ಸಂಗೀತದಿಂದಲೇ ಸಿನಿಮಾಗಳನ್ನು ಗೆಲ್ಲಿಸುತ್ತಿರುವ ಸಂಗೀತ ನಿರ್ದೇಶಕ ಅನಿರುದ್ಧ್ ಪಡೆವ ಸಂಭಾವನೆ ಎಷ್ಟು?
Anirudh Ravichander: ಪ್ರಸ್ತುತ ಚಿತ್ರರಂಗದ ಹಾಟ್ ಫೇವರೇಟ್, ತನ್ನ ಸಂಗೀತದಿಂದ ಸೋಲುವ ಸಿನಿಮಾಗಳನ್ನು ಗೆಲ್ಲಿಸುತ್ತಿರುವ 33 ವರ್ಷದ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸಂಭಾವನೆ ಎಷ್ಟು? ಪ್ರತಿ ಸಿನಿಮಾಕ್ಕೆ ಎಷ್ಟು ಹಣ ಪಡೆಯುತ್ತಾರೆ? ಇಲ್ಲಿದೆ ಮಾಹಿತಿ.
ಮೂರು ನಾಲ್ಕು ಜನ ಕನ್ನಡದ ಸಂಗೀತ ನಿರ್ದೇಶಕರನ್ನು ಒಂದೆಡೆ ಸೇರಿಸಿ ಸಂದರ್ಶನವೊಂದನ್ನು ಯೂಟ್ಯೂಬ್ ಚಾನೆಲ್ ಒಂದು ಮಾಡಿತ್ತು, ಆ ಸಂದರ್ಶನದಲ್ಲಿ ಕನ್ನಡದ ಯುವ ಸಂಗೀತ ನಿರ್ದೇಶಕರೊಬ್ಬರು ಮಾತನಾಡುತ್ತಾ ದೂರೊಂದನ್ನು ಹೇಳಿದ್ದರು, ‘ಕೆಟ್ಟ ಸೀನ್ ಇದ್ದರೂ ಸಹ ಸಂಗೀತದಿಂದ ಅದನ್ನು ಮೇಲಕ್ಕೆ ಎತ್ತಬೇಕು’ ಎಂದು ನಿರ್ದೇಶಕರು ಹೇಳುತ್ತಾರೆ, ಅದು ಹೇಗೆ ಕೆಟ್ಟ ಸೀನ್ ಅನ್ನು ಮ್ಯೂಸಿಕ್ನಿಂದ ಮೇಲಕ್ಕೆ ಎತ್ತುವುದು, ಅದೆಲ್ಲ ಸಾಧ್ಯವೇ ಇಲ್ಲ. ಅವರು ಸರಿಯಾಗಿ ಸಿನಿಮಾ ತೆಗೆಯಬೇಕು ಎಂದಿದ್ದರು. ಆ ಯುವ ಸಂಗೀತ ನಿರ್ದೇಶಕನ ಮಾತಿಗೆ ಉಳಿದ ಸಂಗೀತ ನಿರ್ದೇಶಕರು ಹೂಗುಟ್ಟಿದ್ದರು. ಹೀಗೆ ಹೇಳಿದ ಕನ್ನಡದ ಆ ಯುವ ಸಂಗೀತ ನಿರ್ದೇಶಕನಿಗೆ ನೆರೆಯ ತಮಿಳು ಚಿತ್ರರಂಗದ ಯುವ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಬಗ್ಗೆ ಗೊತ್ತಿಲ್ಲವೆಂದೆನಿಸುತ್ತದೆ.
ಅನಿರುದ್ಧ್ ರವಿಚಂದರ್ ಸದ್ಯಕ್ಕೆ ಸಿನಿಮಾ ಕ್ಷೇತ್ರದ ಹಾಟ್ ಫೇವರೇಟ್. ಈ ಹಿಂದೆ ಎಆರ್ ರೆಹಮಾನ್ಗಾಗಿ ಹೇಗೆ ನಿರ್ದೇಶಕ, ನಿರ್ಮಾಪಕರು ತಿಂಗಳುಗಳ ಗಟ್ಟಲೆ ಕಾಯುತ್ತಿದ್ದರೋ ಹಾಗೆ ಈಗ ಅನಿರುದ್ಧ್ ರವಿಚಂದರ್ ಬಗ್ಗೆ ಕಾಯುವಂತಾಗಿದೆ. ಅದಕ್ಕೆ ಮುಖ್ಯ ಕಾರಣವೆಂದರೆ ಫ್ಲಾಪ್ ಆಗಬಹುದಾದ ಸಿನಿಮಾವನ್ನು ಸಹ ಸಂಗೀತದಿಂದಲೇ ಮೇಲಕ್ಕೆತ್ತುವ ಅನಿರುದ್ಧ್ರ ಶಕ್ತಿ.
ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು, ಆ ಸಿನಿಮಾದ ಸಕ್ಸಸ್ಮೀಟ್ನಲ್ಲಿ ಮಾತನಾಡಿದ್ದ ರಜನೀಕಾಂತ್, ‘ಜೈಲರ್’ ಸಿನಿಮಾ ಡಬ್ಬಿಂಗ್ ಮಾಡುವಾಗ ನೋಡಿದ್ದೆ ಸಾಧಾರಣವಾದ ಸಿನಿಮಾ ಅನಿಸಿತು. ಆದರೆ ಅನಿರುದ್ಧ್ ರವಿಚಂದರ್ ತನ್ನ ಸಂಗೀತದಿಂದ ಸಿನಿಮಾವನ್ನು ದೊಡ್ಡ ಹಿಟ್ ಮಾಡಿದ ಎಂದು ನೇರವಾಗಿ ಹೇಳಿದ್ದರು. ಸಿನಿಮಾ ನೋಡಿದವರಿಗೆ ಅದು ನಿಜವೂ ಹೌದೆಂದು ಗೊತ್ತೆ ಇರುತ್ತದೆ. ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾದ ಕತೆಯೂ ಅದೇ. ಕಮಲ್ ಹಾಸನ್ರ ‘ವಿಕ್ರಂ’ ಸಿನಿಮಾಕ್ಕೆ ಅನಿರುದ್ಧ್ ಸೃಷ್ಟಿಸಿದ ಥೀಮ್ ಮ್ಯೂಸಿಕ್, ಕೊನೆಯಲ್ಲಿ ಸೂರ್ಯ ಎಂಟ್ರಿಯಾದಾಗ ಕೊಟ್ಟ ಸಂಗೀತ ಸಿನಿಮಾ ಅಷ್ಟು ದೊಡ್ಡ ಹಿಟ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂಬುದನ್ನು ಅಲ್ಲಗಳೆಯುವಂತೆಯೇ ಇಲ್ಲ.
ಇದನ್ನೂ ಓದಿ:ಗೌರಿ-ಗಣೇಶ ಹಬ್ಬದ ಸ್ಪೆಷಲ್; ನಟಿ ಸಂಗೀತಾ ಶೃಂಗೇರಿ ಮಿಂಚುತ್ತಿರುವುದು ಹೀಗೆ..
ಇದೀಗ ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಬಹುತೇಕ ಋಣಾತ್ಮಕ ವಿಮರ್ಶೆಗಳೇ ಕೇಳಿ ಬರುತ್ತಿವೆ. ಆದರೆ ಸಿನಿಮಾ ನೋಡಿದವರು ಹೇಳುತ್ತಿರುವುದು ಎರಡೇ ಮಾತು, ಒಂದು ಜೂ ಎನ್ಟಿಆರ್ ಎರಡನೇಯದ್ದು ಅನಿರುದ್ಧ್ ಸಂಗೀತ. ಇವೆರಡರ ಹೊರತಾಗಿ ಸಿನಿಮಾದಲ್ಲಿ ಏನೂ ಇಲ್ಲ ಎನ್ನುತ್ತಿದ್ದಾರೆ. ‘ದೇವರ’ ನಿರ್ದೇಶಕ ಕೊರಟಾಲ ಶಿವ ಮುಳುಗಿಸಿದ್ದ ಹಡಗನ್ನು ಅನಿರುದ್ಧ್ ತನ್ನ ಸಂಗೀತದಿಂದ ತೇಲಿಸಿದರು ಎಂದು ಸಾಮಾಜಿಕ ಜಾಲತಾಣದಲ್ಲಿ ಮೀಮ್ಗಳು ಸಹ ಹರಿದಾಡುತ್ತಿವೆ.
ಸಂಗೀತದಿಂದ ಸಿನಿಮಾಕ್ಕೆ ಹೊಸ ಶಕ್ತಿ ತುಂಬುತ್ತಿರುವ 33 ವರ್ಷದ ಅನಿರುದ್ಧ್ ರವಿಚಂದರ್ ಈಗ ಇಡೀ ಭಾರತದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆವ ಸಂಗೀತ ನಿರ್ದೇಶಕ. ಎ.ಆರ್ ರೆಹಮಾನ್ ಅವರಿಗಿಂತಲೂ ಹೆಚ್ಚು ಸಂಭಾವನೆಯನ್ನು ಅನಿರುದ್ಧ್ ಪಡೆಯುತ್ತಾರಂತೆ. ಅನಿರುದ್ಧ್ ಪ್ರತಿ ಸಿನಿಮಾಕ್ಕೆ 12 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತದೆ. ಇನ್ನು ಎಆರ್ ರೆಹಮಾನ್ ಪ್ರತಿ ಸಿನಿಮಾಕ್ಕೆ ಹತ್ತು ಕೋಟಿ ಸಂಭಾವನೆ ಪಡೆಯುತ್ತಾರೆ. ತೆಲುಗಿನ ಟಾಪ್ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಎಂಟು ಕೋಟಿ ಪಡೆಯುತ್ತಾರೆ, ಕೀರವಾಣಿ ಸುಮಾರು 5 ರಿಂದ 6 ಕೋಟಿ ಸಂಭಾವನೆ ಪಡೆಯುತ್ತಾರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