ಚಿ. ಉದಯಶಂಕರ್ | Chi. Udayashankar: ಎರಡೇ ವರ್ಷದಲ್ಲಿ ಉದಯಶಂಕರ್ ಇಪ್ಪತ್ತು ಚಿತ್ರಗಳಿಗೆ ಸಂಭಾಷಣೆ ಬರೆದರು. ಭಾವನಾರಾಯಣ ಅವರಿಗೆ ಎರಡೇ ಗಂಟೆಯಲ್ಲಿ “ಬೆಂಗಳೂರು ಮೈಲ್” ಚಿತ್ರದ ಸಂಭಾಷಣೆ ಬರೆದರು. ಭಾವನಾರಾಯಣ, ಸಂತೋಷದಿಂದ ಸಿಹಿ ಎಂದು ಇಷ್ಟಪಡುತ್ತಿದ್ದ ಉದಯಶಂಕರ್ ಅವರಿಗೆ ಬೋನಸ್ ಸಂಭಾವನೆ ಎಂದು ಒಂದು ಕೆ.ಜಿ ಮೈಸೂರು ಪಾಕ್ ತರಿಸಿದರು. ಹತ್ತೇ ನಿಮಿಷದಲ್ಲಿ ಉದಯಶಂಕರ್ ಇಡೀ ಪ್ಯಾಕ್ ಖಾಲಿ ಮಾಡಿದರು. ಇದಾದ ಮರುದಿನವೇ ಅವರಿಗೆ ಡಯಾಬಿಟೀಸ್ ಇರುವುದು ಗೊತ್ತಾಯಿತು. ಆಗ ಅವರಿಗೆ ಕೇವಲ 34ವರ್ಷ. ಆಗಲೇ ದಿನಕ್ಕೆ ಹದಿನೆಂಟು ಗಂಟೆ ದುಡಿಯುತ್ತಿದ್ದ ಅವರನ್ನು ಒಂದೊಂದಾಗಿ ಖಾಯಿಲೆಗಳು ಸೇರಲಾರಂಭಿಸಿದವು. ಕೊನೆಯಲ್ಲಿ ಹದಿನೈದು ಮಾತ್ರೆಗಳನ್ನು ನುಂಗುವ ಸ್ಥಿತಿಗೆ ಬಂದರು. ಈ ನಡುವೆಯೇ 1970-80ರ ದಶಕವೆಂದರೆ ‘ಉದಯಶಂಕರ್ ದಶಕ’ ಎಂಬಂತೆ ಬೇಡಿಕೆಯ ಬರಹಗಾರರಾದರು. 1982ರಲ್ಲಿ ಬಿಡುಗಡೆಯಾಗಿದ್ದು 65 ಚಿತ್ರಗಳು. ಅವುಗಳ ಪೈಕಿ 39 ಚಿತ್ರಗಳಿಗೆ ಅವರು ಸಂಭಾಷಣೆ ಬರೆದಿದ್ದರು. ಇದು ಭಾರತೀಯ ಚಿತ್ರರಂಗದಲ್ಲಿ ಇಂದಿಗೂ ದಾಖಲೆಯಾಗಿ ಉಳಿದಿದೆ.
ಎನ್. ಎಸ್. ಶ್ರೀಧರ ಮೂರ್ತಿ, ಹಿರಿಯ ಪತ್ರಕರ್ತ
*
(ಭಾಗ 3)
ಶಿವಾಜಿ ಗಣೇಶನ್ ಅವರಿಗಾಗಿ ತಮಿಳು ಬರಹಗಾರ ಜಿ. ಬಾಲಸುಬ್ರಹ್ಮಣ್ಯ ಬರೆದಿದ್ದ ಕಥೆ ಉದಯಶಂಕರ್ ಅವರಿಗೆ ಸಿಕ್ಕಿತು. ಅದನ್ನು ಎಲ್ಲರೂ ಚಿತ್ರವಾಗಲು ಅನರ್ಹ ಎಂದು ನಿರಾಕರಿಸಿದ್ದರು. ಆದರೆ ಉದಯಶಂಕರ್ ಅವರಿಗೆ ಅದು ರಾಜ್ಕುಮಾರ್ ಅವರಿಗೆ ಹೊಂದಬಲ್ಲ ಕಥೆ ಎನ್ನಿಸಿತು. ಅವರ ಒತ್ತಾಯದ ಮೇರೆಗೇ ಅದು ಚಿತ್ರವಾಯಿತು. ಹೀಗೆ ಮೂಡಿ ಬಂದ ‘ಕಸ್ತೂರಿ ನಿವಾಸ” ಸರ್ವಕಾಲೀನ ಶ್ರೇಷ್ಠ ಚಿತ್ರ ಎನ್ನಿಸಿಕೊಂಡಿತು. ಈ ಘಟನೆ ನಂತರ ರಾಜ್ಕುಮಾರ್, ಉದಯಶಂಕರ್ ಅವರನ್ನು ಕಥೆಯ ವಿಷಯದಲ್ಲಿ ಸಂಪೂರ್ಣವಾಗಿ ಅವಲಂಬಿಸಲು ಆರಂಭಿಸಿದರು. “ನ್ಯಾಯವೇ ದೇವರು”, “ಗಂಧದ ಗುಡಿ”, “ಶಂಕರ್ ಗುರು” “ಮಯೂರ” “ಅಪರೇಷನ್ ಡೈಮಂಡ್ ರಾಕೆಟ್” “ಹುಲಿಯ ಹಾವಿನ ಮೇವು” ಹೀಗೆ ಉದಯಶಂಕರ್ ಆಯ್ಕೆ ನಿಖರವಾಗಿರುತ್ತಿತ್ತು.
