ಕೊನೆಗೂ ‘ಸಲಾರ್’ (Salaar) ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಅಭಿಮಾನಿಗಳು ಕಾದಿದ್ದಕ್ಕೂ ಅವರು ಖುಷಿಯಾಗುಂಥಹಾ ಪವರ್ಫುಲ್ ಟ್ರೈಲರ್ ಅನ್ನೇ ಚಿತ್ರತಂಡ ನೀಡಿದೆ. ‘ಸಲಾರ್’ ಎಷ್ಟು ವೈಯಲೆಂಟ್ ಸಿನಿಮಾ ಎಂಬುದನ್ನು ಟ್ರೈಲರ್ ಸಾರಿ ಹೇಳುತ್ತಿದೆ. ಟ್ರೈಲರ್ ತುಂಬಾ ಕಪ್ಪು-ಕೆಂಪೇ ತುಂಬಿ ಹೋಗಿದೆ. 3:46 ನಿಮಿಷದ ಟ್ರೈಲರ್ನಲ್ಲಿ ಹಲವು ವಿಷಯಗಳನ್ನು ಪ್ರಶಾಂತ್ ನೀಲ್ ತೋರಿಸಿದ್ದಾರೆ. ಅಂದಹಾಗೆ ಟ್ರೈಲರ್ ಹೇಗಿದೆ? ಟ್ರೈಲರ್ನಲ್ಲಿ ಏನೇನೆಲ್ಲ ಇದೆ?
‘ಸಲಾರ್’ ಸಿನಿಮಾ ಇಬ್ಬರು ಗೆಳೆಯರ ಕತೆ, ಅವರ ಸ್ನೇಹ ಹಾಗೂ ದ್ವೇಷದ ಕತೆ ಎಂಬುದನ್ನು ಪ್ರಶಾಂತ್ ನೀಲ್ ಈ ಹಿಂದೆಯೇ ಹೇಳಿದ್ದರು. ಟ್ರೈಲರ್ನಲ್ಲಿಯೂ ಸ್ನೇಹದ ಅಂಶವೇ ಮೊದಲಿಗೆ ಕಾಣುತ್ತದೆ. ತನ್ನ ಗೆಳೆಯನಿಗೆ ಮಾತುಕೊಡುವ ದೇವ (ಪ್ರಭಾಸ್) ನೀನು ಯಾವಾಗ ಕರೆಯುತ್ತೀಯೋ ಆವಾಗ ಬರುತ್ತೀನಿ ಎಂದು ಹೇಳಿ ಹೊರಡುತ್ತಾನೆ. ಅದಾದ ಬಳಿಕ ಟ್ರೈಲರ್ನಲ್ಲಿ ಖಾನ್ಸಾರಾ ಕತೆ ತೆರೆದುಕೊಳ್ಳುತ್ತದೆ. ಸಾವಿರಾರು ವರ್ಷಗಳಿಂದಲೂ ಖಾನ್ಸಾರಾನಲ್ಲಿ ಕ್ರೂರ ಜನರು ವಾಸಿಸುತ್ತಿದ್ದಾರೆ. ಅದನ್ನು ಅವರ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ.
ಕೆಲವು ಬುಡಕಟ್ಟಿನ ಜನರ ನಡುವೆ ಅಧಿಕಾರಕ್ಕಾಗಿ, ಖಾನ್ಸಾರಾವನ್ನು ವಶಪಡಿಸಿಕೊಳ್ಳಲು ಭೀಕರ ಜಗಳ ನಡೆಯುತ್ತಲೇ ಇದೆ. ಖಾನ್ಸಾರಾದ ಪ್ರಮುಖ ಬುಡಕಟ್ಟಿನ ಒಡೆಯ ರಾಜ ಮನ್ನಾರ್, ತನ್ನ ಮಗ ವರದರಾಜ್ ಮನ್ನಾರ್ (ಪೃಥ್ವಿರಾಜ್ ಸುಕುಮಾರ್) ಅನ್ನು ನಾಯಕನನ್ನಾಗಿ ನೋಡಬೇಕೆಂದು ಆಸೆ ಪಟ್ಟು ಎಲ್ಲಿಗೋ ತೆರಳುತ್ತಾನೆ. ಆದರೆ ಕುರ್ಚಿಗಾಗಿ ಕುತಂತ್ರ ನಡೆಸುವವರು, ರಾಜ ಮನ್ನಾರ್ ಮರಳುವ ಮುನ್ನವೇ ವರದರಾಜ್ ಅನ್ನು ಕೊಲ್ಲು ಯೋಜನೆ ಹಾಕುತ್ತಾರೆ. ದಾಳಿ ನಡೆಸಿ ವರದರಾಜ್ ಅನ್ನು ಬಂಧಿಯಾಗಿಟ್ಟುಕೊಳ್ಳುತ್ತಾರೆ.
