ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಸುಕುಮಾರ್ ಮಧ್ಯೆ ಕಿರಿಕ್ ಆಗಿದೆ ಎನ್ನುವ ಮಾತು ಎಲ್ಲ ಕಡೆಗಳಲ್ಲಿ ಹರಿದಾಡಿದೆ. ಈ ಕಾರಣಕ್ಕೆ ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಚಿತ್ರದ ಲುಕ್ಗೆ ಬ್ರೇಕ್ ಹಾಕಿ ವಿದೇಶಕ್ಕೆ ಹಾರಿದ್ದಾರೆ ಎಂದು ವರದಿ ಆಗಿತ್ತು. ಆದರೆ, ಇದರಲ್ಲಿ ನಿಜವಿಲ್ಲ ಎಂದು ತಂಡದ ಮೂಲಗಳು ಹೇಳಿದ್ದವು. ಈಗ ಅಲ್ಲು ಅರ್ಜುನ್ ಅವರ ಆಪ್ತ ಗೆಳೆಯ ಹಾಗೂ ಗೀತಾ ಆರ್ಟ್ಸ್ನ ನಿರ್ಮಾಪಕರಲ್ಲಿ ಒಬ್ಬರಾದ ಬನ್ನಿ ವಾಸು ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಪುಷ್ಪ 2’ ಸಿನಿಮಾದ ಕೆಲಸಗಳು ವಿಳಂಬ ಆಗುತ್ತಿರುವುದಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
‘ಪುಷ್ಪ 2’ ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗಬೇಕಿತ್ತು. ಆದರೆ, ತಂಡದವರು ಸಿನಿಮಾದ ಬಿಡುಗಡೆ ದಿನಾಂಕವನ್ನು ಡಿಸೆಂಬರ್ಗೆ ಮುಂದೂಡಿದರು. ಹೀಗೆಕೆ ಎನ್ನುವ ಪ್ರಶ್ನೆ ಮೂಡಿತ್ತು. ಈ ಮಧ್ಯೆ ಅಲ್ಲು ಅರ್ಜುನ್ ಅವರು ಯುರೋಪ್ ಪ್ರವಾಸ ತೆರಳಿದರೆ, ಸುಕುಮಾರ್ ಅಮೆರಿಕಕ್ಕೆ ಹಾರಿದರು. ಈ ಎಲ್ಲಾ ಕಾರಣದಿಂದ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಆದರೆ, ಇದರಲ್ಲಿ ಸತ್ಯ ಇಲ್ಲ ಎನ್ನುವ ಸ್ಪಷ್ಟನೆ ಸಿಕ್ಕಿದೆ.
ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದ ಬನ್ನಿ ವಾಸು ಅವರು, ‘ನಾವು ಈ ರೀತಿಯ ವದಂತಿಗಳನ್ನು ಕೇಳಿ ನಕ್ಕಿದ್ದೇವೆ. ಎಲ್ಲರೂ ತಮಗೆ ಬೇಕಾದ ರೀತಿಯಲ್ಲಿ ಬರೆದುಕೊಳ್ಳುತ್ತಿದ್ದಾರೆ. ನಡೆದ ಘಟನೆಯನ್ನು ಸಂಪೂರ್ಣವಾಗಿ ನೆಗೆಟಿವ್ ರೀತಿಯಲ್ಲಿ ಬಿಂಬಿಸಲಾಗಿದೆ’ ಎಂದು ಬನ್ನಿ ವಾಸು ಹೇಳಿದ್ದಾರೆ. ಈ ಮೂಲಕ ವಿವಾದಗಳಿಗೆ ತೆರೆ ಎಳೆದಿದ್ದಾರೆ.
‘ಪುಷ್ಪ 2 ಸಿನಿಮಾದ 15 ದಿನಗಳ ಕೆಲಸ ಮಾತ್ರ ಬಾಕಿ ಇದೆ. ಅದರಲ್ಲಿ ಕ್ಲೈಮ್ಯಾಕ್ಸ್ ಹಾಗೂ ಸಾಂಗ್ ಇದೆ. ಸಿನಿಮಾ ಶೂಟಿಂಗ್ ಪೂರ್ಣಗೊಳಿಸಲು ಫಹಾದ್ ಫಾಸಿಲ್ ಡೇಟ್ಸ್ನ ಅಗತ್ಯ ಇದೆ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಸಿನಿಮಾ ವಿಳಂಬಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.
ಇದನ್ನೂ ಓದಿ: ‘ಪುಷ್ಪ 2’ ಬಿಡುಗಡೆ ಸಂದರ್ಭದಲ್ಲೇ ಬರಲಿದೆ ‘ಗೇಮ್ ಚೇಂಜರ್’; ರಾಮ್-ಅಲ್ಲು ಮುಖಾಮುಖಿ?
‘ಸುಕುಮಾರ್ ಅವರು ಈ ಚಿತ್ರದ ಶೂಟಿಂಗ್ ಇನ್ನೂ ಆರು ತಿಂಗಳು ಶೂಟ್ ಮಾಡಬೇಕು ಎಂದರೆ ಅಲ್ಲು ಅರ್ಜುನ್ ಇದಕ್ಕೆ ಒಪ್ಪಿಕೊಳ್ಳುತ್ತಾರೆ. ಇಬ್ಬರ ಮಧ್ಯೆ ಅಷ್ಟು ಒಳ್ಳೆಯ ಬಾಂಡಿಗೆ ಇದೆ. ಅದನ್ನು ಈಗ ಪ್ರಶ್ನೆ ಮಾಡಬೇಡಿ’ ಎಂದಿದ್ದಾರೆ ವಾಸು. ಈ ಮೂಲಕ ಎಲ್ಲಾ ವಿವಾದಗಳಿಗೆ ತೆರೆ ಎಳೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:46 am, Sat, 20 July 24