“ಸಂಪತ್ತಿಗೆ ಸವಾಲ್”ಚಿತ್ರದ ಮೂಲಕ ರಾಜ್ಕುಮಾರ್ ಅವರೊಳಗಿನ ಗಾಯಕನನ್ನು ಹೊರ ತಂದವರು ಉದಯಶಂಕರ್ ಅವರೇ. ರಾಜ್ಕುಮಾರ್ ಅವರ ಚಿತ್ರಗಳಷ್ಟೇ ಅಲ್ಲದೆ ವಿಷ್ಣುವರ್ಧನ್ ಅಭಿನಯದ “ನಾಗರ ಹಾವು”, “ಸೊಸೆ ತಂದ ಸೌಭಾಗ್ಯ” “ಸಾಹಸ ಸಿಂಹ” “ಬಯಸದೇ ಬಂದ ಭಾಗ್ಯ” ಅನಂತ್ ನಾಗ್ ಅಭಿನಯದ “ನಾರದ ವಿಜಯ” “ಬಯಲು ದಾರಿ” ಶಂಕರ್ ನಾಗ್ ಅಭಿನಯದ “ಸೀತಾರಾಮು” ಅಂಬರೀಷ್ ಅಭಿನಯದ “ಚಕ್ರವ್ಯೂಹ” ಹೀಗೆ ಎಲ್ಲಾ ಕಲಾವಿದರಿಗೂ ಸೂಪರ್ ಹಿಟ್ ಚಿತ್ರಗಳನ್ನು ಉದಯಶಂಕರ್ ನೀಡಿದ್ದರು.
ಶಿವರಾಜ್ ಕುಮಾರ್ ಅವರ “ಆನಂದ್” “ರಥ ಸಪ್ತಮಿ” “ಮನ ಮೆಚ್ಚಿದ ಹುಡುಗಿ” ಪುನೀತ್ ಅವರ “ಭಕ್ತ ಪ್ರಹ್ಲಾದ” “ಬೆಟ್ಟದ ಹೂವು” ಚಿತ್ರಗಳನ್ನೂ ಉದಯಶಂಕರ್ ರೂಪಿಸಿದ್ದರು. ರಾಘವೇಂದ್ರ ರಾಜ್ಕುಮಾರ್ ಅವರಿಗೆ ಗೆಲುವಿನ ಸಿಂಚನ ನೀಡಿದ “ನಂಜುಂಡಿ ಕಲ್ಯಾಣ” ಉದಯಶಂಕರ್ ಲೇಖನಿಯಿಂದ ಮೂಡಿ ಬಂದಿದ್ದ ಚಿತ್ರ. ದೊಡ್ಡ ಪ್ರಮಾಣದ ಯಶಸ್ಸನ್ನು ಕಂಡ ಈ ಚಿತ್ರ ಉದಯ ಶಂಕರ್ ಅವರ ಪಾಲಿಗೆ ದೊಡ್ಡ ದುರಂತವನ್ನು ತಂದಿತು. ಈ ಚಿತ್ರದ ಶತದಿನೋತ್ಸವ ಸಮಾರಂಭಕ್ಕೆ ಮದ್ರಾಸಿನಿಂದ ಹೊರಟಿದ್ದ ಉದಯಶಂಕರ್ ಅವರ ಮಗ ರವಿಶಂಕರ್ ಹೊಸಕೋಟೆ ದೊಡ್ಡ ಏರಿ ಬಳಿ ನಡೆದ ಕಾರು ಅಪಘಾತದಲ್ಲಿ ಸಾವನ್ನಪ್ಪಿದರು. ಮಗನ ಸಾವು ಉದಯಶಂಕರ್ ಅವರನ್ನು ನಡುಗಿಸಿ ಬಿಟ್ಟಿತು. ಅಲ್ಲಿಂದ ಮುಂದೆ ಅವರು ಚೇತರಿಸಿಕೊಳ್ಳಲೇ ಇಲ್ಲ. ಮುಂದೆ ಅವರು ಚಿತ್ರ ಸಾಹಿತ್ಯ ರಚಿಸಿದರೂ ಮೊದಲಿನ ಉತ್ಸಾಹ ಉಳಿದಿರಲಿಲ್ಲ.
