
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ತಿರುಗೇಟು ನೀಡಲು ಇರಾನ್, ತೆಲುಗು ಚಿತ್ರರಂಗದ ಜನಪ್ರಿಯ ನಟ ನಂದಮೂರಿ ಬಾಲಕೃಷ್ಣ ಅವರ ಸಿನಿಮಾದ ಆ್ಯಕ್ಷನ್ ದೃಶ್ಯವನ್ನು ಬಳಸಿಕೊಂಡು ವ್ಯಂಗ್ಯ ಮಾಡಿದೆ. ಜಿಂಬಾಬ್ವೆಯಲ್ಲಿರುವ ಇರಾನ್ ರಾಯಭಾರ ಕಚೇರಿಯು ತನ್ನ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಬಾಲಕೃಷ್ಣ ಅಭಿನಯದ 2023ರ ಸೂಪರ್ ಹಿಟ್ ಚಿತ್ರ ‘ಭಗವಂತ್ ಕೇಸರಿ’ ಸಿನಿಮಾ 58 ಸೆಕೆಂಡುಗಳ ಆ್ಯಕ್ಷನ್ ಕ್ಲಿಪ್ ಒಂದನ್ನು ಹಂಚಿಕೊಂಡಿದೆ.
ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಟ್ರಂಪ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್, ‘ಇರಾನ್ ಅನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ ಎಂದು ಟ್ರಂಪ್ ಮಾತನಾಡುತ್ತಿದ್ದಾರೆ. ಆದರೆ ಇರಾನ್ ರಕ್ಷಣೆಯಿಲ್ಲದೆ ಕೈಕಟ್ಟಿ ಕುಳಿತಿಲ್ಲ ಎಂಬುದು ಅವರಿಗೆ ತಿಳಿದಿದೆ. ಇತ್ತೀಚೆಗೆ ಅವರು ಹಾಲಿವುಡ್ ಬಿಟ್ಟು ಬಾಲಿವುಡ್ ಸಿನಿಮಾಗಳನ್ನು ನೋಡಲು ಪ್ರಾರಂಭಿಸಿದ್ದಾರೆ ಎಂಬ ಮಾಹಿತಿ ನಮಗಿದೆ’ ಎಂದು ಟ್ರೋಲ್ ಮಾಡುವ ಶೈಲಿಯಲ್ಲಿ ಬರೆದುಕೊಂಡಿದೆ.
ಹಂಚಿಕೊಳ್ಳಲಾದ ವಿಡಿಯೋದಲ್ಲಿ ನಂದಮೂರಿ ಬಾಲಕೃಷ್ಣ ತಮ್ಮ ಸುತ್ತಲೂ ಬಂದೂಕು ಹಿಡಿದು ಸುತ್ತುವರಿದ ಶತ್ರುಗಳಿಂದ ರಕ್ಷಿಸಿಕೊಳ್ಳಲು ಗೇಟ್‌ನ ಶೀಲ್ಡ್ ಬಳಸಿ ಹೋರಾಡುವ ತೀವ್ರ ಆ್ಯಕ್ಷನ್ ದೃಶ್ಯವಿದೆ. ಇರಾನ್ ತನ್ನ ದೇಶ ಸ್ವಯಂರಕ್ಷಣೆಗೆ ಸಿದ್ಧವಾಗಿದೆ ಎಂಬುದನ್ನು ಸೂಚಿಸಲು ಈ ಸನ್ನಿವೇಶವನ್ನು ಬಳಸಿಕೊಂಡಿದೆ.
Trump talks about annihilating Iran.
But he knows Iran is not defenseless.
Since we informed they have recently been watching Bollywood instead of Hollywood. pic.twitter.com/v6Le8zkH5X
— Iran Embassy in Zimbabwe (@IRANinZIMBABWE) September 23, 2026
ಇರಾನ್ ರಾಯಭಾರ ಕಚೇರಿ ತನ್ನ ಪೋಸ್ಟ್‌ನಲ್ಲಿ ‘ಬಾಲಿವುಡ್’ ಎಂದು ಉಲ್ಲೇಖಿಸಿತ್ತಾದರೂ, ನೆಟ್ಟಿಗರು ತಕ್ಷಣವೇ ಇದು ಹಿಂದಿ ಚಿತ್ರರಂಗವಲ್ಲ (ಬಾಲಿವುಡ್), ಬದಲಿಗೆ ತೆಲುಗು ಚಿತ್ರರಂಗದ (ಟಾಲಿವುಡ್) ಸಿನಿಮಾ ಎಂದು ತಿದ್ದುಪಡಿ ಮಾಡಿದ್ದಾರೆ.
ಇದನ್ನೂ ಓದಿ: ಅರಬ್ ದೇಶಗಳ ಸಂಘರ್ಷಕ್ಕೆ ಇರಾನ್ ಕಾರಣ; ವಿಶ್ವಸಂಸ್ಥೆ ಮಹಾಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಗಂಭೀರ ಆರೋಪ
ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ಇರಾನ್ ವಿಷಯದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಹೇಳಿದ್ದರು. ‘ಇರಾನ್ ಚೇತರಿಸಿಕೊಳ್ಳಲು ಒಪ್ಪಂದ ಮಾಡಿಕೊಳ್ಳಬೇಕೋ ಅಥವಾ ಇಸ್ಲಾಮಿಕ್ ರಿಪಬ್ಲಿಕ್ ಅನ್ನು ಸಂಪೂರ್ಣವಾಗಿ ಧ್ವಂಸ ಮಾಡಬೇಕೋ?’ ಎಂದು ಟ್ರಂಪ್ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಯಾಗಿ ಇರಾನ್ ಈ ಪಾಪ್-ಕಲ್ಚರ್ ಶೈಲಿಯ ತಿರುಗೇಟು ನೀಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.