ಭಾರತದ ಸಿನಿಮಾಗಳು ಈಗ ಹಾಲಿವುಡ್ ಗುಣಮಟ್ಟದಲ್ಲಿ ಮೂಡಿಬರುತ್ತಿವೆ. ರಾಜಮೌಳಿ, ಪ್ರಶಾಂತ್ ನೀಲ್ (Prashanth Neel), ಶಂಕರ್ ಅವರಂತಹ ನಿರ್ದೇಶಕರು ಅಂಥ ಸಾಧನೆ ಮಾಡಿ ತೋರಿಸಿದ್ದಾರೆ. ಆ ಕಾರಣದಿಂದ ವಿದೇಶದಲ್ಲಿ ಭಾರತದ ಸಿನಿಮಾಗಳಿಗೆ ಭಾರಿ ಬೇಡಿಕೆ ಬಂದಿದೆ. ಅದರಲ್ಲೂ ಸೌತ್ ಸಿನಿಮಾಗಳು ಸಖತ್ ಸೌಂಡು ಮಾಡುತ್ತಿವೆ. ಕಳೆದ ವರ್ಷ ‘ಕೆಜಿಎಫ್ 2’ ಚಿತ್ರ ಮೋಡಿ ಮಾಡಿತ್ತು. ಈಗ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ‘ಸಲಾರ್’ (Salaar Movie) ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ವಿದೇಶದಲ್ಲಿ ಈ ಚಿತ್ರವನ್ನು ವಿತರಣೆ ಮಾಡಲು ದೊಡ್ಡ ದೊಡ್ಡ ಕಂಪನಿಗಳು ಆಸಕ್ತಿ ತೋರಿಸಿವೆ. ಬರೋಬ್ಬರಿ 90ರಿಂದ 100 ಕೋಟಿ ರೂಪಾಯಿಗೆ ವಿತರಣೆ ಹಕ್ಕು ಸೇಲ್ ಆಗಿದೆ ಎಂದು ಹೇಳಲಾಗುತ್ತಿದೆ.
2022ರಲ್ಲಿ ‘ಆರ್ಆರ್ಆರ್’ ಸಿನಿಮಾದ ವಿದೇಶಿ ವಿತರಣೆ ಹಕ್ಕು 78 ಕೋಟಿ ರೂಪಾಯಿಗೆ ಮಾರಾಟ ಆಗಿತ್ತು. ಅದನ್ನು ಮೀರಿಸುವ ರೀತಿಯಲ್ಲಿ ಈಗ ‘ಸಲಾರ್’ ಚಿತ್ರಕ್ಕೆ ಬೇಡಿಕೆ ಬಂದಿದೆ. ಇಷ್ಟು ಬೇಡಿಕೆ ಸೃಷ್ಟಿ ಆಗಲು ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಅವರ ಕಾಂಬಿನೇಷನ್ ಕಾರಣ ಎಂಬುದನ್ನು ಹೊಸದಾಗಿ ಹೇಳಬೇಕಾಗಿದ್ದಿಲ್ಲ. ವಿದೇಶಿ ಚಿತ್ರಮಂದಿರಗಳಲ್ಲಿ ‘ಸಲಾರ್’ ಧೂಳೆಬ್ಬಿಸುವ ಸೂಚನೆ ಸಿಕ್ಕಿದೆ.
‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಮೂಲಕ ‘ಸಲಾರ್’ ಚಿತ್ರ ಸಿದ್ಧವಾಗುತ್ತಿದೆ. ಈ ಸಿನಿಮಾದ ಮೇಲೆ ಬಹುಕೋಟಿ ರೂಪಾಯಿ ಸುರಿಯಲಾಗಿದೆ. ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾದಲ್ಲಿ ಪ್ರಭಾಸ್ ಜೊತೆ ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್ ಮುಂತಾದ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ.
‘ಸಲಾರ್’ ಸಿನಿಮಾಗೆ ಸೀಕ್ವೆಲ್ ಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸಲಿದೆ ಈ ವಿಚಾರ
ಬಹುತೇಕ ‘ಕೆಜಿಎಫ್: ಚಾಪ್ಟರ್ 2’ ತಂಡದಲ್ಲಿ ಕೆಲಸ ಮಾಡಿದ್ದ ತಂತ್ರಜ್ಞರೇ ‘ಸಲಾರ್’ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ರವಿ ಬಸ್ರೂರು ಅವರ ಸಂಗೀತ, ಭುವನ್ ಗೌಡ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸೆಪ್ಟೆಂಬರ್ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ‘ಸಲಾರ್’ ವಿತರಣೆ ಹಕ್ಕುಗಳಿಗೆ ಬರೋಬ್ಬರಿ 200 ಕೋಟಿ ರೂಪಾಯಿ ಡಿಮ್ಯಾಂಡ್ ಇದೆ ಎಂದು ಹೇಳಲಾಗುತ್ತಿದೆ. ಈ ವಿಚಾರಗಳ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಏನನ್ನೂ ಬಹಿರಂಗಪಡಿಸಿಲ್ಲ. ಆದರೆ ಟಾಲಿವುಡ್ ಅಂಗಳದಲ್ಲಿ ಈ ಸುದ್ದಿ ಹರಿದಾಡುತ್ತಿದೆ.
ಪ್ರಭಾಸ್ ವರ್ಸಸ್ ಪ್ರಭಾಸ್: ‘ಸಲಾರ್’ ಚಿತ್ರದಲ್ಲಿ ಡಬಲ್ ರೋಲ್ ಮಾಡಿಸುತ್ತಾರಾ ಪ್ರಶಾಂತ್ ನೀಲ್?
ಇದಲ್ಲದೇ, ಓಂ ರಾವತ್ ನಿರ್ದೇಶನದ ‘ಆದಿಪುರುಷ್’ ಸಿನಿಮಾದಲ್ಲೂ ಪ್ರಭಾಸ್ ನಟಿಸಿದ್ದಾರೆ. ಜುಲೈ 16ರಂದು ಆ ಚಿತ್ರ ಬಿಡುಗಡೆ ಆಗಲಿದೆ. ‘ಆದಿಪುರುಷ್’ ಗೆದ್ದರೆ ಅಭಿಮಾನಿಗಳ ವಲಯದಲ್ಲಿ ಪ್ರಭಾಸ್ ಬಗ್ಗೆ ಕ್ರೇಜ್ ಹೆಚ್ಚಾಗುತ್ತದೆ. ಅದರಿಂದ ‘ಸಲಾರ್’ ಸಿನಿಮಾಗೆ ಲಾಭ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:22 am, Sun, 2 April 23