1994ರ ಫೆಬ್ರವರಿ 18ಕ್ಕೆ ಉದಯಶಂಕರ್ ಅವರಿಗೆ ಅರವತ್ತು ವರ್ಷಗಳು ತುಂಬುತ್ತಿದ್ದವು. ಅದಕ್ಕಾಗಿ ಅವರ ರಚನೆಯ ಐದುನೂರು ಗೀತೆಗಳ ಸಂಕಲನವನ್ನು ತರುವ ಯೋಜನೆ ರೂಪುಗೊಂಡಿತು. ಅದರ ಸಂಪಾದಕತ್ವದ ಹೊಣೆಯನ್ನು ಉದಯಶಂಕರ್ ಅವರೇ ನನಗೆ ವಹಿಸಿದರು. ಹಾಡುಗಳ ಆಯ್ಕೆಯ ನಂತರ ಅದರ ಹಿಂದಿನ ಕಥೆಯನ್ನು ಉದಯಶಂಕರ್ ಹೇಳುತ್ತಿದ್ದರು. ಅದನ್ನು ನಾನು ಟಿಪ್ಪಣಿ ಮಾಡಿ ಕೊಳ್ಳುತ್ತಿದ್ದೆ. ಈ ಕೆಲಸ ಬಹಳ ಉತ್ಯಾಹದಿಂದಲೇ ಸಾಗುತ್ತಿತ್ತು. 1993ರ ಫೆಬ್ರವರಿ 18ರಂದು ತಮ್ಮ ಹುಟ್ಟುಹಬ್ಬವನ್ನು ಉದಯಶಂಕರ್ ಚೆನ್ನೈನಲ್ಲಿಯೇ ಆಚರಿಸಿಕೊಂಡಿದ್ದರು. ಫೆಬ್ರವರಿ 19ರಂದು ಬೆಂಗಳೂರಿಗೆ ಬಂದವರು ಪೂರ್ತಿ ದಿನವನ್ನು ನನ್ನ ಜೊತೆಗೇ ಕಳೆದರು. ಅವತ್ತು ಒಂದೇ ದಿನದಲ್ಲಿ ಸುಮಾರು ನೂರು ಹಾಡುಗಳ ಕುರಿತು ಚರ್ಚೆ ಟಿಪ್ಪಣಿಗಳು ನಡೆದವು. ‘ಕಸ್ತೂರಿ ನಿವಾಸ’ದ ಹಾಡುಗಳ ಚರ್ಚೆ ನಡೆಯಿತು. ಆಡಿಸಿ ನೋಡು ಕುರಿತು ಸುದೀರ್ಘವಾಗಿಯೇ ಉದಯಶಂಕರ್ ಮಾತನಾಡಿದರು. ನಾನು ‘ಆಡಿಸಿದಾತ ಬೇಸರ ಮೂಡಿ’ ಕೂಡ ಸಂಕಲನದಲ್ಲಿ ಇರಲಿ ಸಾರ್’ ಎಂದೆ ಉದಯಶಂಕರ್‌ಗೆ ಏನನ್ನಿಸಿತೋ ‘ಬೇಡಪ್ಪ, ನಾನು ಸತ್ತಾಗ ಬರೆಯೋ ಹೆಡ್ಡಿಂಗ್ ಅದು’ ಎಂದರು. ನನಗೆ ಕಸಿವಿಸಿ ಎನ್ನಿಸಿತು. ಬೆಳಗ್ಗಿನಿಂದ ಉತ್ಸಾಹದ ಬಲೂನಿಗೆ ಸೂಜಿ ಚುಚ್ಚಿದಂತಾಯಿತು. ಅವರೇ ಮಾತು ಬದಲಾಯಿಸಿದರೂ ಮೊದಲಿನ ಉತ್ಸಾಹ ಇರಲಿಲ್ಲ.
ವಿಪರ್ಯಾಸವೆಂದರೆ ಉದಯಶಂಕರ್ ಅವರ ಜೊತೆಗಿನ ಅದೇ ನನ್ನ ಕೊನೆಯ ಭೇಟಿಯಾಯಿತು. ಮುಂದೆ ಹಲವು ಕಹಿ ಘಟನೆಗಳು ನಡೆದು ಹೋದವು. 1993ರ ಜುಲೈ 2ರಂದು ಸಂಜೆ ಉದಯಶಂಕರ್ ಅವರ ಆರೋಗ್ಯದ ಕುರಿತು ಯೋಚಿಸುತ್ತಿದ್ದ ನನಗೆ ಕಂಡಿದ್ದು ಸಂಜೆ ದಿನಪತ್ರಿಕೆಯ ಹೆಡ್ಡಿಂಗ್ ‘ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ’
(ಮುಗಿಯಿತು)
ಭಾಗ 1 : Chi. Udayashankar‘s Birth Anniversary: ಡಾ. ರಾಜಕುಮಾರರ 62 ಸಿನೆಮಾಗಳಿಗೆ ಸಂಭಾಷಣೆ ಬರೆದ ಚಿತ್ರರಂಗದ ಚಿರಂಜೀವಿ
ಎಲ್ಲ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/indian-lyricist-chi-udayashankar-birth-anniversary
Published On - 1:56 pm, Fri, 18 February 22