ಇದನ್ನೂ ಓದಿ:ಬಿಡುಗಡೆ ಆಯ್ತು ‘ಸಲಾರ್’ ಟ್ರೈಲರ್: ಪ್ರಶಾಂತ್ ಪ್ರಪಂಚದಲ್ಲಿ ಪ್ರಭಾಸ್ ಅಬ್ಬರ
ಖಾನ್ಸರಾದ ಕೋಟೆಯ ಕಾವಲಿಗೆ ಬುಡಕಟ್ಟಿನವರು ರಷ್ಯಾದ ಸೈನ್ಯ, ಸೆರ್ಬಿಯನ್ ಸೈನ್ಯವನ್ನು ತಂದಿಟ್ಟುಕೊಂಡಿದ್ದಾರೆ. ಆದರೆ ವರದರಾಜ್ (ಪೃಥ್ವಿರಾಜ್)ಗೆ ಇರುವ ಸೈನ್ಯ ಒಂದೇ-ಒಬ್ಬನೇ ಅವನೇ ದೇವ (ಪ್ರಭಾಸ್). ದೇವ ಖಾನ್ಸಾರ್ಗೆ ಕಾಲಿಟ್ಟಿದ್ದೇ ತಡ ಅಲ್ಲಿ ರಕ್ತಪಾತವೇ ನಡೆಯುತ್ತದೆ. ನಾನು ಕಂಡಿದ್ದೆಲ್ಲ ಬೇಕು ಎನ್ನುವ ದುರಾಸೆ ವರದರಾಜ್ದು, ನೀನು ಕೇಳಿದ್ದನ್ನೆಲ್ಲ ಕೊಡುವೆ ಎಂಬ ಪ್ರೇಮ ದೇವನದ್ದು. ಇವರಿಬ್ಬರೂ ಖಾನ್ಸಾರ್ ಅನ್ನು ಹೇಗೆ ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ, ಹೇಗೆ ಇತರೆ ಗ್ಯಾಂಗ್ಗಳನ್ನು ನಾಶ ಮಾಡುತ್ತಾರೆ, ಕೊನೆಗೆ ಇಬ್ಬರ ಸ್ನೇಹ ಏನಾಗುತ್ತದೆ ಎಂಬುದು ಕತೆ.
ಸಿನಿಮಾವನ್ನು ಭಾರಿ ಅದ್ಧೂರಿಯಾಗಿ ನಿರ್ಮಿಸಲಾಗಿದೆ. ವಿದೇಶಿ ಹೆಲಿಕಾಪ್ಟರ್ಗಳು (ಗ್ರಾಫಿಕ್ಸ್), ಭಾರಿ ವಾಹನಗಳ ಬಳಕೆ ಮಾಡಲಾಗಿದೆ. ಆಧುನಿಕ ಶಸ್ತ್ರಾಸ್ತ್ರಗಳಿವೆ, ಬಾಂಬ್ ಲಾಂಚರ್ ವಾಹನಗಳಿವೆ, ಒಟ್ಟಿನಲ್ಲಿ ಟ್ರೈಲರ್ ತುಂಬ ಗನ್ಗಳು, ಕತ್ತಿಗಳು ಝಳಪಿಸಿವೆ, ಪ್ರಭಾಸ್ ಅನ್ನು ಸಖತ್ ಮಾಸ್ ಆಗಿ ತೋರಿಸಲಾಗಿದೆ. ಕಟ್ಟುಮಸ್ತು ದೇಹದ ಪ್ರಭಾಸ್, ವೈರಿಗಳನ್ನು ತುಂಡು-ತುಂಡಾಗಿ ಕತ್ತರಿಸುತ್ತಿದ್ದಾರೆ. ಟ್ರೈಲರ್ಗೆ ನೀಡಿರುವ ಸಂಗೀತವು ಖಡಕ್ ಆಗಿದೆ. ‘ಸಲಾರ್’ ಸಿನಿಮಾ ಡಿಸೆಂಬರ್ 22ಕ್ಕೆ ತೆಲುಗು, ಕನ್ನಡ, ಮಲಯಾಳಂ, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