊಡ್ಡ ಮಟ್ಟದ ಪ್ರಚಾರದ ಅವಶ್ಯಕತೆಯೂ ಸಹ ಇದೆ.
ಆಸ್ಕರ್ ಗೆಲ್ಲಲು ಸಿನಿಮಾಗಳ ಪರವಾಗಿ ಕ್ಯಾಂಪೇನ್ ಮಾಡಬೇಕಾಗುತ್ತದೆ. ಈ ಕ್ಯಾಂಪೇನ್ಗೆ ಭಾರಿ ಮೊತ್ತದ ಹಣ ಖರ್ಚಾಗುತ್ತದೆ. ‘ಹೋಮ್ಬೌಂಡ್’ ಸಿನಿಮಾವನ್ನು ಸುಮಾರು 30 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ಸಿನಿಮಾದ ಆಸ್ಕರ್ ಪ್ರಚಾರಕ್ಕೆ ಇದರ ದುಪ್ಪಟ್ಟು ಅಥವಾ ಮೂರು ಪಟ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಸಿನಿಮಾದ ನಿರ್ಮಾಪಕರಾದ ಕರಣ್ ಜೋಹರ್, ಅಪೂರ್ವ ಮೆಹ್ತಾ ಇನ್ನೂ ಕೆಲವರು ಖರ್ಚು ಮಾಡಲು ಮುಂದಾಗುವರೇ ಎಂಬುದನ್ನು ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